ಸ್ಯಾಂಡಲ್ವುಡ್ನಲ್ಲೂ ವಿವಾದ ಸೃಷ್ಟಿಸಿತ್ತು ಭೀಮಾ ತೀರದ ಕತೆ
Bheema Theeradalli: ಬಾಗಪ್ಪ ಹರಿಜನ್ ಹತ್ಯೆ ಮೂಲಕ ಮತ್ತೊಮ್ಮೆ ಭೀಮಾ ತೀರದ ರಕ್ತ ಸಿಕ್ತ ಇತಿಹಾಸ ಚರ್ಚೆಗೆ ಬಂದಿದೆ. ಚಂದಪ್ಪ ಹರಿಜನನ ಸಹೋದರ ಸಂಬಂಧಿ, ಬಲಗೈ ಭಂಟನಾಗಿದ್ದ ಬಾಗಪ್ಪ ಹರಿಜನ್ ಅನ್ನು ಇದೇ ಮಂಗಳವಾರ ಹತ್ಯೆ ಮಾಡಲಾಗಿದೆ. ಅಂದಹಾಗೆ ಭೀಮಾ ತೀರದ ಕತೆ ಸ್ಯಾಂಡಲ್ವುಡ್ನಲ್ಲೂ ಬಿಸಿ ಹಬೆ ಎಬ್ಬಿಸಿತ್ತು ವಿವರ ಇಲ್ಲಿದೆ.

ಭೀಮಾ ತೀರದ ಹಂತಕರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಂಗಳವಾರ ರಾತ್ರಿಯಷ್ಟೆ ಬಾಗಪ್ಪ ಹರಿಜನ್ ಅನ್ನು ವಿಜಯಪುರದ ಮದಿನಾ ನಗರದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಭೀಮಾ ತೀರದಲ್ಲಿ ಅಟ್ಟಹಾಸ ಮೆರೆದಿದ್ದ ಚಂದಪ್ಪ ಹರಿಜನನ ಬಲಗೈ ಭಂಟನಾಗಿದ್ದ ಬಾಗಪ್ಪ ಹರಿಜನ್ ಈ ಹಿಂದೆ ಕೆಲ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಇದೀಗ ಬಾಗಪ್ಪನ ಹತ್ಯೆ ಮೂಲಕ ಭೀಮಾ ತೀರದ ರಕ್ತ ಸಿಕ್ತ ಇತಿಹಾಸ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಭೀಮಾ ತೀರದ ಕೊಲೆಗಳು ಪೊಲೀಸರನ್ನು ನಿದ್ದೆಗೆಡಿಸಿರುವುದು ಮಾತ್ರವೇ ಅಲ್ಲದೆ, ಈ ಹಿಂದೆ ಸ್ಯಾಂಡಲ್ವುಡ್ನಲ್ಲೂ ಬಿರುಗಾಳಿ ಎಬ್ಬಿಸಿತ್ತು.
2012 ರ ಏಪ್ರಿಲ್ 6 ರಂದು ದುನಿಯಾ ವಿಜಯ್ ನಟನೆಯ ‘ಭೀಮಾ ತೀರದಲ್ಲಿ’ ಹೆಸರಿನ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾದಲ್ಲಿ ನಟ ದುನಿಯಾ ವಿಜಯ್ ಚಂದಪ್ಪ ಹರಿಜನ್ ಪಾತ್ರದಲ್ಲಿ ನಟಿಸಿದ್ದರು. ಓಂ ಪ್ರಕಾಶ್ ರಾವ್ ಈ ಸಿನಿಮಾದ ನಿರ್ದೇಶನ ಮಾಡಿದ್ದರು. ಆದರೆ ಸಿನಿಮಾ ಬಿಡುಗಡೆ ಆದ ಮರುದಿನವೇ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಸಿನಿಮಾ ತಂಡದ ವಿರುದ್ಧ ಆರೋಪ ಮಾಡಿ, ತಮ್ಮ ರಚನೆಯ ‘ಭೀಮಾ ತೀರದ ಹಂತಕರು’ ಪುಸ್ತಕದ ಅಂಶಗಳನ್ನು ಕದ್ದು ಸಿನಿಮಾ ಮಾಡಲಾಗಿದೆ ಎಂದು ಆರೋಪ ಮಾಡಿದರು.
ಟಿವಿ9 ಸ್ಟುಡಿಯೋನಲ್ಲಿ ಚಿತ್ರತಂಡ ಹಾಗೂ ರವಿ ಬೆಳಗೆರೆ ಅವರನ್ನು ಮುಖಾ-ಮುಖಿ ಆಗಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ಚರ್ಚೆ ಸಹ ಮಾಡಲಾಗಿತ್ತು. ಚರ್ಚೆಯ ವೇಳೆ ಹಲವು ಬಾರಿ ದುನಿಯಾ ವಿಜಯ್ ಮತ್ತು ಬೆಳಗೆರೆ ಅವರ ನಡುವೆ ಏರಿದ ಧ್ವನಿಯಲ್ಲಿ ಮಾತುಗಳು ವಿನಿಮಯವಾದವು. ‘ಭೀಮಾ ತೀರದ ಯಾರಿಗೂ ಗೊತ್ತಿರಲಿಲ್ಲ, ನಾಲ್ಕು ವರ್ಷಗಳ ಕಾಲ ಅಲ್ಲಿ ಅಡ್ಡಾಡಿ ಮಾಹಿತಿ ಸಂಗ್ರಹಿಸಿ ಬರೆದಿದ್ದೇನೆ. ನಾನು ಪುಸ್ತಕ ಬರೆಯುವ ಮುನ್ನ ಚಂದಪ್ಪ ಹರಿಜನ್ ಹೆಸರು ಯಾರಿಗೂ ತಿಳಿದಿರಲಿಲ್ಲ. ನನ್ನ ಬೌದ್ಧಿಕ ಆಸ್ತಿಯನ್ನು ಕದ್ದಿದ್ದೀರಿ’ ಎಂದು ರವಿ ಬೆಳಗೆರೆ ಆರೋಪಿಸಿದ್ದರು.
ಇದನ್ನೂ ಓದಿ:ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಹಾಡಹಗಲೇ ರೌಡಿಶೀಟರ್ ಭೀಕರ ಹತ್ಯೆ
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು, ‘ನಾನು 1996 ರಲ್ಲಿ ‘ಸಿಂಹದ ಮರಿ’ ಸಿನಿಮಾದ ಶೂಟಿಂಗ್ಗಾಗಿ ಉತ್ತರ ಕರ್ನಾಟಕಕ್ಕೆ ಹೋದಾಗ ಅಲ್ಲಿನವರಿಂದ ನನಗೆ ಚಂದಪ್ಪನ ವಿಷಯ ತಿಳಿದಿತ್ತು. ಅದನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಇದು ನಿಜವಾದ ಕತೆ ಅಲ್ಲ, ಕಾಲ್ಪನಿಕ ಕತೆ, ಇಲ್ಲಿ ಬೇರೆ ಕೆಲವು ಪಾತ್ರಗಳನ್ನು ಸೃಷ್ಟಿಸಿದ್ದೇವೆ. ಅಲ್ಲದೆ ಇದು ಕಾಲ್ಪನಿಕ ಕತೆ ಎಂಬುದನ್ನು ಚಿತ್ರದ ಆರಂಭದಲ್ಲಿಯೇ ತೋರಿಸಿದ್ದೇವೆ’ ಎಂದಿದ್ದರು.
ವಿವಾದ ಮುಂದುವರೆದು, ದುನಿಯಾ ವಿಜಯ್ ಅವರ ಖಾಸಗಿ ಬದುಕಿನ ಬಗ್ಗೆ ಸಹ ರವಿ ಬೆಳಗೆರೆ ಕಮೆಂಟ್ ಮಾಡಿದ್ದರು. ಇದಕ್ಕೆ ದುನಿಯಾ ವಿಜಯ್ ಸಹ ಏಕವಚನದಲ್ಲಿ ನಿಂದಿಸಿ ಟಾಂಗ್ ಕೊಟ್ಟಿದ್ದರು. ನಟ ದರ್ಶನ್ ಹೆಸರನ್ನು ಸಹ ರವಿ ಬೆಳಗೆರೆ ಎಳೆದು ತಂದಿದ್ದರು.
ಆ ನಂತರ ‘ಭೀಮಾ ತೀರದಲ್ಲಿ’ ಸಿನಿಮಾದ ವಿರುದ್ಧ ಕೊರಮ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ತಮ್ಮ ಸಮುದಾಯವನ್ನು ಅಪಮಾನಕರ ರೀತಿಯಲ್ಲಿ ಬಿಂಬಿಸಲಾಗಿದೆ ಎಂದು ಆರೋಪಿಸಿದ್ದರು. ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ದುನಿಯಾ ವಿಜಯ್, ನಿರ್ಮಾಪಕ ಅಣಜಿ ನಾಗರಾಜ್ ಅವರ ಕ್ಷಮೆಗೆ ಒತ್ತಾಯಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




