
ರಾಮ್ ಗೋಪಾಲ್ ವರ್ಮಾ ಒಂದು ಕಾಲದ ಸ್ಟಾರ್ ನಿರ್ದೇಶಕ, ಭಾರತೀಯ ಚಿತ್ರರಂಗಕ್ಕೆ ಹೊಸ ದಿಕ್ಕು ಕೊಟ್ಟ ನಿರ್ದೇಶಕರಲ್ಲಿ ಒಬ್ಬರಾಗಿದ್ದವರು. ಆದರೆ ಈಗ ಕಳೆದ ಕೆಲ ವರ್ಷಗಳಿಂದ ತಮ್ಮ ಪ್ರತಿಭೆಯನ್ನು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದಕ್ಕೆ ಮಾತ್ರವೇ ಬಳಸುತ್ತಿದ್ದಾರೆ. ಸ್ಟಾರ್ ನಟರ ಬಗ್ಗೆ, ದೊಡ್ಡ ರಾಜಕಾರಣಿಗಳ ಬಗ್ಗೆ ಇನ್ನಿತರೆ ವಿಷಯಗಳ ಬಗ್ಗೆ ಒಂದಾದ ಮೇಲೆ ಒಂದರಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇದರಿಂದಾಗಿ ಕೆಲ ಬಾರಿ ಇಕ್ಕಟ್ಟಿಗೆ ಸಹ ಸಿಲುಕಿಕೊಂಡಿದ್ದಾರೆ. ಆದರೂ ಸಹ ತಮ್ಮ ಈ ಚಾಳಿಯನ್ನು ಬಿಟ್ಟಿಲ್ಲ. ಇದೀಗ ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ ಬಗ್ಗೆ ಇಂಥಹುದೇ ಒಂದು ಹೇಳಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ‘ಕೆಜಿಎಫ್ 2’ ಸಿನಿಮಾ ಅತ್ಯಂತ ಕೆಟ್ಟ ಸಿನಿಮಾ, ಆದರೂ ಅದು ಭಾರಿ ಹಿಟ್ ಆಯ್ತು’ ಎಂಬರ್ಥದ ಹೇಳಿಕೆ ನೀಡಿದ್ದಾರೆ. ಪಿಂಕ್ವಿಲ್ಲಾಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ‘ಒಬ್ಬ ಖ್ಯಾತ ನಿರ್ದೇಶಕ ನನಗೆ ಕರೆ ಮಾಡಿ, ಕೆಜಿಎಫ್ 2 ಸಿನಿಮಾ ನೋಡಲು ಪ್ರಯತ್ನಿಸಿದೆ ಆದರೆ ನನ್ನ ಕೈಯಲ್ಲಿ 15 ನಿಮಿಷ ಸಹ ನೋಡಲು ಆಗಲಿಲ್ಲ. 15 ನಿಮಿಷ ನೋಡಿ ನಾನು ಬ್ರೇಕ್ ತೆಗೆದುಕೊಂಡೆ ಆ ನಂತರ ಹೋಗಿ ಉಸಿರಾಟದ ವ್ಯಾಯಾಮ, ಪ್ರಾಣಾಯಮ ಮಾಡಿ ಬಂದು ಮತ್ತೆ ನೋಡಲು ಪ್ರಯತ್ನಿಸಿದೆ ಆಗಲೂ ಸಹ 15 ನಿಮಿಷ ಸಹ ನನ್ನಿಂದ ನೋಡಲು ಆಗಲಿಲ್ಲ, ಆ ನಂತರ ಮತ್ತೆ ಹೋಗಿ ಸ್ನಾನ ಮಾಡಿ ಬಂದೆ ಬಲವಂತದಿಂದ ನೋಡಿದರೂ ಇಂಟರ್ವೆಲ್ ವರೆಗೂ ಮಾತ್ರವೇ ನೋಡಲು ಸಾಧ್ಯ ಆಗಿದ್ದು. ಆದರೆ ಇಂಥಹಾ ಸಿನಿಮಾ ಅಷ್ಟು ದೊಡ್ಡ ಹಿಟ್ ಹೇಗಾಯ್ತು ಎಂದು ಅವರು ನನ್ನನ್ನು ಪ್ರಶ್ನೆ ಮಾಡಿದರು’ ಎಂದಿದ್ದಾರೆ ವರ್ಮಾ.
ಇದನ್ನೂ ಓದಿ:‘ಗೇಮ್ ಚೇಂಜರ್ ಬಾಕ್ಸ್ ಆಫೀಸ್ ಲೆಕ್ಕ ಸುಳ್ಳು’: ಹಿಗ್ಗಾಮುಗ್ಗ ಜಾಡಿಸಿದ ರಾಮ್ ಗೋಪಾಲ್ ವರ್ಮಾ
‘ಅದಾದ ಎರಡು ದಿನದ ಬಳಿಕ ನಾನು ನನ್ನ ತಂಡದವರ ಜೊತೆ ಮಾತನಾಡುತ್ತಿದ್ದಾಗ ಇದೇ ವಿಷಯ ಚರ್ಚಿಸಿದೆ. ಅಷ್ಟು ಇಲ್ಲಾಜಿಕಲ್ ಆಗಿರುವ ಸಿನಿಮಾ ಇಷ್ಟು ದೊಡ್ಡ ಹಿಟ್ ಆಗಿದ್ದು ಹೇಗೆ ಎಂದು ನಾನು ಪ್ರಶ್ನಿಸಿದೆ. ಆದರೆ ಆ ಇಲ್ಲಾಜಿಕಲ್ ಎನ್ನುವುದೇ ಕೆಜಿಎಫ್ ಪಾಲಿಗೆ ವರವಾಗಿದೆ. ಹಳೆ ಹಾಲಿವುಡ್ ಸಿನಿಮಾಗಳ ಕತೆಯೂ ಇದೆ. ಅವು ಸಹ ಇಲ್ಲಾಜಿಕಲ್ ಆದರೆ ಅವುಗಳ ಯಶಸ್ಸು ನಿಜವೇ ಆಗಿದೆ’ ಎಂದಿದ್ದಾರೆ ರಾಮ್ ಗೋಪಾಲ್ ವರ್ಮಾ.
ಇದೇ ಸಂದರ್ಶನದಲ್ಲಿ, ರಾಮ್ ಗೋಪಾಲ್ ವರ್ಮಾ, ರಜನೀಕಾಂತ್, ಅಮಿತಾಬ್ ಬಚ್ಚನ್ ಇನ್ನಿತರೆ ಕೆಲವು ನಟರ ನಟನಾ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ್ದಾರೆ. ‘ಪುಷ್ಪ’ ಸಿನಿಮಾ ಸಹ ತಲೆ ಬುಡವಿಲ್ಲದ (ಇಲ್ಲಾಜಿಕಲ್) ಸಿನಿಮಾ ಎಂದಿದ್ದಾರೆ. ಹಲವು ದಕ್ಷಿಣ ಭಾರತ ಸಿನಿಮಾ ನಿರ್ದೇಶಕರಿಗೆ ಸಿನಿಮಾದ ಅ,ಆ ಬರುವುದಿಲ್ಲ, ಉತ್ತರದ ಸಿನಿಮಾ ವೀಕ್ಷಕರು ಅವರ ಮೇಲೆ ವಾಂತಿ ಮಾಡಿಬಿಡುತ್ತಾರೆ ಹಾಗೆ ವರ್ತಿಸುತ್ತಾರೆ ಎಂದೆಲ್ಲ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Wed, 12 February 25