ನಟ ರಜನಿಕಾಂತ್ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಅಭಿಮಾನಿಗಳಿಗೆ ಆತಂಕ ಆಗಿದೆ. ಅವರ ಆರೋಗ್ಯದ ಬಗ್ಗೆ ಹಲವು ಬಗೆಯ ವರದಿಗಳು ಪ್ರಕಟ ಆಗಿವೆ. ನಿಜಕ್ಕೂ ರಜನಿಕಾಂತ್ ಅವರಿಗೆ ಎದುರಾಗಿರುವ ಆರೋಗ್ಯ ಸಮಸ್ಯೆ ಏನು ಎಂಬ ಬಗ್ಗೆ ಈಗ ಆಸ್ಪತ್ರೆಯ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬಿದ್ದಿದೆ. ‘ಸೂಪರ್ ಸ್ಟಾರ್’ ರಜನಿಕಾಂತ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದೆ. ಅದಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ತನಾಳ ಉಬ್ಬಿದ್ದರಿಂದ ಸ್ಟೆಂಟ್ ಹಾಕಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
‘ರಜನಿಕಾಂತ್ ಅವರನ್ನು ಅಪೋಲೋ ಆಸ್ಪತ್ರೆಗೆ ಸೆಪ್ಟೆಂಬರ್ 30ರಂದು ದಾಖಲಿಸಲಾಗಿತ್ತು. ಅವರ ರಕ್ತನಾಳದಲ್ಲಿ ಊತ ಕಾಣಿಸಿಕೊಂಡಿತ್ತು. ಅದಕ್ಕೆ ಚಿಕಿತ್ಸೆ ನೀಡಲಾಗಿದೆ. ಹಿರಿಯ ವೈದ್ಯ ಡಾ. ಸಾಯಿ ಸತೀಶ್ ಅವರು ರಜನಿಕಾಂತ್ ಅವರಿಗೆ ಸ್ಟೆಂಟ್ ಹಾಕಿದ್ದಾರೆ. ಅಂದುಕೊಂಡ ರೀತಿಯೇ ಚಿಕಿತ್ಸೆ ಫಲಕಾರಿ ಆಗಿದೆ ಎಂದು ಅಭಿಮಾನಿಗಳಿಗೆ ಮತ್ತು ಹಿತೈಷಿಗಳಿಗೆ ತಿಳಿಸುತ್ತೇವೆ’ ಎಂದು ಆಸ್ಪತ್ರೆಯ ಕಡೆಯಿಂದ ಹೆಲ್ತ್ ಅಪ್ಡೇಟ್ ನೀಡಲಾಗಿದೆ.
ಆದಷ್ಟು ಬೇಗ ರಜನಿಕಾಂತ್ ಅವರು ಗುಣಮುಖರಾಗಲಿ ಎಂದು ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ. ‘ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಎರಡು ದಿನಗಳಲ್ಲಿ ಅವರು ಮನೆಗೆ ತೆರಳಲಿದ್ದಾರೆ’ ಎಂದು ಕೂಡ ಆಸ್ಪತ್ರೆಯ ಕಡೆಯಿಂದ ಮಾಹಿತಿ ಹಂಚಿಕೊಳ್ಳಲಾಗಿದೆ. ವಿಷಯ ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಿಂದ ಉಪೇಂದ್ರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ರಜನಿಕಾಂತ್ ಅವರಿಗೆ ಈಗ 73 ವರ್ಷ ವಯಸ್ಸು. ವಯೋ ಸಹಜವಾಗಿ ಅವರು ಒಂದಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ದಿಢೀರ್ ಅಂತ ಆಸ್ಪತ್ರೆಗೆ ದಾಖಲಾಗಿದ್ದರಿಂದ ಎಲ್ಲರಿಗೂ ಆತಂಕ ಹೆಚ್ಚಿತ್ತು. ಸದ್ಯ ಕೆಲವು ದಿನಗಳ ಕಾಲ ರಜನಿಕಾಂತ್ ಅವರು ಸಿನಿಮಾದ ಕೆಲಸಗಳಿಗೆ ಬ್ರೇಕ್ ನೀಡಲಿದ್ದಾರೆ. ಸಂಪೂರ್ಣ ಗುಣಮುಖರಾದ ನಂತರವೇ ಅವರು ಸಿನಿಮಾದ ಕೆಲಸಗಳತ್ತ ಮರಳಿದ್ದಾರೆ.
‘ವೆಟ್ಟಯ್ಯನ್’, ‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದಾರೆ. ಅಕ್ಟೋಬರ್ 10ರಂದು ‘ವೆಟ್ಟಯ್ಯನ್’ ಸಿನಿಮಾ ಬಿಡುಗಡೆ ಆಗಲಿದೆ. ಇನ್ನೇನು ಅವರು ಈ ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಬೇಕು ಎನ್ನುವಾಗಲೇ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.