‘ಸೂಪರ್ ಸ್ಟಾರ್’ ರಜನಿಕಾಂತ್ (Rajinikanth) ಅವರಿಗೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಈಗ ಅವರಿಗೆ 73 ವರ್ಷ ವಯಸ್ಸು. ಈಗಲೂ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಕಳೆದ ವರ್ಷ ತೆರೆಕಂಡು ಸೂಪರ್ ಹಿಟ್ ಆಯಿತು. ಆ ನಂತರ ಅವರ ಬೇಡಿಕೆ ಇನ್ನಷ್ಟು ಹೆಚ್ಚಾಯಿತು. ಈಗ ಅವರು ನಟಿಸಿರುವ ‘ಲಾಲ್ ಸಲಾಂ’ (Lal Salaam) ಸಿನಿಮಾ ಬಿಡುಗಡೆ ಆಗುತ್ತಿದೆ. ಫೆಬ್ರವರಿ 9ರಂದು ಈ ಸಿನಿಮಾ ತೆರೆಕಾಣುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರಕ್ಕಾಗಿ ರಜನಿಕಾಂತ್ ಪಡೆದಿರುವ ಸಂಭಾವನೆ (Rajinikanth Remuneration) ಬಗ್ಗೆ ಅಂತೆ-ಕಂತೆ ಹರಿದಾಡುತ್ತಿದೆ.
ಅಂದಹಾಗೆ, ರಜನಿಕಾಂತ್ ಅವರು ‘ಲಾಲ್ ಸಲಾಂ’ ಸಿನಿಮಾದಲ್ಲಿ ಮಾಡಿರುವುದು ಪ್ರಧಾನ ಪಾತ್ರ ಅಲ್ಲ. ಬದಲಿಗೆ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಹಾಗಂತ ಇದು ಹೀಗೆ ಬಂದು ಹಾಗೆ ಮಾಯವಾಗುವ ಅತಿಥಿ ಪಾತ್ರವಲ್ಲ. ಸಿನಿಮಾದ ಒಂದಷ್ಟು ದೃಶ್ಯಗಳಲ್ಲಿ ಈ ಪಾತ್ರ ಕಾಣಿಸಿಕೊಳ್ಳಲಿದೆ. ಅಲ್ಲದೇ, ಕಥೆಗೆ ಪ್ರಮುಖ ತಿರುವುಗಳನ್ನು ಈ ಪಾತ್ರ ನೀಡುತ್ತದೆ. ಹಾಗಾಗಿ ರಜನಿಕಾಂತ್ ಅವರು ಈ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ.
ಇದನ್ನೂ ಓದಿ: ಮೊಯಿದ್ದೀನ್ ಭಾಯ್ ಆಗಿ ಧರ್ಮಗಳ ನಡುವೆ ಸಾಮರಸ್ಯ ಮೂಡಿಸಲು ಬಂದ ರಜನಿಕಾಂತ್
ಮೊಯಿದ್ದೀನ್ ಭಾಯ್ ಎಂಬುದು ರಜನಿಕಾಂತ್ ಮಾಡಿರುವ ಪಾತ್ರದ ಹೆಸರು. ಆ ಪಾತ್ರದಲ್ಲಿ ಅವರ ಗೆಟಪ್ ಗಮನ ಸೆಳೆಯುತ್ತಿದೆ. ವರದಿಗಳ ಪ್ರಕಾರ, ‘ಲಾಲ್ ಸಲಾಂ’ ಸಿನಿಮಾದಲ್ಲಿ ಈ ಪಾತ್ರ ಅಂದಾಜು 40 ನಿಮಿಷ ಬರುತ್ತದೆ. ಅದಕ್ಕಾಗಿ ಅವರು ಬರೋಬ್ಬರಿ 40 ಕೋಟಿ ರೂಪಾಯಿ ಪಡೆದುಕೊಂಡಿದ್ದಾರೆ. ಅಂದರೆ, ಪ್ರತಿ ನಿಮಿಷಕ್ಕೆ ಒಂದು ಕೋಟಿ ರೂಪಾಯಿ ಚಾರ್ಜ್ ಮಾಡಿದಂತೆ ಆಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
‘ಲಾಲ್ ಸಲಾಂ’ ಸಿನಿಮಾಗೆ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರು ನಿರ್ದೇಶನ ಮಾಡಿದ್ದಾರೆ. ಮಗಳ ನಿರ್ದೇಶನದ ಸಿನಿಮಾ ಆಗಿದ್ದರೂ ಕೂಡ ಅವರು ಸಂಭಾವನೆಯಲ್ಲಿ ರಾಜಿ ಆಗಿಲ್ಲ. ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ‘ಲೈಕಾ ಪ್ರೊಡಕ್ಷನ್ಸ್’ ಸಂಸ್ಥೆಯು ‘ಲಾಲ್ ಸಲಾಂ’ ಚಿತ್ರಕ್ಕೆ ಬಂಡವಾಳ ಹೂಡಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂದೇಶ ಸಾರುವ ಕಥೆ ಈ ಸಿನಿಮಾದಲ್ಲಿ ಇದೆ ಎಂದು ಹೇಳಲಾಗುತ್ತಿದೆ. ಟ್ರೇಲರ್ನಲ್ಲಿ ಆ ಬಗ್ಗೆ ಸುಳಿವು ಸಿಕ್ಕಿದೆ.
ಇದನ್ನೂ ಓದಿ: ‘ಸಂಘಿ ಎನ್ನುವ ಶಬ್ದ ಕೆಟ್ಟದ್ದು ಎಂದು ನನ್ನ ಮಗಳು ಹೇಳಿಲ್ಲ’; ಐಶ್ವರ್ಯಾ ಪರ ರಜನಿಕಾಂತ್ ಬ್ಯಾಟಿಂಗ್
ಮಾಜಿ ಕ್ರಿಕೆಟರ್ ಕಪಿಲ್ ದೇವ್ ಅವರು ‘ಲಾಲ್ ಸಲಾಂ’ ಸಿನಿಮಾದಲ್ಲಿ ಒಂದು ಅತಿಥಿ ಪಾತ್ರ ಮಾಡಿದ್ದಾರೆ. ಉಳಿದಂತೆ ವಿಷ್ಣು ವಿಶಾಲ್, ವಿಕ್ರಾಂತ್ ಮುಂತಾದವರು ನಟಿಸಿದ್ದಾರೆ. ಕ್ರಿಕೆಟ್ ಹಿನ್ನೆಲೆಯಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಈ ಸಿನಿಮಾವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. 9 ವರ್ಷಗಳ ಬಳಿಕ ಐಶ್ವರ್ಯಾ ರಜನಿಕಾಂತ್ ಅವರು ನಿರ್ದೇಶನ ಮಾಡಿರುವ ಸಿನಿಮಾ ಎಂಬ ಕಾರಣಕ್ಕೂ ‘ಲಾಲ್ ಸಲಾಂ’ ಹೈಪ್ ಪಡೆದುಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ