33 ವರ್ಷಗಳ ಬಳಿಕ ಮಣಿರತ್ನಂ ಸಿನಿಮಾದಲ್ಲಿ ನಟಿಸಲಿರುವ ರಜನೀಕಾಂತ್

|

Updated on: Oct 06, 2024 | 8:28 AM

ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿರುವ ರಜನೀಕಾಂತ್ ಇದೀಗ ಅನಾರೋಗ್ಯದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದರ ನಡುವೆ ರಜನೀಕಾಂತ್ 33 ವರ್ಷಗಳ ಬಳಿಕ ಮಣಿರತ್ನಂ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

33 ವರ್ಷಗಳ ಬಳಿಕ ಮಣಿರತ್ನಂ ಸಿನಿಮಾದಲ್ಲಿ ನಟಿಸಲಿರುವ ರಜನೀಕಾಂತ್
Follow us on

ರಜನೀಕಾಂತ್​ಗೆ 73 ವರ್ಷ ವಯಸ್ಸಾಯ್ತು. ಈಗಲೂ ಸಹ ನಾಯಕ ನಟನಾಗಿ ಮಿಂಚುತ್ತಿದ್ದಾರೆ. ಒಂದರ ಹಿಂದೊಂದು ಆಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಲೂ ಸಹ ರಜನೀಕಾಂತ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ಸಾಲುಗಟ್ಟಿ ನಿಂತಿದ್ದಾರೆ. ಇದೀಗ ರಜನೀಕಾಂತ್, ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ನಡುವೆ ಅವರ ಆರೋಗ್ಯದಲ್ಲಿ ವ್ಯತ್ಯಯವಾಗಿರುವ ಕಾರಣ ಸಿನಿಮಾ ಶೂಟಿಂಗ್ ನಿಂತಿದೆ. ಇದರ ನಡುವೆ ರಜನೀಕಾಂತ್, ಭಾರತದ ದಿಗ್ಗಜ ನಿರ್ದೇಶಕರ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಭಾರತೀಯ ಸಿನಿಮಾರಂಗದ ಹಾದಿ ಬದಲಿಸಿದ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ಮಣಿರತ್ನಂ ಅವರ ಹೊಸ ಸಿನಿಮಾದಲ್ಲಿ ರಜನೀಕಾಂತ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮಣಿರತ್ನಂ ಸಿನಿಮಾದಲ್ಲಿ 33 ವರ್ಷಗಳ ಹಿಂದೆ ರಜನೀಕಾಂತ್ ನಟಿಸಿದ್ದರು. ಸಿನಿಮಾದ ಹೆಸರು ‘ದಳಪತಿ’. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿದ್ದು ಮಾತ್ರವೇ ಅಲ್ಲದೆ, ತಮಿಳು ಚಿತ್ರರಂಗದ ಕಲ್ಟ್ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಇದೀಗ 33 ವರ್ಷಗಳ ಬಳಿಕ ಮತ್ತೊಮ್ಮೆ ಮಣಿರತ್ನಂ ಹಾಗೂ ರಜನೀಕಾಂತ್ ಮತ್ತೆ ಒಂದಾಗುತ್ತಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಿಂದ ರಜನೀಕಾಂತ್ ಡಿಸ್​ಚಾರ್ಜ್, ವಿಶ್ರಾಂತಿಗೆ ಸೂಚನೆ

ಮಣಿರತ್ನಂ ಇದೀಗ ಕಮಲ್ ಹಾಸನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಸಹ 37 ವರ್ಷಗಳ ಬಳಿಕ ಮಣಿರತ್ನಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿಯೇ ದಾಖಲೆ ಬರೆದ, ಸಿನಿಮಾ ಶಾಲೆಗಳಲ್ಲಿ ಪಾಠವಾಗಿ ಕಲಿಸಲಾಗುವ ‘ನಾಯಗನ್’ ಸಿನಿಮಾದಲ್ಲಿ ಈ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಅದಾದ ಮೇಲೆ ಈಗ ‘ಥಗ್ ಲೈಫ್’ ಸಿನಿಮಾದಲ್ಲಿ ಈ ಇಬ್ಬರೂ ಮತ್ತೆ ಒಂದಾಗಿದ್ದಾರೆ.

ಇನ್ನು ರಜನೀಕಾಂತ್ ಇತ್ತೀಚೆಗಷ್ಟೆ ಅನಾರೋಗ್ಯದಿಂದ ಬಳಲಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿರವ ರಜನೀಕಾಂತ್, ಇತ್ತೀಚೆಗೆ ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಮತ್ತೆ ಮಾಡಿದ ವೈದ್ಯರು ಸ್ಟಂಟ್ ಅಳವಡಿಸಿದ್ದು ವಿಶ್ರಾಂತಿಗೆ ಸೂಚಿಸಿದ್ದಾರೆ. ಹಾಗಾಗಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವುದು ತುಸು ತಡವಾಗಲಿದೆ. ಈಗ ಕೈಯಲ್ಲಿರುವ ‘ಕೂಲಿ’ ಸಿನಿಮಾ ಮುಗಿಸಿ ಬಳಿಕ ಮಣಿರತ್ನಂ ಸಿನಿಮಾದಲ್ಲಿ ನಟಿಸಲಿದ್ದಾರೆ ರಜನೀಕಾಂತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ