ಧರಣಿ ಮಾಡುತ್ತಾರಂತೆ ರಾಜಮೌಳಿ: ಎಲ್ಲಿ? ಯಾವ ಕಾರಣಕ್ಕೆ?
SS Rajamouli: ಭಾರತದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಜೊತೆಗೆ ಸಾಕಷ್ಟು ಶ್ರೀಮಂತಿಕೆಯನ್ನೂ ಹೊಂದಿರುವ ರಾಜಮೌಳಿಗೆ ಯಾವುದನ್ನೇ ಆಗಲಿ ಪಡೆದುಕೊಳ್ಳುವುದು ಕಷ್ಟವೇನೂ ಅಲ್ಲ. ಆದರೂ ರಾಜಮೌಳಿ, ಬೇಡಿಕೆಯೊಂದರ ಈಡೇರಿಕೆಗೆ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದ್ದಾರೆ. ರಾಜಮೌಳಿ ಪ್ರತಿಭಟನೆ ಮಾಡಲಿರುವುದು ಯಾವ ಕಾರಣಕ್ಕೆ ಮತ್ತು ಯಾರ ವಿರುದ್ಧ? ಅವರ ಒತ್ತಾಯ ಏನು?

ಎಸ್ಎಸ್ ರಾಜಮೌಳಿ (SS Rajamouli), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ರಾಜಮೌಳಿ, ರಾಜಕೀಯದಿಂದ ಬಲು ದೂರವಾದರೂ ಎಲ್ಲ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಮಂದಿಯಿಂದ ಸಮಾನ ಗೌರವಕ್ಕೆ ಅರ್ಹವಾಗಿರುವ ವ್ಯಕ್ತಿ ಅವರು. ರಾಜಮೌಳಿಯ ಪ್ರತಿಭೆ, ಮಾಡಿರುವ ಕಾರ್ಯಗಳು ಅವರನ್ನು ಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿದೆ. ಪ್ರಭಾವಿ ವ್ಯಕ್ತಿ ಆಗಿರುವ ಜೊತೆಗೆ ಸಾಕಷ್ಟು ಶ್ರೀಮಂತಿಕೆಯನ್ನೂ ಹೊಂದಿರುವ ರಾಜಮೌಳಿಗೆ ಯಾವುದನ್ನೇ ಆಗಲಿ ಪಡೆದುಕೊಳ್ಳುವುದು ಕಷ್ಟವೇನೂ ಅಲ್ಲ. ಆದರೂ ರಾಜಮೌಳಿ, ಬೇಡಿಕೆಯೊಂದರ ಈಡೇರಿಕೆಗೆ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದ್ದಾರೆ.
ರಾಜಮೌಳಿ, ಸಿನಿಮಾಗಳ ಬಗ್ಗೆ ಅಪಾರ ಕಾಳಜಿ ಇರುವ ವ್ಯಕ್ತಿ. ಜನರಿಗೆ ಒಳ್ಳೆಯ ಸಿನಿಮಾ. ಅತ್ಯುತ್ತಮ ಗುಣಮಟ್ಟದ ಸಿನಿಮಾ ನೀಡಬೇಕು ಎಂಬ ಅಪಾರ ಹಪ-ಹಪಿ ಇರುವ ನಿರ್ದೇಶಕ. ಇದೇ ಕಾರಣಕ್ಕೆ ಅವರು ವಿಶ್ವದ ಅತ್ಯುತ್ತಮ ತಂತ್ರಜ್ಞರೊಟ್ಟಿಗೆ ಕೆಲಸ ಮಾಡುತ್ತಾರೆ, ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ತಮ್ಮ ಸಿನಿಮಾಕ್ಕೆ ಅಳವಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ತಂತ್ರಜ್ಞಾನದ ಮಿತಿ ಇದ್ದಾಗಲೇ ಅವರು ‘ಈಗ’ ಅಂಥಹಾ ಸಿನಿಮಾ ನೀಡಿದವರು. ಆದರೆ ರಾಜಮೌಳಿ ಅವರು ಭಾರತದ ಚಿತ್ರಮಂದಿರಗಳ ಬಗ್ಗೆ ದೂರು ಇದೆ. ಇದೇ ಕಾರಣಕ್ಕೆ ಅವರು ಪ್ರತಿಭಟನೆ ಮಾಡುವೆ ಎಂದು ಹೇಳಿರುವುದು.
ಇತ್ತೀಚೆಗಷ್ಟೆ ಆಂಗ್ಲ ಮಾಧ್ಯಮವೊಂದಕ್ಕೆ ಹೈದರಾಬಾದ್ನಲ್ಲಿ ಸಂದರ್ಶನ ನೀಡಿರುವ ಎಸ್ಎಸ್ ರಾಜಮೌಳಿ, ತಾವು ‘ವಾರಣಾಸಿ’ ಸಿನಿಮಾವನ್ನು ಐಮ್ಯಾಕ್ಸ್ ಕ್ಯಾಮೆರಾನಲ್ಲಿ ಶೂಟ್ ಮಾಡಿರುವ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾನಲ್ಲಿ ದೃಶ್ಯಗಳ ಆಳ-ಅಗಲ ಮತ್ತು ಎತ್ತರ ಬಹಳ ದೊಡ್ಡದಾಗಿದ್ದು, ಅವುಗಳನ್ನು ಸರಿಯಾಗಿ ಕ್ಯಾಪ್ಚರ್ ಮಾಡಲು ಐಮ್ಯಾಕ್ಸ್ ಸೂಕ್ತ ಎಂಬ ಕಾರಣಕ್ಕೆ ತಾವು ಐಮ್ಯಾಕ್ಸ್ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:‘ವಾರಣಾಸಿ’ ಚಿತ್ರೀಕರಣಕ್ಕೆ ಐಮ್ಯಾಕ್ಸ್ ಬಳಸಿದ್ದೇಕೆ: ಕಾರಣ ನೀಡಿದ ರಾಜಮೌಳಿ
ಆದರೆ ಐಮ್ಯಾಕ್ಸ್ ನಲ್ಲಿ ಶೂಟ್ ಆದ ಸಿನಿಮಾವನ್ನು ಪ್ರದರ್ಶಿಸಲು ಭಾರತದಲ್ಲಿ ಒಂದೇ ಒಂದು ಫುಲ್ ಲೆಂತ್ ಐಮ್ಯಾಕ್ಸ್ ಸ್ಕ್ರೀನ್ಗಳೇ ಇಲ್ಲ. ಈ ಬಗ್ಗೆ ಅಸಮಾಧಾನ ಹೊಂದಿರುವ ರಾಜಮೌಳಿ, ಸಂದರ್ಶನದಲ್ಲಿ ಮಾತನಾಡುತ್ತಾ, ‘ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್ಗಳ ಅಗತ್ಯ ಇದೆ. ಭಾರತದಲ್ಲಿ ಸಹ ದೊಡ್ಡ ಐಮ್ಯಾಕ್ಸ್ ಸ್ಕ್ರೀನ್ಗಳನ್ನು ಹಾಕುವಂತೆ ನಾನು ಐಮ್ಯಾಕ್ಸ್ ಕಚೇರಿ ಎದುರು ಧರಣಿ ಕೂರುತ್ತೇನೆ’ ಎಂದಿದ್ದಾರೆ ರಾಜಮೌಳಿ.
ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್ಗಳು ಇವೆ ಆದರೆ 1.43:1 ಅಳತೆಯ ಬೃಹತ್ ಐಮ್ಯಾಕ್ಸ್ ಸ್ಕ್ರೀನ್ಗಳು ಇಲ್ಲ. ಭಾರತದಲ್ಲಿ ಇರುವುದೆಲ್ಲ 70 ಎಂಎಂ ಸ್ಕ್ರೀನ್ಗಳು ಮಾತ್ರ. ಆದರೆ ವಿದೇಶದಲ್ಲಿ ಅದರಲ್ಲೂ ಐಮ್ಯಾಕ್ಸ್ ಸ್ಕ್ರೀನ್ಗಳು 100*140 ಅಡಿ ಅಗಲ-ಉದ್ದದ ಸ್ಕ್ರೀನ್ಗಳು ಇವೆ. ಈ ಬೃಹತ್ ಸ್ಕ್ರೀನ್ಗಳಲ್ಲಿ ಸಿನಿಮಾ ನೋಡುವ ಅನುಭವವೇ ಅದ್ಭುತ. ಆದರೆ 70 ಎಂಎಂ ಸ್ಕ್ರೀನ್ಗಳಲ್ಲಿ ದೃಶ್ಯದ ಎತ್ತರ ಗೊತ್ತೇ ಆಗುವುದಿಲ್ಲ. ಎತ್ತರವಾದ ಬೆಟ್ಟದ ದೃಶ್ಯ ತೋರಿಸಿದರೆ ಅದರ ತಲೆ ಕಟ್ ಆಗಿ ಕಾಣುತ್ತದೆ. ಇದೇ ಕಾರಣಕ್ಕೆ ರಾಜಮೌಳಿ, ಭಾರತದಲ್ಲೂ ಬೃಹತ್ ಆದ ಐಮ್ಯಾಕ್ಸ್ ಸ್ಕ್ರೀನ್ಗಳು ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




