ಚಿರಂಜೀವಿಗೆ ಕ್ಷಮಾಪಣೆ ಕೇಳಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

Megastar Chiranjeevi: 25 ವರ್ಷಗಳ ಹಿಂದೆ ಬಿಡುಗಡೆ ಆಗಿ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ‘ಶಿವ’ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ, ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರ ಬೆನ್ನಲ್ಲೆ ‘ಶಿವ’ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಚಿರಂಜೀವಿ ಅವರ ಕ್ಷಮೆ ಕೇಳಿದ್ದಾರೆ.

ಚಿರಂಜೀವಿಗೆ ಕ್ಷಮಾಪಣೆ ಕೇಳಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ
Ram Gopal Varma Chiru

Updated on: Nov 11, 2025 | 11:52 AM

ರಾಮ್ ಗೋಪಾಲ್ ವರ್ಮಾ (Ram Gopal Varma) ಇತ್ತೀಚಿಗೆ ತಮ್ಮ ಸಿನಿಮಾಗಳಿಗಿಂತಲೂ ತಮ್ಮ ಟ್ವೀಟ್​​ಗಳಿಂದ, ವಿವಾದಾತ್ಮಕ ಹೇಳಿಕೆಗಳಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ತೆಲುಗು ಚಿತ್ರರಂಗ ಮತ್ತು ರಾಜಕೀಯ ರಂಗದ ಕೆಲವರ ಬಗ್ಗೆ ಪೂರ್ವಾಗ್ರಹ ಹೊಂದಿರುವ ರಾಮ್ ಗೋಪಾಲ್ ವರ್ಮಾ ಅವರ ಬಗ್ಗೆ ವ್ಯಂಗ್ಯವಾಗಿ ಟ್ವೀಟ್​​ಗಳನ್ನು ಮಾಡುವುದು, ಟೀಕೆ ಮಾಡುವ ರೀತಿಯ ಸಿನಿಮಾಗಳನ್ನು ಮಾಡಿ ಬಿಡುಗಡೆ ಮಾಡುವುದು ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಬಗ್ಗೆ ಈ ರೀತಿಯ ಹಲವಾರು ಟ್ವೀಟ್​​ಗಳನ್ನು ಅವರು ಮಾಡಿದ್ದಾರೆ. ಆದರೆ ಇದೀಗ ರಾಮ್ ಗೋಪಾಲ್ ವರ್ಮಾ, ಮೆಗಾಸ್ಟಾರ್ ಚಿರಂಜೀವಿಗೆ ಕ್ಷಮಾಪಣೆ ಕೇಳಿದ್ದಾರೆ.

ರಾಮ್ ಗೋಪಾಲ್ ವರ್ಮಾ ನಿರ್ದೇಶಿಸಿ, ನಾಗಾರ್ಜುನ ನಟಿಸಿದ್ದ ‘ಶಿವ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿಯೇ ಕಲ್ಟ್ ಸ್ಥಾನ ಪಡೆದುಕೊಂಡಿರುವ ಸಿನಿಮಾ. ಚಲನಚಿತ್ರದ ವ್ಯಾಕರಣವನ್ನೇ ಬದಲಾಯಿಸಿದ ಸಿನಿಮಾ ಅದು. ಇದೀಗ ಆ ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾದ ಬೆನ್ನಲ್ಲೆ ಸಿನಿಮಾದ ಮರು ಬಿಡುಗಡೆ ಆಗುತ್ತಿದ್ದು, ಇದಕ್ಕಾಗಿ ಅದ್ಧೂರಿ ಪ್ರಚಾರಗಳು ಸಹ ನಡೆಯುತ್ತಿವೆ.

ನಟ ಮೆಗಾಸ್ಟಾರ್ ಚಿರಂಜೀವಿ, ‘ಶಿವ’ ಸಿನಿಮಾದ ಬಗ್ಗೆ ವಿಡಿಯೋ ಒಂದನ್ನು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ‘ಶಿವ’ ಕೇವಲ ಸಿನಿಮಾ ಅಲ್ಲ, ಅದೊಂದು ಕ್ರಾಂತಿ. ಆ ಸಿನಿಮಾ ನೋಡಿ ನಾನು ಮೂಕವಿಸ್ಮಿತನಾಗಿಬಿಟ್ಟಿದ್ದೆ’ ಎಂದೆಲ್ಲ ಚಿರಂಜೀವಿ ಕೊಂಡಾಡಿದ್ದಾರೆ. ನಟ ನಾಗಾರ್ಜುನ, ನಾಯಕಿ ಅಮಲಾ ಸೇರಿದಂತೆ ಸಿನಿಮಾದಲ್ಲಿ ನಟಿಸಿರುವ ಎಲ್ಲರನ್ನೂ ಕೊಂಡಾಡಿದ್ದಾರೆ. ಜೊತೆಗೆ ರಾಮ್ ಗೋಪಾಲ್ ವರ್ಮಾ ಅವರನ್ನು ವಿಷನರಿ ಎಂದು ಹೊಗಳಿದ್ದಾರೆ ಚಿರಂಜೀವಿ. ವರ್ಮಾ ತಮ್ಮ ವಿರುದ್ಧ ಅಷ್ಟೆಲ್ಲ ವಿಷಕಾರಿದ್ದರೂ ಸಹ ಚಿರಂಜೀವಿ, ವರ್ಮಾ ಬಗ್ಗೆ ಒಳ್ಳೆಯ ಮಾತುಗಳನ್ನೇ ಹೇಳಿದ್ದಾರೆ.

ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿಯ ಕ್ಯೂಟ್ ಡ್ಯಾನ್ಸ್ ಸ್ಟೆಪ್ಪು

‘ಶಿವ’ ಸಿನಿಮಾ ನೋಡಿದಾಗಲೇ ವರ್ಮಾ ಒಬ್ಬ ಅದ್ಭುತ ನಿರ್ದೇಶಕ, ತೆಲುಗು ಚಿತ್ರರಂಗದ ಭವಿಷ್ಯ ಆ ವ್ಯಕ್ತಿ ಎಂಬುದು ನನಗೆ ಅರ್ಥವಾಯ್ತು. ಆ ವ್ಯಕ್ತಿ ‘ಶಿವ’ ಸಿನಿಮಾ ಅನ್ನು ತೆಗೆದಿರುವ ರೀತಿ, ಕ್ಯಾಮೆರಾ ಆಂಗಲ್, ನೆರಳು-ಬೆಳಕಿನ ಕಂಪೋಸಿಷನ್, ಸೌಂಡ್ ಎಲ್ಲವೂ ಭಿನ್ನವಾಗಿತ್ತು. ಆಗಿನ ಕಾಲಕ್ಕೆ ಬಹಳ ನವೀನ ಎನಿಸಿತ್ತು’ ಎಂದಿದ್ದಾರೆ.

ಚಿರಂಜೀವಿ ಅವರ ವಿಡಿಯೋ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ‘ಚಿರಂಜೀವಿ ಅವರಿಗೆ ಧನ್ಯವಾದಗಳು, ಅಲ್ಲದೆ, ನಾನು ಈ ಸಮಯದಲ್ಲಿ ನಿಮ್ಮ ಕ್ಷಮೆ ಕೇಳಲೇಬೇಕು. ನಾನು ನಿಮಗೆ ಉದ್ದೇಶಪೂರ್ವಕವಾಗಿ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಿಮ್ಮ ವಿಶಾಲ ಹೃದಯಕ್ಕೆ ಮತ್ತೊಮ್ಮೆ ಧನ್ಯವಾದಗಳು’ ಎಂದಿದ್ದಾರೆ.

ಚಿರಂಜೀವಿ ಮತ್ತು ಅವರ ಕುಟುಂಬದ ಬಗ್ಗೆ ವರ್ಮಾ ಅಷ್ಟು ವ್ಯಂಗ್ಯ ಮಾಡಿದ್ದರೂ ಸಹ ವರ್ಮಾ ಅವರನ್ನು ಕೊಂಡಾಡಿದ ಚಿರಂಜೀವಿ ಅವರ ವಿಶಾಲ ಹೃದಯವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಆದರೆ ಕೆಲ ಚಿರಂಜೀವಿ ಅಭಿಮಾನಿಗಳು, ‘ವರ್ಮಾ, ಕ್ಷಮೆಗೆ ಅರ್ಹವಾದ ವ್ಯಕ್ತಿಯಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ