‘ಪುಷ್ಪ 2’ ಬಗ್ಗೆ ಗಾಸಿಪ್​ ಮಾಡುವವರ ಬಾಯಿ ಮುಚ್ಚಿಸಲು ಈ ಒಂದು ಪೋಸ್ಟರ್​ ಸಾಕು

ಸೂಕ್ತ ದಿನಾಂಕದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ತುಂಬ ಮುಖ್ಯ. ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ರಿಲೀಸ್​ ಆಗಲಿದೆ. ಅಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಜೆ ಇರುತ್ತದೆ. ಅದರ ಲಾಭವನ್ನು ಪಡೆಯಲು ಹಲವು ಚಿತ್ರತಂಡಗಳು ಪ್ರಯತ್ನಿಸುತ್ತವೆ. ಆ ದಿನಾಂಕವನ್ನು ಬಿಟ್ಟುಕೊಡಲು ‘ಪುಷ್ಪ 2’ ಚಿತ್ರತಂಡ ಸಿದ್ಧವಿಲ್ಲ.

‘ಪುಷ್ಪ 2’ ಬಗ್ಗೆ ಗಾಸಿಪ್​ ಮಾಡುವವರ ಬಾಯಿ ಮುಚ್ಚಿಸಲು ಈ ಒಂದು ಪೋಸ್ಟರ್​ ಸಾಕು
ಪುಷ್ಪ 2

Updated on: Jan 29, 2024 | 7:24 PM

ಅಲ್ಲು ಅರ್ಜುನ್​ (Allu Arjun) ಅವರ ಅಭಿಮಾನಿಗಳಿಗೆ ಇತ್ತೀಚೆಗೆ ಒಂದು ಸಣ್ಣ ಅಳುಕು ಶುರುವಾಗಿತ್ತು. ಅಂದುಕೊಂಡ ದಿನದಲ್ಲೇ ‘ಪುಷ್ಪ 2’ ಸಿನಿಮಾ (Pushpa 2 Movie) ರಿಲೀಸ್​ ಆಗುತ್ತೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡಿತ್ತು. ಅದಕ್ಕೆ ಕಾರಣ ಆಗಿದ್ದು ಒಂದು ಗಾಸಿಪ್. ‘ಪುಷ್ಪ 2’ ಸಿನಿಮಾದ ಬಿಡುಗಡೆ ದಿನಾಂಕ (Pushpa 2 Release Date) ಮುಂದಕ್ಕೆ ಹೋಗಿದೆ ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸಿದ್ದರು. ಆದರೆ ಅದು ನಿಜವಲ್ಲ ಎಂಬುದನ್ನು ಚಿತ್ರತಂಡ ಸ್ಪಷ್ಟಪಡಿಸಿದೆ. ಈ ಸಿನಿಮಾದ ನಿರ್ಮಾಪಕರೇ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ಅದನ್ನು ತಿಳಿಸುವ ಸಲುವಾಗಿ ಒಂದು ಹೊಸ ಪೋಸ್ಟರ್​ ಹಂಚಿಕೊಳ್ಳಲಾಗಿದೆ. ಅದನ್ನು ನೋಡಿದ ಬಳಿಕ ಗಾಸಿಪ್​ ಮಂದಿ ಗಪ್​ಚುಪ್​ ಆಗಿದ್ದಾರೆ.

‘ಪುಷ್ಪ 2’ ಸಿನಿಮಾಗೆ ಸುಕುಮಾರ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್​ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​ ಮುಂತಾದ ಕಲಾವಿದರು ಕೂಡ ಈ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ವರ್ಷ ಆಗಸ್ಟ್​ 15ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೆ ಇನ್ನು 200 ದಿನಗಳು ಬಾಕಿ ಇವೆ ಎಂಬ ಸಂದೇಶವನ್ನು ಈ ಪೋಸ್ಟರ್​ ಮೂಲಕ ಸ್ಪಷ್ಟವಾಗಿ ರವಾನಿಸಲಾಗಿದೆ. ಆ ಮೂಲಕ ಎಲ್ಲ ಗಾಸಿಪ್​ಗಳಿಗೆ ತೆರೆ ಎಳೆಯಲಾಗಿದೆ.

ಸೂಕ್ತ ದಿನಾಂಕದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ತುಂಬ ಮುಖ್ಯ. ಅದಕ್ಕಾಗಿ ದೊಡ್ಡ ಬಜೆಟ್​ನ ಸಿನಿಮಾಗಳು ಮೊದಲೇ ರಿಲೀಸ್​ ಡೇಟ್​ ಲಾಕ್​ ಮಾಡಿಕೊಳ್ಳುತ್ತವೆ. ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸರ್ಕಾರಿ ರಜೆ ಇರುತ್ತದೆ. ಅದರ ಲಾಭವನ್ನು ಪಡೆಯಲು ಹಲವು ಚಿತ್ರತಂಡಗಳು ಪ್ರಯತ್ನಿಸುತ್ತವೆ. ಆ ದಿನಾಂಕವನ್ನು ಬಿಟ್ಟುಕೊಡಲು ‘ಪುಷ್ಪ 2’ ಚಿತ್ರತಂಡ ಕೂಡ ಸಿದ್ಧವಿಲ್ಲ. ಅಂದುಕೊಂಡಂತೆಯೇ ಆಗಸ್ಟ್​ 15ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಸುಕ್ಕು ಡಾರ್ಲಿಂಗ್​ ಜನ್ಮದಿನಕ್ಕೆ ‘ಪುಷ್ಪ 2’ ಸೆಟ್​ನಿಂದ ವಿಶೇಷ ಫೋಟೋ ಹಂಚಿಕೊಂಡ ಅಲ್ಲು ಅರ್ಜುನ್​

ವರದಿಗಳ ಪ್ರಕಾರ, ‘ಪುಷ್ಪ 2’ ಚಿತ್ರಕ್ಕೆ ಇನ್ನೂ 100 ದಿನಗಳ ಶೂಟಿಂಗ್​ ಬಾಕಿ ಇದೆ. ಚಿತ್ರೀಕರಣದ ಜೊತೆಜೊತೆಯಲ್ಲೇ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯಲಿವೆ. ಬಿಡುಗಡೆಗೆ ಇನ್ನೂ 200 ದಿನ ಬಾಕಿ ಇರುವುದರಿಂದ ಅಷ್ಟರೊಳಗೆ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ ಎಂಬ ಭರವಸೆ ಈ ತಂಡಕ್ಕಿದೆ. ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಪುಷ್ಪ 2’ ಕೂಡ ಇದೆ. ‘ಪುಷ್ಪ’ ಸೂಪರ್​ ಹಿಟ್​ ಆಗಿದ್ದರಿಂದ ಅದರ ಸೀಕ್ವೆಲ್​ ಮೇಲೆ ಅಲ್ಲು ಅರ್ಜುನ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾವನ್ನು ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us