1990’s ಸಿನಿಮಾದ ಟ್ರೇಲರ್ ರಿಲೀಸ್ ಮಾಡಿದ ಡಾ. ನಾ. ಸೋಮೇಶ್ವರ; ಇದು ಆ ಕಾಲದ ಕಥೆ
ಶೀರ್ಷಿಕೆಗೆ ತಕ್ಕಂತೆ 90ರ ಕಾಲಘಟ್ಟದ ಲವ್ಸ್ಟೋರಿ ‘1990s’ ಚಿತ್ರದಲ್ಲಿದೆ. ಟ್ರೇಲರ್ ನೋಡಿ ನಾ. ಸೋಮೇಶ್ವರ ಅವರು ಮೆಚ್ಚಿಕೊಂಡಿದ್ದಾರೆ. ಹೊಸ ಕಲಾವಿದರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ಫೆಬ್ರವರಿ 28ಕ್ಕೆ ಈ ಚಿತ್ರ ತೆರೆಕಾಣಲಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಯಿತು.

ಕಿರುತೆರೆಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕ ಮನೆಮಾತಾದ ಡಾ. ನಾ. ಸೋಮೇಶ್ವರ ಅವರು ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಈಗ ಅವರು ಕನ್ನಡದ ‘1990s’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಅವರ ಜೊತೆ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಕೂಡ ಭಾಗಿ ಆಗಿದ್ದಾರೆ. ಇಬ್ಬರೂ ಸೇರಿ ‘1990s’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಬಳಿಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಸ್ಟಾರ್ ನಟರ ಸಿನಿಮಾಗಳು ಬೇರೆ ಬೇರೆ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುವುದು ಸಾಮಾನ್ಯ. ಆದರೆ ಹೊಸಬರ ‘1990s’ ಸಿನಿಮಾ ಕೂಡ ಕನ್ನಡದ ಜೊತೆ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಲಿದೆ ಎಂಬುದು ವಿಶೇಷ. ‘ಮನಸ್ಸು ಮಲ್ಲಿಗೆ ಕಂಬೈನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ನಂದಕುಮಾರ್ ಸಿಎಂ ಅವರು ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದಲ್ಲಿ ಅರುಣ್ ಹಾಗೂ ರಾಣಿ ವರದ್ ಅವರು ಪ್ರಮುಖ ಪಾತ್ರಗಳನ್ನು ನಿಭಾಗಿಸಿದ್ದಾರೆ. ಹೆಸರೇ ಸೂಚಿಸುವಂತೆ ‘1990s’ ಸಿನಿಮಾದಲ್ಲಿ 90ರ ದಶಕದ ಕಹಾನಿ ಇದೆ. ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ಗಮನ ಸೆಳೆದಿದ್ದ ಈ ಸಿನಿಮಾ ಈಗ ಟ್ರೇಲರ್ ಮೂಲಕ ಸದ್ದು ಮಾಡಲು ಆರಂಭಿಸಿದೆ. ಈ ಸಿನಿಮಾದ ಟ್ರೇಲರ್ ನೋಡಿದ ಡಾ. ನಾ. ಸೋಮೇಶ್ವರ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಕೂಡ ‘1990s’ ಸಿನಿಮಾದ ಟ್ರೇಲರ್ ಮೆಚ್ಚಿಕೊಂಡರು. ಈ ಸಿನಿಮಾದಲ್ಲಿ ಪ್ರೇಮಕಥೆಯೇ ಮುಖ್ಯವಾಗಿದೆ. ಟ್ರೇಲರ್ನಲ್ಲಿ ಅದು ಸ್ಪಷ್ಟವಾಗಿ ಘೋಚರಿಸಿದೆ. ‘ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳು ನಮ್ಮ ಸಿನಿಮಾದಲ್ಲಿವೆ. ಚಿತ್ರತಂಡದ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ’ ಎಂದಿದ್ದಾರೆ ನಿರ್ದೇಶಕ ನಂದಕುಮಾರ್ ಸಿ.ಎಂ.
ಇದನ್ನೂ ಓದಿ: ಸೀಕ್ರೆಟ್ ಆಗಿ ಎಂಗೇಜ್ ಆದ್ರಾ ರಮ್ಯಾ? ಉಂಗುರದ ವಿಷಯಕ್ಕೆ ನಟಿಯ ಪ್ರತಿಕ್ರಿಯೆ
ನಿರ್ಮಾಪಕರಲ್ಲೊಬ್ಬರಾದ ಅರುಣ್ ಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿದ ಗಣ್ಯರಿಗೆ ಧನ್ಯವಾದ ತಿಳಿಸಿದರು. ಫೆಬ್ರವರಿ 28ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ದೇವ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇ.ಸಿ. ಮಹಾರಾಜ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಹಾಲೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೃಷ್ಣ ಅವರು ಸಂಕಲನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




