ಹೆಣ್ಣು ಮಕ್ಕಳ ಬಗ್ಗೆ ಚಿರಂಜೀವಿ ಹೇಳಿಕೆಗೆ ತೀವ್ರ ಆಕ್ರೋಶ
Megastar Chiranjeevi: ಮೆಗಾಸ್ಟಾರ್ ಚಿರಂಜೀವಿಗೆ ಕಳೆದ ವರ್ಷ ಭಾರತದ ಎರಡನೇ ಅತ್ಯುನ್ನತ ನಾಗರೀಕ ಗೌರವವಾದ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ. ಆದರೆ ಇದೀಗ ಚಿರಂಜೀವಿ ನೀಡಿರುವ ಹೇಳಿಕೆಯೊಂದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚಿರಂಜೀವಿ, ಹೆಣ್ಣು ಮಕ್ಕಳ ಬಗ್ಗೆ ನೀಡಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕಳೆದ ವರ್ಷವಷ್ಟೆ ದೇಶದ ಎರಡನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ. ಚಿರಂಜೀವಿ ಅವರಿಗೆ ಪದ್ಮವಿಭೂಷಣ ಘೋಷಣೆಯಾದಾಗ ಪ್ರಶಸ್ತಿಗೆ ಅವರು ಅರ್ಹರು ಎಂದೇ ವ್ಯಾಖ್ಯಾನಿಸಲಾಗಿತ್ತು. ಚಿರಂಜೀವಿ ಅವರ ಐದು ದಶಕಗಳ ಸಿನಿಮಾ ವೃತ್ತಿ ಪಯಣ ನೋಡಿದರೂ ಇದು ನಿಜವೇ ಅನಿಸುತ್ತದೆ. ಆದರೆ ಇತ್ತೀಚೆಗೆ ಚಿರಂಜೀವಿ ನೀಡಿರುವ ಹೇಳಿಕೆಯೊಂದು ಅವರನ್ನು ವಿವಾದಕ್ಕೆ ದೂಡಿದೆ. ಸಿನಿಮಾ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಮಾತನಾಡುತ್ತಾ ತಮಾಷೆಯ ಧಾಟಿಯಲ್ಲಿ ಆಡಿರುವ ಮಾತಿನಿಂದ ಜನರ ಆಕ್ರೋಶಕ್ಕೆ ಗುರಿ ಆಗಿದ್ದಾರೆ ಮೆಗಾಸ್ಟಾರ್.
ನಟ ಚಿರಂಜೀವಿ, ತಮ್ಮ ಆತ್ಮಿಯ ಮಿತ್ರ, ತೆಲುಗು ಚಿತ್ರರಂಗದ ಲೆಜೆಂಡರಿ ಹಾಸ್ಯನಟ ಬ್ರಹ್ಮಾನಂದಂ ಅವರು ನಟಿಸಿರುವ ‘ಬ್ರಹ್ಮ ಆನಂದಂ’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ‘ನಮ್ಮ ಮನೆಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾನು ಮನೆಯಲ್ಲಿದ್ದಾಗ ಮಕ್ಕಳೊಟ್ಟಿಗೆ ಇದ್ದೇನೆ ಎನಿಸುವುದಿಲ್ಲ ಬದಲಿಗೆ ಲೇಡೀಸ್ ಹಾಸ್ಟೆಲ್ನ ವಾರ್ಡನ್ ಆಗಿದ್ದೇನೆ ಅನಿಸುತ್ತದೆ’ ಎಂದು ತಮಾಷೆ ಮಾಡಿದರು.
ಇದನ್ನೂ ಓದಿ:ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಅನುಪಮ್ ಖೇರ್, ಚಿರಂಜೀವಿ; ಕಾರಣವೇನು?
ಮುಂದುವರೆದು, ‘ರಾಮ್ ಚರಣ್ ಗಂಡು ಮಗುವಿಗೆ ಜನ್ಮ ನೀಡಲಿ ಎಂಬುದು ನನ್ನ ಬಯಕೆ ಆಗಿತ್ತು. ನಮ್ಮ ತಲೆಮಾರನ್ನು ರಾಮ್ ಚರಣ್ ಮಗ ಮುಂದೆ ತೆಗೆದುಕೊಂಡು ಹೋಗಲಿ ಎಂಬುದು ಉದ್ದೇಶವಾಗಿತ್ತು. ಆದರೆ ರಾಮ್ ಚರಣ್ಗೆ ಮಗಳೆಂದರೆ ಪಂಚ ಪ್ರಾಣ ಹಾಗಾಗಿ ರಾಮ್ ಚರಣ್ ಮತ್ತೊಂದು ಹೆಣ್ಣು ಮಗುವಿಗೆ ತಂದೆ ಆಗುತ್ತಾನೇನೋ ಎಂಬ ಭಯ ಇದೆ’ ಎಂದಿದ್ದಾರೆ ನಟ ಚಿರಂಜೀವಿ.
ಚಿರಂಜೀವಿ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಚಿರಂಜೀವಿ ಅವರ ಹೇಳಿಕೆಯನ್ನು ಮಹಿಳಾ ವಿರೋಧಿ ಎಂದು ಕರೆಯಲಾಗಿದೆ. ಚಿರಂಜೀವಿ ಹೇಳಿಕೆ ಭ್ರೂಣ ಹತ್ಯೆಗೆ ಇಂಬು ನೀಡುವಂತಿದೆ, ಹೆಣ್ಣು ಮಕ್ಕಳು ಕುಟುಂಬಕ್ಕೆ ಭಾರ ಎಂಬ ಅರ್ಥ ಹೊಮ್ಮಿಸುವಂತಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ