ಆಸ್ಪತ್ರೆಯಿಂದ ಮನೆಗೆ ಮರಳಿದ ರಜನಿಕಾಂತ್​; ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಸೂಪರ್ ಸ್ಟಾರ್

|

Updated on: Oct 04, 2024 | 9:08 PM

ರಜನಿಕಾಂತ್​ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ತೋರಿದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ. ಅಮಿತಾಭ್​ ಬಚ್ಚನ್​, ನರೇಂದ್ರ ಮೋದಿ, ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರಿಗೆ ರಜನಿ ಥ್ಯಾಂಕ್ಸ್​ ಹೇಳಿದ್ದಾರೆ. ಅಲ್ಲದೇ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಆಪ್ತರಿಗೂ ಅವರು ಧನ್ಯವಾದ ಸಲ್ಲಿಸಿದ್ದಾರೆ.

ಆಸ್ಪತ್ರೆಯಿಂದ ಮನೆಗೆ ಮರಳಿದ ರಜನಿಕಾಂತ್​; ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಸೂಪರ್ ಸ್ಟಾರ್
ರಜನಿಕಾಂತ್​, ನರೇಂದ್ರ ಮೋದಿ
Follow us on

‘ಸೂಪರ್​ ಸ್ಟಾರ್​’ ರಜನಿಕಾಂತ್ ಅವರಿಗೆ ಇತ್ತೀಚೆಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಹೃದಯ ಸಂಬಂಧಿ ಸಮಸ್ಯೆ ಉಂಟಾಗಿದ್ದರಿಂದ ಅವರಿಗೆ ಸ್ಟೆಂಟ್​ ಹಾಕಲಾಗಿದೆ. ಈಗ ರಜನಿಕಾಂತ್​ ಅವರು ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ. ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿ ಅವರು ವಿಶ್ರಾಂತಿ ಪಡೆಯಬೇಕಿದೆ. ರಜನಿಕಾಂತ್​ ಆಸ್ಪತ್ರೆಗೆ ಸೇರಿದಾಗ ಅವರ ಆರೋಗ್ಯಕ್ಕಾಗಿ ಅನೇಕರು ಪ್ರಾರ್ಥಿಸಿದ್ದರು. ಅವರೆಲ್ಲರಿಗೂ ಈಗ ರಜನಿ ಧನ್ಯವಾದ ತಿಳಿಸಿದ್ದಾರೆ. ನರೇಂದ್ರ ಮೋದಿ, ಅಮಿತಾಭ್​ ಬಚ್ಚನ್​ ಸೇರಿದಂತೆ ಹಲವರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ಗುರುವಾರ (ಅ.3) ರಾತ್ರಿ ರಜನಿಕಾಂತ್ ಅವರ ಡಿಸ್ಚಾರ್ಜ್​ ಆಗಿದೆ. ಮನೆಗೆ ಮರಳಿದ ಬಳಿಕ ಸ್ವಲ್ಪ ಚೇತರಿಸಿಕೊಂಡ ಅವರು ಸೋಶಿಯಲ್​ ಮೀಡಿಯಾದಲ್ಲಿ ಸರಣಿ ಪೋಸ್ಟ್​ ಮಾಡಿದ್ದಾರೆ. ತಮ್ಮ ಬಗ್ಗೆ ಕಾಳಜಿ ತೋರಿಸಿ ರಾಜಕೀಯದ ಗಣ್ಯರು, ಅಭಿಮಾನಿಗಳು, ಮಾಧ್ಯಮದವರು, ಸಿನಿಮಾದ ಸೆಲೆಬ್ರಿಟಿಗಳು ಹಾಗೂ ಆಪ್ತರಿಗೆ ಧನ್ಯವಾದ ಎಂದು ಅವರು ತಮಿಳಿನಲ್ಲಿ ಪೋಸ್ಟ್​ ಮಾಡಿದ್ದಾರೆ.

ವಿಶೇಷವಾಗಿ ನರೇಂದ್ರ, ಅಮಿತಾಭ್​ ಬಚ್ಚನ್​, ಚಂದ್ರಬಾಬು ನಾಯ್ಡು, ತಮಿಳುನಾಡು ಗವರ್ನರ್​ ರವಿ ಅವರಿಗೆ ರಜನಿಕಾಂತ್ ಧನ್ಯವಾದ ತಿಳಿಸಿದ್ದಾರೆ. ‘ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಮತ್ತು ವೈಯಕ್ತಿಕವಾಗಿ ವಿಚಾರಿಸಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು’ ಎಂದು ರಜನಿಕಾಂತ್​ ಅವರು ‘ಎಕ್ಸ್​’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​ಗೆ ಹೃದಯ ಸಮಸ್ಯೆ: ಸ್ಟೆಂಟ್ ಹಾಕಲಾಗಿದೆ; ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಮಾಹಿತಿ

‘ಅಮಿತಾಭ್ ಬಚ್ಚನ್​ ಅವರೇ.. ನೀವು ತೋರಿಸಿದ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು’ ಎಂದು ಕೂಡ ರಜನಿಕಾಂತ್ ಅವರು ಪೋಸ್ಟ್ ಮಾಡಿದ್ದಾರೆ. ಅವರಿಗೆ ಈಗ 73 ವರ್ಷ ವಯಸ್ಸು. ಈ ಮೊದಲು ಅವರು ಅನೇಕ ಬಾರಿ ಆಸ್ಪತ್ರೆಗೆ ತೆರಳಿದ್ದರು. ವಯೋ ಸಹಜವಾಗಿ ಅವರಿಗೆ ಆರೋಗ್ಯ ಆಗಾಗ ಕೈಕೊಡುತ್ತಿದೆ. ಆದ್ದರಿಂದ ಅಭಿಮಾನಿಗಳಿಗೆ ಆತಂಕ ಆಗಿತ್ತು. ಈಗ ಅವರು ಡಿಸ್ಚಾರ್ಜ್​ ಆಗಿ ಮನೆಗೆ ಮರಳಿರುವ ವಿಷಯ ತಿಳಿದು ಅಭಿಮಾನಿಗಳಿಗೆ ಸಮಾಧಾನ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.