ಬಾಲಿವುಡ್ನ ಖ್ಯಾತ ನಟಿ ಮಂದಿರಾ ಬೇಡಿ ಅವರ ಪತಿ ರಾಜ್ ಕೌಶಲ್ ಅವರು ಬುಧವಾರ (ಜೂ.30) ನಿಧನರಾದರು. ಕೇವಲ 49ನೇ ವಯಸ್ಸಿಗೆ ಅವರು ಹೃದಯಾಘಾತದಿಂದ ಅಸುನೀಗಿದ ಸುದ್ದಿ ಕೇಳಿ ಇಡೀ ಚಿತ್ರರಂಗಕ್ಕೆ ಆಘಾತ ಆಗಿದೆ. ಮುಂಬೈನಲ್ಲಿ ರಾಜ್ ಕೌಶಲ್ ಅಂತ್ಯ ಸಂಸ್ಕಾರ ಮಾಡಲಾಗಿದೆ. ಈ ಸಂದರ್ಭದ ಫೋಟೋಗಳು ವೈರಲ್ ಆಗಿವೆ. ಸಂಪ್ರದಾಯಕ್ಕೆ ಸೆಡ್ಡು ಹೊಡೆದ ಮಂದಿರಾ ಬೇಡಿ ಅವರು ಪತಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ಚಟ್ಟವನ್ನು ಹೊರುವುದಿಲ್ಲ. ಕೆಲವರ ಸಂಪ್ರದಾಯದ ಪ್ರಕಾರ ಸ್ತ್ರೀಯರು ಸ್ಮಶಾನಕ್ಕೂ ಬರುವಂತಿಲ್ಲ. ಈ ಎಲ್ಲ ಸಂಪ್ರದಾಯಗಳನ್ನು ಮಂದಿರಾ ಬೇಡಿ ಮುರಿಯುವ ಮೂಲಕ ದಿಟ್ಟತನ ಪ್ರದರ್ಶಿಸಿದ್ದಾರೆ. ಅಂತ್ಯ ಸಂಸ್ಕಾರದ ಸ್ಥಳಕ್ಕೆ ರಾಜ್ ಕೌಶಲ್ ಅವರ ಶವವನ್ನು ಸಾಗಿಸುವಾಗ ಮಂದಿರಾ ಕೂಡ ಪುರುಷರ ಜೊತೆ ಸೇರಿಕೊಂಡು ಪತಿಯ ಶವವನ್ನು ಹೊತ್ತು ಸಾಗಿದ್ದಾರೆ. ಅಲ್ಲದೆ, ತಾವೇ ನಿಂತು ಅಂತ್ಯಸಂಸ್ಕಾರ ಕೂಡ ನೆರವೇರಿಸಿದ್ದಾರೆ. ಅವರ ಈ ದಿಟ್ಟತನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪತಿಯ ಅಗಲಿಕೆಯಿಂದ ತೀವ್ರ ದುಃಖ ಆವರಿಸಿದ್ದರೂ ಕೂಡ ಮಂದಿರಾ ಅವರು ಸ್ಟ್ರಾಂಗ್ ಆಗಿದ್ದಂತೆ ಕಾಣಿಸಿದರು. ಅವರಿಗೆ ಇಡೀ ಬಾಲಿವುಡ್ ಬಳಗ ಸಮಾಧಾನದ ಮಾತುಗಳನ್ನು ಹೇಳುತ್ತಿದೆ. ಅಕಾಲಿಕ ಮರಣಕ್ಕೆ ತುತ್ತಾದ ರಾಜ್ ಕೌಶಲ್ಗೆ ಸೆಲೆಬ್ರಿಟಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ನಿರ್ದೇಶಕನಾಗಿ, ನಿರ್ಮಾಪಕನಾಗಿ ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದ ರಾಜ್ ಕೌಶಲ್ ಜೊತೆ 1999ರಲ್ಲಿ ಮಂದಿರಾ ವಿವಾಹ ಆಗಿದ್ದರು. ಈ ದಂಪತಿಗೆ 2011ರಲ್ಲಿ ಗಂಡು ಮಗು ಜನಿಸಿತ್ತು. ಬಳಿಕ ಹೆಣ್ಣುಮಗುವೊಂದನ್ನು ದತ್ತು ಪಡೆದುಕೊಂಡಿದ್ದರು.
ನಿಧನರಾಗುವುದಕ್ಕೂ ಒಂದು ದಿನ ಮುಂಚೆ ನಟಿ ಮೌನಿ ರಾಯ್ ಸೇರಿದಂತೆ ಚಿತ್ರರಂಗದ ಕೆಲವು ಸ್ನೇಹಿತರನ್ನು ರಾಜ್ ಕೌಶಲ್ ಭೇಟಿ ಮಾಡಿದ್ದರು. ನಿರ್ದೇಶಕ ಓನಿರ್, ನಟಿಯರಾದ ನೇಹಾ ಧೂಪಿಯಾ, ಟಿಸ್ಕಾ ಚೋಪ್ರಾ, ನಟ ರೋಹಿತ್ ಬೋಸ್ ರಾಯ್ ಸೇರಿದಂತೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ರಾಜ್ ಕೌಶಲ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಇದನ್ನೂ ಓದಿ:
ನಟಿ ಮಂದಿರಾ ಬೇಡಿ ಪತಿ ರಾಜ್ ಕೌಶಲ್ ನಿಧನ; 49 ವರ್ಷಕ್ಕೇ ಬದುಕು ಮುಗಿಸಿದ ಬಾಲಿವುಡ್ ಸಿನಿಮಾ ನಿರ್ಮಾಪಕ