ನಟಿ ರಶ್ಮಿಕಾ ಮಂದಣ್ಣ ಈಗ ಗೆಲ್ಲುವ ಕುದುರೆ. ಬಹುಭಾಷೆಯಲ್ಲಿ ಅವರಿಗೆ ಭರ್ಜರಿ ಡಿಮ್ಯಾಂಡ್ ಇದೆ. ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಬಾಲಿವುಡ್ವರೆಗೆ ತಮ್ಮ ವ್ಯಾಪ್ತಿ ವಿಸ್ತರಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆಯೇ ಅವರ ತಿರುಗಾಟ ಜೋರಾಗಿದೆ. ಟಾಲಿವುಡ್ ಸಿನಿಮಾಗಳ ಸಲುವಾಗಿ ಹೈದರಾಬಾದ್ನಲ್ಲಿ ಇರುತ್ತಿದ್ದ ರಶ್ಮಿಕಾ ಈಗ ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿರುವುದರಿಂದ ಮುಂಬೈನಲ್ಲಿ ಮನೆ ಮಾಡುವುದು ಅನಿವಾರ್ಯ. ಹಾಗಾಗಿ ಅವರು ಮುಂಬೈನಲ್ಲಿ ಹೊಸ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ನಿಧಾನಕ್ಕೆ ಇಳಿಮುಖ ಆಗುತ್ತಿದೆ. ಹಾಗಾಗಿ ಸಿನಿಮಾ ಚಟುವಟಿಕೆಗಳು ಗರಿಗೆದರುತ್ತಿವೆ. ಈ ಸಮಯಕ್ಕೆ ಸರಿಯಾಗಿ ರಶ್ಮಿಕಾ ಅವರು ಮುಂಬೈನಲ್ಲಿ ತಮ್ಮ ಹೊಸ ಅಪಾರ್ಟ್ಮೆಂಟ್ಗೆ ಶಿಫ್ಟ್ ಆಗಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಮಾಹಿತಿ ನೀಡಿದ್ದಾರೆ.
‘ಇವತ್ತು ತುಂಬ ಕೆಲಸ ಆಯಿತು. ಕಡೆಗೂ ನಾನು ಅಪಾರ್ಟ್ಮೆಂಟ್ಗೆ ಶಿಫ್ಟ್ ಆದೆ. ತುಂಬ ವಸ್ತುಗಳನ್ನು ಖರೀದಿಸಬೇಕಿತ್ತು. ಅದು ಇನ್ನೂ ಮುಗಿದಿಲ್ಲ. ಅದು ಎಂದಿಗೂ ಮುಗಿಯುವಂಥದ್ದು ಕೂಡ ಅಲ್ಲ. ಔರಾ (ಶ್ವಾನ) ಇಡೀ ದಿನ ಹೊರಗೆ ಇದ್ದಳು. ನನ್ನ ಇಬ್ಬರು ಸ್ನೇಹಿತರನ್ನು ಭೇಟಿಯಾಗಬೇಕಿತ್ತು. ಅಪಾರ್ಟ್ಮೆಂಟ್ ಸಜ್ಜುಗೊಳಿಸಬೇಕಿತ್ತು. ನನ್ನ ಅಸಿಸ್ಟೆಂಟ್ ಸಾಯಿ ನನಗೆ ಸಹಾಯ ಮಾಡಿದ. ನನಗೆ ಮತ್ತು ಔರಾಗೆ ತುಂಬ ಸುಸ್ತಾಗಿತ್ತು’ ಎಂದು ರಶ್ಮಿಕಾ ತಮ್ಮ ದಿನಚರಿ ಬಗ್ಗೆ ಬರೆದುಕೊಂಡಿದ್ದರು.
ದಕ್ಷಿಣ ಭಾರತದಲ್ಲಿ ಮಿಂಚಿದ ಬಳಿಕ ರಶ್ಮಿಕಾಗೆ ಬಾಲಿವುಡ್ನಿಂದ ಒಳ್ಳೊಳ್ಳೆಯ ಆಫರ್ಗಳು ಸಿಗುತ್ತಿವೆ. ಹಿಂದಿಯಲ್ಲಿ ಅವರು ನಟಿಸುತ್ತಿರುವ ಮೊದಲ ಸಿನಿಮಾದ ಹೆಸರು ‘ಮಿಷನ್ ಮಜ್ನು’ ಆ ಚಿತ್ರದಲ್ಲಿ ಅವರು ಸ್ಟಾರ್ ನಟ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿದ್ದಾರೆ. ಎರಡನೇ ಚಿತ್ರ ‘ಗುಡ್ಬೈ’ನಲ್ಲಿ ಅಮಿತಾಭ್ ಬಚ್ಚನ್ ಜೊತೆ ನಟಿಸುವ ಅವಕಾಶ ಸಿಕ್ಕಿರುವುದು ವಿಶೇಷ. ಈ ಸಿನಿಮಾದಲ್ಲಿ ಅಮಿತಾಭ್ ಹಾಗೂ ರಶ್ಮಿಕಾ ಅಪ್ಪ-ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಲಿವುಡ್ನಲ್ಲಿ ಅಲ್ಲು ಅರ್ಜುನ್ ಜೊತೆ ರಶ್ಮಿಕಾ ನಟಿಸಿರುವ ‘ಪುಷ್ಪ’ ಚಿತ್ರ ಎರಡು ಪಾರ್ಟ್ಗಳಲ್ಲಿ ಮೂಡಿಬರುವ ಬಗ್ಗೆ ಸುದ್ದಿ ಹರಡಿದೆ. ಎರಡನೇ ಪಾರ್ಟ್ಗೆ ಬೇರೆ ಶೀರ್ಷಿಕೆ ಇಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಟೀಸರ್ ಮತ್ತು ಪೋಸ್ಟರ್ಗಳ ಮೂಲಕ ‘ಪುಷ್ಪ’ ದೊಡ್ಡಮಟ್ಟದ ನಿರೀಕ್ಷೆ ಸೃಷ್ಟಿ ಮಾಡಿದೆ.
ಇದನ್ನೂ ಓದಿ:
ವಿಜಯ್ ದೇವರಕೊಂಡ ಜೊತೆ ಸೇರಿಕೊಂಡು ಸೈಲೆಂಟಾಗಿ ಮತ್ತೊಂದು ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಮುಖಕ್ಕೆ ಮುತ್ತಿಟ್ಟ ಔರಾ; ರಾತ್ರೋರಾತ್ರಿ ವೈರಲ್ ಆಯ್ತು ಫೋಟೋ