
ಲಾಕ್ಡೌನ್ ಕಾರಣದಿಂದಾಗಿ ಅನೇಕ ಸಿನಿಮಾಗಳ ರಿಲೀಸ್ ಡೇಟ್ ಬಗ್ಗೆ ಗೊಂದಲ ಉಂಟಾಗಿತ್ತು. ಹೈ-ಬಜೆಟ್ನ ಹಲವು ಸ್ಟಾರ್ ಸಿನಿಮಾಗಳು ಈಗ ಒಂದೊಂದಾಗಿ ಬಿಡುಗಡೆ ದಿನಾಂಕ ಘೋಷಣೆ ಮಾಡಿಕೊಳ್ಳುತ್ತಿವೆ. ಆ ಪೈಕಿ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯ ಬಹುನಿರೀಕ್ಷಿತ ‘ಪುಷ್ಪ’ (Pushpa) ಸಿನಿಮಾ ಕೂಡ ಕಣಕ್ಕೆ ಇಳಿದಿದೆ. ಈ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಹಲವು ದಿನಗಳಿಂದ ತುದಿಗಾಲಿನಲ್ಲಿ ನಿಂತು ಕಾದಿದ್ದರು. ಈಗ ಆ ಪ್ರಶ್ನೆಗೆ ಸ್ವತಃ ಅಲ್ಲು ಅರ್ಜುನ್ ಉತ್ತರ ನೀಡಿದ್ದಾರೆ. ಈ ವರ್ಷ ಕ್ರಿಸ್ಮಸ್ ಹಬ್ಬಕ್ಕೆ (Christmas 2021) ‘ಪುಷ್ಪ’ ಬಿಡುಗಡೆ ಆಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಪುಷ್ಪ’ ಚಿತ್ರಕ್ಕೆ ಸಂಬಂಧಿಸಿದಂತೆ ಇನ್ನೊಂದು ಪ್ರಮುಖ ವಿಚಾರ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿತ್ತು. ಈ ಸಿನಿಮಾ ಎರಡು ಪಾರ್ಟ್ಗಳಲ್ಲಿ ಮೂಡಿಬರಲಿದೆ ಎಂದು ಹಲವು ದಿನಗಳಿಂದ ಸುದ್ದಿ ಹರಿದಾಡುತ್ತಿತ್ತು. ಅಲ್ಲದೆ, ಎರಡೂ ಪಾರ್ಟ್ಗೆ ಬೇರೆ ಬೇರೆ ಹೆಸರು ಇರಲಿದೆ ಎಂದು ಹೇಳಲಾಗುತ್ತಿತ್ತು. ಹಾಗಾದರೆ ಮೊದಲ ಪಾರ್ಟ್ಗೆ ಪೂರ್ಣ ಶೀರ್ಷಿಕೆ ಏನು ಎಂಬುದು ಕೂಡ ಈಗ ಬಹಿರಂಗ ಆಗಿದೆ. ಅಲ್ಲು ಅರ್ಜುನ್ ಹಂಚಿಕೊಂಡಿರುವ ಈ ಹೊಸ ಪೋಸ್ಟರ್ನಲ್ಲಿ ‘Pushpa- The Rise’ ಎಂಬ ಟೈಟಲ್ ಗಮನ ಸೆಳೆಯುತ್ತಿದೆ.
ಈ ಸಿನಿಮಾಗೆ ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಪಾತ್ರವರ್ಗದ ಕಾರಣದಿಂದಲೂ ‘ಪುಷ್ಪ’ ಚಿತ್ರ ಹೈಪ್ ಸೃಷ್ಟಿಮಾಡಿದೆ. ಡಾಲಿ ಧನಂಜಯ, ಪ್ರಕಾಶ್ ರೈ, ಫಹಾದ್ ಫಾಸಿಲ್, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ಸನ್ನಿ ಲಿಯೋನ್ ಕೂಡ ಈ ಚಿತ್ರದಲ್ಲಿ ಒಂದು ಐಟಂ ಡ್ಯಾನ್ಸ್ ಮಾಡಲಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಆ ಹಾಡಿಗಾಗಿ ಅವರು ಬರೋಬ್ಬರಿ 50 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಇನ್ನೂ ಕೆಲವು ಸ್ಟಾರ್ ಸಿನಿಮಾಗಳು ರಿಲೀಸ್ ಆಗಲಿವೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಚಿತ್ರ ಕೂಡ ಡಿ.25ರಂದು ತೆರೆಗೆ ಬರಲಿದೆ. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಅಲ್ಲು ಅರ್ಜುನ್ ಹಾಗೂ ಆಮಿರ್ ಖಾನ್ ನಡುವೆ ದೊಡ್ಡ ಕ್ಲ್ಯಾಶ್ ಆಗಲಿದೆ.
ಇದನ್ನೂ ಓದಿ:
ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್ 2; ಯಶ್-ಅಲ್ಲು ಅರ್ಜುನ್ ನಡುವೆ ಭಾರಿ ಪೈಪೋಟಿ
‘ಪುಷ್ಪ ಸಿನಿಮಾ 10 ಕೆಜಿಎಫ್ಗೆ ಸಮ’; ಅಲ್ಲು ಅರ್ಜುನ್ ಚಿತ್ರಕ್ಕೆ ಸಿಕ್ತು ಹೊಸ ಮೆಚ್ಚುಗೆ