
ಭಾರಿ ನಿರೀಕ್ಷೆ ಸೃಷ್ಟಿ ಮಾಡಿರುವ ‘ಪುಷ್ಪ 2’ ಸಿನಿಮಾ ಬಿಡುಗಡೆ ಸಜ್ಜಾಗುತ್ತಿದೆ. ಈ ಸಿನಿಮಾ ಮೂಲಕ ಅಲ್ಲು ಅರ್ಜುನ್ ಅವರು ದೊಡ್ಡ ದಾಖಲೆ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಈವರೆಗೂ ಚಿತ್ರತಂಡದವರು ಬಿಡುಗಡೆ ಮಾಡಿದ ಎಲ್ಲ ಕಾಂಟೆಂಟ್ಗೆ ಜನರಿಂದ ಸಖತ್ ಪ್ರತಿಕ್ರಿಯೆ ಸಿಕ್ಕಿದೆ. ಈಗ ಟ್ರೇಲರ್ ನೋಡುವ ಸಮಯ ಹತ್ತಿರ ಆಗಿದೆ. ಇಷ್ಟು ದಿನಗಳ ಕಾಲ ಟ್ರೇಲರ್ ಬಿಡುಗಡೆ ದಿನಾಂಕದ ಬಗ್ಗೆ ಅಂತೆ-ಕಂತೆಗಳು ಕೇಳಿಬಂದಿದ್ದವು. ನವೆಂಬರ್ 15ಕ್ಕೆ ಟ್ರೇಲರ್ ಅನಾವರಣ ಆಗಲಿದೆ ಎಂದು ಕೆಲವರು ಗಾಸಿಪ್ ಹಬ್ಬಿದಿದ್ದರು. ಆದರೆ ಈಗ ಸ್ವತಃ ಅಲ್ಲು ಅರ್ಜುನ್ ಅವರು ಪಕ್ಕಾ ಡೇಟ್ ತಿಳಿಸಿದ್ದಾರೆ. ನವೆಂಬರ್ 17ರಂದು ‘ಪುಷ್ಪ 2’ ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ.
‘ಪುಷ್ಪ 2’ ಸಿನಿಮಾದ ಟ್ರೇಲರ್ ರಿಲೀಸ್ ದಿನಾಂಕದ ಬಗ್ಗೆ ಮಾಹಿತಿ ನೀಡಲು ಹೊಸ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಇದರಲ್ಲಿ ಅಲ್ಲು ಅರ್ಜುನ್ ಅವರು ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಹೆಗಲ ಮೇಲೆ ಬಂದೂಕು ಹಿಡಿದು ಬರುತ್ತಿರುವ ರೀತಿಯಲ್ಲಿ ಅವರು ಪೋಸ್ ನೀಡಿದ್ದಾರೆ. ಈ ಪೋಸ್ಟರ್ ಕೂಡ ಭಾರಿ ಕೌತುಕ ಕೆರಳಿಸುವಲ್ಲಿ ಯಶಸ್ವಿ ಆಗಿದೆ.
ನವೆಂಬರ್ 17ರಂದು ಸಂಜೆ 6 ಗಂಟೆ 3 ನಿಮಿಷಕ್ಕೆ ‘ಪುಷ್ಪ 2’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ. ಕಥೆಯ ಬಗ್ಗೆ ಅಭಿಮಾನಿಗಳಿಗೆ ಒಂದು ಐಡಿಯಾ ಸಿಗಲಿದೆ. ನಿರ್ದೇಶಕ ಸುಕುಮಾರ್ ಅವರು ಸಾಕಷ್ಟು ಸಮಯ ತೆಗೆದುಕೊಂಡು ಈ ಸಿನಿಮಾವನ್ನು ಮಾಡಿದ್ದಾರೆ. ಕೊನೇ ಹಂತದ ಕೆಲಸಗಳು ನಡೆಯುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಅಬ್ಬರಿಸಲಿದೆ.
ಇದನ್ನೂ ಓದಿ: ‘ರಾಷ್ಟ್ರ ಪ್ರಶಸ್ತಿ ವಿಚಾರದಲ್ಲಿ ನೋವಾಗಿತ್ತು’: ಬಾಲಯ್ಯ ಎದುರು ಅಲ್ಲು ಅರ್ಜುನ್ ಮಾತು
ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸಿದ್ದು, ಅವರ ವೃತ್ತಿ ಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್ ಸಿಗುವ ನಿರೀಕ್ಷೆ ಇದೆ. ಡಾಲಿ ಧನಂಜಯ್, ಫಹಾದ್ ಫಾಸಿಲ್ ಮುಂತಾದ ಕಲಾವಿದರು ಕೂಡ ಬಣ್ಣ ಹಚ್ಚಿದ್ದಾರೆ. ನವೆಂಬರ್ 17ರಂದು ಬಿಡುಗಡೆ ಆಗಲಿರುವ ಟ್ರೇಲರ್ 24 ಗಂಟೆಗಳಲ್ಲಿ ಎಷ್ಟು ಮಿಲಿಯನ್ ವೀಕ್ಷಣೆ ಕಾಣಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:02 pm, Mon, 11 November 24