
ಬಾಲಿವುಡ್ನಲ್ಲಿ (Bollywood) ಕೆಲ ವರ್ಷಗಳ ಹಿಂದೆಯಷ್ಟೆ ಒಂದರ ಹಿಂದೊಂದು ಬಯೋಪಿಕ್ಗಳು ಬಿಡುಗಡೆ ಆದವು. ಕ್ರೀಡಾಪಟುಗಳ ಬಯೋಪಿಕ್ಗಳಂತೂ ಸಾಲು-ಸಾಲಾಗಿ ಬಂದವು. ಅದರ ಹೊರತಾಗಿ ಕೆಲ ವಂಚಕರ ಜೀವನ ಆಧರಿಸಿದ ಸಿನಿಮಾಗಳು ಸಹ ಬಂದವು ಯಶಸ್ವಿಯೂ ಆದವು. ಆದರೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಯೋಪಿಕ್ಗಳು ಬಹಳ ಕಡಿಮೆ ಎಲ್ಲೋ ಆಗೊಮ್ಮೆ, ಈಗೊಮ್ಮೆ ಬಯೋಪಿಕ್ಗಳು ಸೆಟ್ಟೇರುತ್ತವೆ. ಅವುಗಳಲ್ಲಿ ಬಿಡುಗಡೆ ಆಗುವ ಸಿನಿಮಾಗಳ ಸಂಖ್ಯೆ ಕಡಿಮೆ, ಬಿಡುಗಡೆ ಆದವು ಹಿಟ್ ಆಗುವುದು ಇನ್ನೂ ಕಡಿಮೆ.
ದಕ್ಷಿಣದಲ್ಲಿ ರಾಜಕಾರಣಿಗಳ ಜೀವನ ಆಧರಿಸಿದ ಸಿನಿಮಾ ನಿರ್ಮಾಣ ಆಗುವುದು ಹೆಚ್ಚು, ದಕ್ಷಿಣದ ಮಹನೀಯರ ಜೀವನ ಸಿನಿಮಾ ಆಗುವುದು ಅಪರೂಪ, ಆದರೆ ದಕ್ಷಿಣದ ಖ್ಯಾತ ನಟರೊಬ್ಬರು, ದಕ್ಷಿಣ ಭಾರತದ ಮಹಾನ್ ವ್ಯಕ್ತಿಗಳ ಜೀವನವನ್ನು ತೆರೆಗೆ ತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದುವೇ ನಟ ಆರ್ ಮಾಧವನ್. ಚಾಕಲೇಟ್ ಬಾಯ್ ಆಗಿದ್ದ ಮಾಧವನ್ ಈಗ ವಯಸ್ಸಾದ ಬಳಿಕ ವಿಲನ್ ಪಾತ್ರಗಳಲ್ಲಿ, ಎರಡನೇ ಹೀರೋ, ಪ್ರಧಾನ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸಿನಿಮಾ ನಿರ್ದೇಶನವನ್ನೂ ಮಾಡುತ್ತಿದ್ದಾರೆ.
ಈ ಹಿಂದೆ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಸಿನಿಮಾ ನಿರ್ದೇಶನ ಮಾಡಿ ಸ್ವತಃ ಅವರೇ ವಿಜ್ಞಾನಿ ನಂಬಿ ಪಾತ್ರದಲ್ಲಿ ನಟಿಸಿದ್ದರು. ಅವರ ಆ ಸಿನಿಮಾ 2023ರಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಸಹ ಗಳಿಸಿತು. ಇದೀಗ ಆರ್ ಮಾಧವನ್ ಅವರು ದಕ್ಷಿಣ ಭಾರತದ ಮತ್ತೊಬ್ಬ ಮಹಾನ್ ವ್ಯಕ್ತಿಯ ಜೀವನವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.
ಇದನ್ನೂ ಓದಿ:ಎಫ್ಟಿಐಐಗೆ ನಟ, ನಿರ್ದೇಶಕ ಆರ್ ಮಾಧವನ್ ಅಧ್ಯಕ್ಷ
ಜಿಡಿ ನಾಯ್ಡು ಎಂಬ ಹೆಸರು ಹೆಚ್ಚು ಜನರಿಗೆ ಗೊತ್ತಿಲ್ಲ ಆದರೆ ಅವರು ಮಾಡಿರುವ ಸಾಧನೆ ಕೋಟ್ಯಂತರ ಭಾರತೀಯರ ಜೀವನವನ್ನು ಬದಲಾಯಿಸಿದ್ದಾರೆ. ವಾಹನ, ಕೃಷಿ, ಸಂಚಾರ ಕ್ಷೇತ್ರಗಳಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಇದೀಗ ಈ ಮಹಾನ್ ವ್ಯಕ್ತಿಯ ಜೀವನ, ಸಾಧನೆ ಕುರಿತಾದ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದ್ದು ಆರ್ ಮಾಧವನ್ ಅವರು ಜಿಡಿ ನಾಯ್ಡು ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದ ನಿರ್ದೇಶನವನ್ನು ಫೈವ್ ಸ್ಟಾರ್ ಕೃಷ್ಣ ಅಲಿಯಾಸ್ ಕೃಷ್ಣಕುಮಾರ್ ರಾಮ್ಕುಮಾರ್ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಜಿಡಿಎನ್’ ಎಂದು ಹೆಸರಿಡಲಾಗಿದೆ.
ಗೋಪಾಲಸ್ವಾಮಿ ದೊರೆಸ್ವಾಮಿ ನಾಯ್ಡು ಅವರು ಒಬ್ಬ ಸಂಶೋಧಕ. ಅವರನ್ನು ಭಾರತದ ಎಡಿಸನ್ ಎಂದು ಕರೆಯಲಾಗುತ್ತಿತ್ತು. ಮೋಟಾರು ಕ್ಷೇತ್ರದಲ್ಲಿ ಅವರು ಮಾಡಿದ ಕಾರ್ಯ ಅದ್ಭುತವಾದುದು. ಕೇವಲ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತ್ರವೇ ಪಡೆದಿದ್ದ ಜಿಡಿ ನಾಯ್ಡು ಅವರಿಗೆ ಯಂತ್ರಗಳ ಬಗ್ಗೆ ಅಪಾರ ಕುತೂಹಲವಿತ್ತು. ಆ ಕುತೂಹಲವೇ ಅತ್ಯುತ್ತಮ ಮೋಟಾರುಗಳು, ಎಂಜಿನ್ ಮಾದರಿಗಳ ಅನ್ವೇಷಣೆಗೆ ಕಾರಣವಾಯ್ತು.
ಹೋಟೆಲ್ನಲ್ಲಿ ಸರ್ವರ್ ಆಗಿದ್ದ ಜಿಡಿ ನಾಯ್ಡು ಆ ನಂತರ ಅನ್ವೇಷಕನಾಗಿ, ಮೋಟಾರು ವಾಹನ ಕಂಪೆನಿಯ ಮಾಲೀಕನಾಗಿದ್ದು ಒಂದು ಅದ್ಭುತವಾದ ಕತೆ. ಈಗ ಅದೇ ಕತೆ ಸಿನಿಮಾ ಆಗುತ್ತಿದೆ. 1937ರಲ್ಲಿ ಭಾರತದ ಮೊದಲ ಮೋಟಾರನ್ನು ಅನ್ವೇಶಿಸಿದ್ದು ಜಿಡಿ ನಾಯ್ಡು. 1952 ರಲ್ಲಿ ಎರಡು ಸೀಟುಗಳಿದ್ದ ಪೆಟ್ರೋಲ್ ಕಾರು ನಿರ್ಮಿಸಿದರು. ಒಂದೇ ದಿನದಲ್ಲಿ ಒಂದು ಮನೆಯನ್ನು ನಿರ್ಮಿಸಿದ್ದರು. ಒಟ್ಟಾರೆ ಆಗಿನ ಕಾಲದಲ್ಲಿ ಕೇವಲ ಶ್ರೀಮಂತರಿಗೆ ಇದ್ದ ವಸ್ತುಗಳು, ವಾಹನಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸುತ್ತಿದ್ದರು ಜಿಡಿ ನಾಯ್ಡು. ಖ್ಯಾತ ವಿಜ್ಞಾನಿ ಸಿವಿ ರಾಮನ್ ಮತ್ತು ಕನ್ನಡಿಗ ಮೇರು ಎಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯನವರು ಸಹ ಜಿಡಿ ನಾಯ್ಡು ಅವರ ಗರಾಜಿಗೆ ಭೇಟಿ ನೀಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ