‘ವಾರಣಾಸಿ’ ಈವೆಂಟ್ ಹಣದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು; ಖರ್ಚಾಗಿದ್ದು ಇಷ್ಟೊಂದಾ?

ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಬಹುನಿರೀಕ್ಷಿತ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಕಾರ್ಯಕ್ರಮಕ್ಕೆ ಬರೋಬ್ಬರಿ ಸಾಕಷ್ಟು ಖರ್ಚಾದಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ನಡೆದ ಈವೆಂಟ್​ಗೆ ಪ್ರಿಯಾಂಕಾ ಚೋಪ್ರಾ, ಶ್ರುತಿ ಹಾಸನ್ ಮುಂತಾದವರು ಭಾಗವಹಿಸಿದ್ದರು. ಒಂದು ಸಣ್ಣ ಚಿತ್ರವನ್ನೇ ನಿರ್ಮಿಸುವಷ್ಟು ಹಣವನ್ನು ರಾಜಮೌಳಿ ತಮ್ಮ ಸಿನಿಮಾದ ಪ್ರಚಾರಕ್ಕೆ ಸುರಿದಿರುವುದು ಅಚ್ಚರಿ ಮೂಡಿಸಿದೆ.

‘ವಾರಣಾಸಿ’ ಈವೆಂಟ್ ಹಣದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು; ಖರ್ಚಾಗಿದ್ದು ಇಷ್ಟೊಂದಾ?
ವಾರಾಣಸಿ

Updated on: Nov 18, 2025 | 8:39 AM

ರಾಜಮೌಳಿ (Rajamouli) ಅವರು ಪ್ರತಿ ಸಿನಿಮಾದಿಂದ ಸಿನಿಮಾಗೆ ಅದ್ದೂರಿತನವನ್ನು ಹೆಚ್ಚಿಸುತ್ತಾ ಹೋಗುತ್ತಾರೆ. ‘ಬಾಹುಬಲಿ’ ಸಿನಿಮಾ ಹಿಟ್ ಆದ ಬಳಿಕ ‘ಬಾಬುಬಲಿ 2’ ಸಿನಿಮಾನ ಮತ್ತಷ್ಟು ಅದ್ದೂರಿಯಾಗಿ ತಂದರು. ‘ಆರ್​ಆರ್​ಆರ್’ ಚಿತ್ರದ ಪ್ರಚಾರಕ್ಕೆ ಅವರು ಮಾಡಿದ ತಂತ್ರಗಳು ಒಂದೆರಡಲ್ಲ. ಈಗ ‘ವಾರಾಣಸಿ’ ಚಿತ್ರವನ್ನು ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದರ ಟೈಟಲ್ ಟೀಸರ್ ಲಾಂಚ್​ಗೆ ಅದ್ದೂರಿ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಈ ಈವೆಂಟ್​ಗೆ ಖರ್ಚಾದ ಹಣ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ.

ರಾಜಮೌಳಿ ಅವರು ಇದೇ ಮೊದಲ ಬಾರಿಗೆ ಟಾಲಿವುಡ್ ನಟ ಮಹೇಶ್ ಬಾಬು ಜೊತೆ ಕೈ ಜೋಡಿಸಿದ್ದಾರೆ. ಈ ಸಿನಿಮಾಗೆ ಅದ್ದೂರಿ ಈವೆಂಟ್ ಮಾಡಲಾಗಿದೆ. ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಈವೆಂಟ್​ಗೆ ಸಾವಿರಾರು ಮಂದಿ ಸೇರಿದ್ದರು. ಯಾರಿಗೂ ತೊಂದರೆ ಆಗದಂತೆ ಈವೆಂಟ್ ಮಾಡಲಾಯಿತು. ಇದಕ್ಕೆ ಖರ್ಚಾಗಿದ್ದು ಬರೋಬ್ಬರಿ 27 ಕೋಟಿ ರೂಪಾಯಿ ಎನ್ನಲಾಗಿದೆ.

ರಾಜಮೌಳಿ ಅವರು ಈವೆಂಟ್​ಗೆ ಸಾಕಷ್ಟು ದಿನಗಳ ಸಿದ್ಧತೆ ಮಾಡಿಕೊಂಡಿದ್ದರು. ವೇದಿಕೆ ನಿರ್ಮಾಣಕ್ಕೆ, ಎಲ್​ಇಡಿ ಸ್ಕ್ರೀನ್ ಹಾಕಲು 8 ಕೋಟಿ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ. ಇನ್ನು, ಜಾಗದ ಬಾಡಿಗೆ, ಪ್ರಿಯಾಂಕಾ ಚೋಪ್ರಾ ಅವರನ್ನು ಅಮೆರಿಕದಿಂದ ಕರೆಸಿ, ಅವರಿಗೆ ಹೋಟೆಲ್​ನಲ್ಲಿ ವಾಸ್ತವ್ಯ, ಉಳಿದ ಕಲಾವಿದರು ಹಾಗೂ ತಂತ್ರಜ್ಞರ ವಾಸ್ತವ್ಯ, ಅಂತರಾಷ್ಟ್ರೀಯ ಮಾಧ್ಯಮಗಳಿಗೆ ಆಹ್ವಾನ ಉಳಿದ ಖರ್ಚು ಸೇರಿದರೆ 18 ಕೋಟಿ ರೂಪಾಯಿ ವ್ಯಯವಾಗಿದೆ. ಶ್ರುತಿ ಹಾಸನ್ ಅವರು ಹಾಡು ಹಾಡಿದ್ದಕ್ಕೆ ಮತ್ತು ಸ್ಟೇಜ್ ಪರ್ಫಾರ್ಮೆನ್ಸ್​ಗೆ 1 ಕೋಟಿ ಚಾರ್ಜ್ ಮಾಡಿದ್ದಾರೆ. ಈ ಮೂಲಕ ಕಾರ್ಯಕ್ರಮಕ್ಕೆ ಖರ್ಚು ಮಾಡಿದ ಒಟ್ಟೂ ಹಣ 27 ಕೋಟಿ ರೂಪಾಯಿ ಎನ್ನಲಾಗುತ್ತಿದೆ.

ಇದನ್ನೂ ಓದಿ: ‘ವಾರಣಾಸಿ’ ಈವೆಂಟ್​ನಲ್ಲಿ ಹಿಂದೂ ದೇವರ ಬಗ್ಗೆ ರಾಜಮೌಳಿ ಟೀಕೆ; ಸಿನಿಮಾ ಬ್ಯಾನ್ ಮಾಡಲು ಆಗ್ರಹ

ರಾಜಮೌಳಿ ಅವರು ಒಂದು ಈವೆಂಟ್​ಗೆ ಖರ್ಚು ಮಾಡಿದ ಹಣದಲ್ಲಿ ಒಂದು ದೊಡ್ಡ ಬಜೆಟ್​ ಸಿನಿಮಾ ಮಾಡಬಹುದಿತ್ತು ಎಂದು ಅನೇಕರು ಹೇಳಿದ್ದಾರೆ. ಈ ಮೊದಲು ‘ಆರ್​ಆರ್​ಆರ್​’ ಸಿನಿಮಾ ರಿಲೀಸ್ ಆದ ಬಳಿಕ ಚಿತ್ರವನ್ನು ಆಸ್ಕರ್ ರೇಸ್​ಗೆ ತೆಗೆದುಕೊಂಡು ಹೋಗಲು 5-10 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಈಗ ಸಿನಿಮಾ ಆರಂಭದಲ್ಲೇ ಹಣವನ್ನು ನೀರಿನಂತೆ ವ್ಯಯಿಸಲಾಗುತ್ತಿದೆ. ಈ ಸಿನಿಮಾದ ಬಜೆಟ್ 1000 ಕೋಟಿ ರೂಪಾಯಿ ಎನ್ನಲಾಗಿದೆ. 2027ರಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us