
ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಸಿ. ಜೋಸೆಫ್ ವಿಜಯ್ (CM Vijay) ಜೂನ್ 22ರಂದು ತಮ್ಮ 52ನೇ ಜನ್ಮದಿನವನ್ನು ಆಚರಿಸಿಕೊಂಡರು. ಅಭಿಮಾನಿಗಳು, ಗಣ್ಯರು ಹಾಗೂ ರಾಜಕೀಯ ನಾಯಕರು ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಅವರಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು. ಆದರೆ, ಈ ಸಂಭ್ರಮದ ನಡುವೆ ಇಂಟರ್ನೆಟ್‌ನಲ್ಲಿ ಒಂದು ಪ್ರಶ್ನೆ ಜೋರಾಗಿ ಸದ್ದು ಮಾಡುತ್ತಿತ್ತು; ಅದೇನೆಂದರೆ, ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರು ವಿಜಯ್‌ಗೆ ಸಾರ್ವಜನಿಕವಾಗಿ ಏಕೆ ಶುಭ ಕೋರಲಿಲ್ಲ? ಈಗ ಈ ಎಲ್ಲಾ ಚರ್ಚೆಗಳಿಗೆ ಸ್ವತಃ ರಜನಿಕಾಂತ್ ಅವರೇ ಉತ್ತರ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಬುಧವಾರ (ಜೂನ್ 24) ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಹೊಸ ಚಿತ್ರದ ಅದ್ಧೂರಿ ಲಾಂಚ್ ಈವೆಂಟ್‌ನಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು ‘ಧರ್ಮನ್’ ಎಂದು ಅನಾವರಣಗೊಳಿಸಲಾಯಿತು. ಕಮಲ್ ಹಾಸನ್ ನಿರ್ಮಾಣದ ಈ ಚಿತ್ರದ ಶೀರ್ಷಿಕೆ ಲಾಂಚ್ ಮುಗಿಸಿ ರಜನಿಕಾಂತ್ ಹೊರಡುವಾಗ, ಮಾಧ್ಯಮ ಪ್ರತಿನಿಧಿಗಳು ವಿಜಯ್ ಜನ್ಮದಿನದ ಕುರಿತು ಪ್ರಶ್ನೆ ಕೇಳಿದರು.
‘ನಾನು ಈಗಾಗಲೇ ಅವರಿಗೆ ಫೋನ್ ಮಾಡಿ ಶುಭ ಕೋರಿದ್ದೇನೆ’ ಎಂದು ರಜನಿಕಾಂತ್ ಸರಳವಾಗಿ ಉತ್ತರಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಬದಲು ಖುದ್ದಾಗಿ ಕರೆ ಮಾಡಿ ಮಾತನಾಡಿರುವುದಾಗಿ ಹೇಳಿದ ತಲೈವಾ, ಬಳಿಕ ಕೈಮುಗಿದು ಅಲ್ಲಿಂದ ಹೊರಟರು. ರಜನಿಕಾಂತ್ ಪ್ರತಿಕ್ರಿಯೆ ನೀಡಿದ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Reporter: Why you didn’t wish @CMOTamilnadu for his birthday ❓
Superstar #Rajinikanth: I already wished him through the call♥️ pic.twitter.com/DJxeXybi2g
— AmuthaBharathi (@CinemaWithAB) June 24, 2026
‘ವಿಜಯ್ ಸಿಎಂ ಆಗಬಾರದು ಎಂದು ನಾನು ಹೇಳಿದ್ದೆ ಅಥವಾ ಎರಡು ಪಕ್ಷಗಳನ್ನು ವಿಲೀನಗೊಳಿಸಲು ಪ್ರಯತ್ನಿಸುತ್ತಿದ್ದೆ ಎಂಬಿತ್ಯಾದಿ ವದಂತಿಗಳು ಹರಡಿದ್ದವು. ಅನಗತ್ಯವಾಗಿ ಮಾತನಾಡುವಷ್ಟು ಕೀಳು ಮಟ್ಟದ ವ್ಯಕ್ತಿ ರಜನಿ ಅಲ್ಲ. ವಿಜಯ್ ಮುಖ್ಯಮಂತ್ರಿಯಾದಾಗ ನನಗೆ ಆಶ್ಚರ್ಯ ಮತ್ತು ಸಂತೋಷವಾಗಿತ್ತು. ನಾನು ರಾಜಕೀಯದಲ್ಲೇ ಇಲ್ಲ, ಹಾಗಿರುವಾಗ ನನಗೆ ಅವರ ಮೇಲೆ ಏಕೆ ಅಸೂಯೆ ಇರಬೇಕು? ಒಂದು ವೇಳೆ ಕಮಲ್ ಹಾಸನ್ ಸಿಎಂ ಆದ್ರೆ ನನಗೆ ಅಸೂಯೆ ಆಗಬಹುದು (ನಗು). ವಿಜಯ್ ಮತ್ತು ನನ್ನ ನಡುವೆ 25 ವರ್ಷಗಳ ಜನರೇಷನ್ ಗ್ಯಾಪ್ ಇದೆ. ನಾವು ಸ್ಪರ್ಧಿಸುವುದು ಚೆನ್ನಾಗಿ ಕಾಣುವುದಿಲ್ಲ’ ಎಂದು ಈ ಮೊದಲು ರಜನಿಕಾಂತ್ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ವಿಜಯ್ ಜನ್ಮದಿನಕ್ಕೆ ತಡವಾಗಿಯಾದರೂ ಪ್ರೀತಿಯಿಂದ ವಿಶ್ ಮಾಡಿದ ತ್ರಿಶಾ ಕೃಷ್ಣನ್
52ನೇ ವಯಸ್ಸಿನಲ್ಲೇ ವಿಜಯ್ ಅವರು ಎಂಜಿಆರ್ ಮತ್ತು ಎನ್‌ಟಿಆರ್ ಅವರಿಗಿಂತ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ರಜನಿಕಾಂತ್ ಶ್ಲಾಘಿಸಿದ್ದು, ವಿಜಯ್ ರಾಜಕೀಯ ಭವಿಷ್ಯಕ್ಕೆ ತಮ್ಮ ಹಾರೈಕೆಗಳು ಯಾವಾಗಲೂ ಇರುತ್ತವೆ ಎಂದು ಸ್ಪಷ್ಟಪಡಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.