‘ರಾಷ್ಟ್ರ ಪ್ರಶಸ್ತಿ ವಿಚಾರದಲ್ಲಿ ನೋವಾಗಿತ್ತು’: ಬಾಲಯ್ಯ ಎದುರು ಅಲ್ಲು ಅರ್ಜುನ್ ಮಾತು
ನಟ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾದ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಈಗಾಗಲೇ ಅಲ್ಲು ಅರ್ಜುನ್ ಅವರು ‘ಪುಷ್ಪ’ ಸಿನಿಮಾದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದು, ಸೀಕ್ವೆಲ್ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಈಗ ಅಲ್ಲು ಅರ್ಜುನ್ ಅವರು ‘ಬೆಸ್ಟ್ ಆ್ಯಕ್ಟರ್’ ನ್ಯಾಷನಲ್ ಅವಾರ್ಡ್ ಬಗ್ಗೆ ಮಾತನಾಡಿದ್ದಾರೆ.
ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಸಿನಿಮಾ ಡಿಸೆಂಬರ್ 5ರಂದು ಬಿಡುಗಡೆ ಆಗಲಿದೆ. ಇದರ ಪ್ರಚಾರ ಕಾರ್ಯದಲ್ಲಿ ಅವರು ಬ್ಯುಸಿ ಆಗಿದ್ದಾರೆ. ನಂದಮೂರಿ ಬಾಲಕೃಷ್ಣ ನಡೆಸಿಕೊಡುವ ‘ಅನ್ಸ್ಟಾಪಬಲ್’ ಕಾರ್ಯಕ್ರಮಕ್ಕೆ ಅಲ್ಲು ಅರ್ಜುನ್ ಅವರು ಅತಿಥಿಯಾಗಿ ಬಂದಿದ್ದಾರೆ. ಈ ವೇಳೆ ಅವರಿಗೆ ಹಲವು ವಿಷಯಗಳ ಬಗ್ಗೆ ಪ್ರಶ್ಮೆ ಕೇಳಲಾಗಿದೆ. ರಾಷ್ಟ್ರ ಪ್ರಶಸ್ತಿ ಬಗ್ಗೆ ಎದುರಾದ ಪ್ರಶ್ನೆಗೆ ಅಲ್ಲು ಅರ್ಜುನ್ ವಿವರಿಸಿದ್ದಾರೆ.
ಸುಕುಮಾರ್ ನಿರ್ದೇಶನ ಮಾಡಿದ ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರು ಪುಷ್ಪರಾಜ್ ಎಂಬ ಪಾತ್ರ ಮಾಡಿದರು. ಅವರ ಗೆಟಪ್ ತುಂಬ ಡಿಫರೆಂಟ್ ಆಗಿತ್ತು. ಆ ಪಾತ್ರದ ನಟನೆಗೆ ಅಲ್ಲು ಅರ್ಜುನ್ ಅವರಿಗೆ ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಸಿಕ್ಕಿತು. ಅದು ಅಲ್ಲು ಅರ್ಜುನ್ ಮಾತ್ರವಲ್ಲೇ ಇಡೀ ತೆಲುಗು ಚಿತ್ರರಂಗಕ್ಕೆ ಹೆಮ್ಮೆ ತಂದಿತು. ಆ ಕುರಿತು ಅಲ್ಲು ಅರ್ಜುನ್ ಅವರು ಮಾತನಾಡಿದ್ದಾರೆ.
ಅಲ್ಲು ಅರ್ಜುನ್ ಅವರು ಅನ್ಸ್ಟಾಪಬಲ್’ ಕಾರ್ಯಕ್ರಮದಲ್ಲಿ ಭಾಗಿಯಾದ ಸಂಚಿಕೆಯ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ‘ನಿಮಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಾಗ ಏನು ಅನಿಸಿತು’ ಎಂದು ಬಾಲಯ್ಯ ಕೇಳಿದ್ದಕ್ಕೆ ಅಲ್ಲು ಅರ್ಜುನ್ ಅವರು ಪ್ರತಿಕ್ರಿಯಿಸಿದ್ದಾರೆ. ‘ರಾಷ್ಟ್ರ ಪ್ರಶಸ್ತಿಯ ಅತ್ಯುತ್ತಮ ನಟರ ಪಟ್ಟಿಯನ್ನು ನೋಡಿದಾಗ, ಅದರಲ್ಲಿ ಒಬ್ಬ ತೆಲುಗು ನಟನ ಹೆಸರು ಕೂಡ ಕಾಣಿಸಿರಲಿಲ್ಲ. ಅದನ್ನು ನೋಡಿದಾಗ ನನಗೆ ತುಂಬ ನೋವಾಗಿತ್ತು. ಹಾಗಾಗಿ ಇದನ್ನು ಸಾಧಿಸಬೇಕು ಅಂತ ನಿರ್ಧರಿಸಿದೆ’ ಎಂದಿದ್ದಾರೆ ಅಲ್ಲು ಅರ್ಜುನ್.
ಇದನ್ನೂ ಓದಿ: ಅಲ್ಲು ಅರ್ಜುನ್ಗೆ ಎಚ್ಚರಿಕೆ ನೀಡಿದ ಮೆಗಾ ಫ್ಯಾನ್ಸ್, ಉರಿದು ಬಿದ್ದ ಬನ್ನಿ ಫ್ಯಾನ್ಸ್
‘ಆಹಾ’ ಒಟಿಟಿಯಲ್ಲಿ ನವೆಂಬರ್ 15ರಂದು ಈ ಸಂಚಿಕೆ ಪ್ರಸಾರ ಆಗಲಿದೆ. ಅದನ್ನು ನೋಡಲು ಅಲ್ಲು ಅರ್ಜುನ್ ಅಭಿಮಾನಿಗಳು ಕಾದಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಪುಷ್ಪ 2’ ಸಿನಿಮಾ ತೆರೆಕಾಣಲಿದೆ. ಅಲ್ಲು ಅರ್ಜುನ್ ಮಾತ್ರವಲ್ಲದೇ ನಟಿ ರಶ್ಮಿಕಾ ಮಂದಣ್ಣ ಅವರ ಪಾಲಿಗೂ ಈ ಸಿನಿಮಾ ಮಹತ್ವದ್ದಾಗಿದೆ. ಡಾಲಿ ಧನಂಜಯ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.