ನಟ ರಾಮ್ ಚರಣ್ ತೇಜ (Ram Charan Teja) ದೊಡ್ಡ ಸೂಪರ್ ಸ್ಟಾರ್ ಆಗಿರುವ ಜೊತೆಗೆ ಮಹಾನ್ ದೈವ ಭಕ್ತ. ದೇವರ ಪ್ರತಿಯಾಗಿ ಅಪಾರ ಭಕ್ತಿ, ನಂಬಿಕೆ ಮತ್ತು ಶ್ರದ್ಧೆ ಹೊಂದಿದ್ದಾರೆ. ವ್ರತ ಆಚರಣೆ ಇತ್ಯಾದಿಗಳಲ್ಲಿ ಅಪಾರವಾದ ನಂಬಿಕೆ ಹೊಂದಿದ್ದಾರೆ. ಅದರಲ್ಲಿಯೂ ಶಬರಿಮಲೆ ಅಯ್ಯಪ್ಪನ ಕಟ್ಟಾ ಭಕ್ತರಾಗಿರುವ ರಾಮ್ ಚರಣ್ ತೇಜ ಹಲವು ದಿನಗಳ ಕಾಲ ಮಾಲಧಾರಿಯಾಗಿದ್ದ ವ್ರತ ಆಚರಿಸಿ ಮಲೆ ಏರಿಹಯೋಗಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಕಳೆದ ವರ್ಷ ಮಾಲಧಾರಣೆ ಮಾಡಿದ್ದ ನಟ ರಾಮ್ ಚರಣ್ ಈಗಲೂ ಮಾಲ ಧಾರಣೆ ಮಾಡಿದ್ದಾರೆ.
ಸಾಮಾನ್ಯವಾಗಿ ದುಬಾರಿ ಸೂಟು ಅಥವಾ ದುಬಾರಿ ಕಾಸ್ಟೂಮ್, ಕಪ್ಪು ಕನ್ನಡಕ, ವಿದೇಶಿ ಬ್ರ್ಯಾಂಡ್ನ ವಾಚು, ವಿದೇಶಿ ಬ್ರ್ಯಾಂಡ್ನ ಮಿರಿ ಮಿರಿ ಮಿಂಚುವ ಶೂ ಧರಿಸಿ ಕಾಣಿಸಿಕೊಳ್ಳುತ್ತಿದ್ದ ರಾಮ್ ಚರಣ್, ಇದೀಗ ಮಾಲಧಾರಿಯಾಗಿರುವ ಕಾರಣ ಕಪ್ಪು ಬಣ್ಣದ ಸಾಧಾರಣ ಕುರ್ತಾ ಶರ್ಟ್ ಧರಿಸಿ, ಬರಿಗಾಲಲ್ಲಿ ಓಡಾಡುತ್ತಿದ್ದಾರೆ. ಇದೀಗ ಮುಂಬೈಗೆ ಬಂದಿರುವ ರಾಮ್ ಚರಣ್ ತೇಜ ಕೆಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಮಾಲಧಾರಿಯಾಗಿರುವ ಕಾರಣ ಕಪ್ಪು ಬಣ್ಣದ ಸರಳ ಉಡುಗೆ ಧರಿಸಿ, ನಿಯಮದಂತೆ ಚಪ್ಪಲಿ ತ್ಯಜಿಸಿ ಬರಿಗಾಲಲ್ಲಿ ಓಡುತ್ತಿದ್ದಾರೆ. ನಿನ್ನೆ (ಅಕ್ಟೋಬರ್ 03) ಮುಂಬೈನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ. ಮಗಳು ಕ್ಲಿನ್ ಕ್ಲಾರ್ ಜನಿಸಿದ ಬಳಿಕ ಅಯ್ಯಪ್ಪ ಮಾಲೆ ಧರಿಸಿದ್ದ ರಾಮ್ ನಿನ್ನ ದೀಕ್ಷೆಯನ್ನು ಮುಕ್ತಾಯಗೊಳಿಸಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಜೊತೆ ರೊಮ್ಯಾನ್ಸ್ ಮಾಡ್ತಾರೆ ರವೀನಾ ಟಂಡನ್ ಮಗಳು?
ತ್ರಿಬಲ್ ಆರ್ ಸೂಪರ್ ಡೂಪರ್ ಹಿಟ್ ಆದ ಬಳಿಕವೂ ರಾಮ್ ಚರಣ್ ಮಾಲೆ ಧರಿಸಿದ್ದರು. ಆಗಲೂ ಕೂಡ ಕೇವಲ ಒಂದೆರಡು ದಿನಗಳಿಗಾಗಿ ಮಾಲೆ ಧರಿಸಿರಲಿಲ್ಲ. ಬದಲಿಗೆ ಬರೋಬ್ಬರಿ 41 ದಿನಗಳ ಕಾಲ ಅವರು ಮಾಲಾಧಾರಿಯಾಗಿ ಅಯ್ಯಪ್ಪನ ಸ್ಮರಣೆ ಮಾಡಿದ್ದರು. ಮಾಲಾಧಾರಿ ಪಾಲಿಸಬೇಕಾದ ಕಠಿಣ ನಿಯಮಗಳು 41 ದಿನಗಳ ವರೆಗೆ ಪಾಲಿಸಿದ್ದರು, ಇದೀಗ ಮಗಳ ಹುಟ್ಟಿದ ಬಳಿಕ ಮಾಲೆ ಧರಿಸಿದ್ದ ರಾಮ್ ಚರಣ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನದ ಬಳಿಕ ಅಯ್ಯಪ್ಪ ದೀಕ್ಷೆಯನ್ನು ಮುಗಿಸಿದ್ದಾರೆ. ದೇಗುಲಕ್ಕೆ ರಾಮ್ ಚರಣ್ ಆಗಮಿಸಿದ ಸಂದರ್ಭದಲ್ಲಿ ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದರು.
ರಾಮ್ ಚರಣ್ ಪ್ರಸ್ತುತ ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಬಾಲಿವುಡ್ನ ಸಿನಿಮಾ ಒಂದರಲ್ಲಿ ನಟಿಸುವ ಸಾಧ್ಯತೆ ಇದೆ. ಈ ನಡುವೆ ಕೆಲವು ಸಿನಿಮಾಗಳ ನಿರ್ಮಾಣವನ್ನೂ ರಾಮ್ ಚರಣ್ ಮಾಡುತ್ತಿದ್ದಾರೆ. ತಂದೆ ಚಿರಂಜೀವಿ ನಟನೆಯ ಒಂದು ಸಿನಿಮಾಕ್ಕೆ ಬಂಡವಾಳ ಹೂಡುವವರಿದ್ದಾರೆ. ಜೊತೆಗೆ ತೆಲುಗಿನ ನಟ ನಿಖಿಲ್ ಅಭಿನಯದ ಐತಿಹಾಸಿಕ ಸಿನಿಮಾ ಒಂದಕ್ಕೂ ರಾಮ್ ಚರಣ್ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ