ಚಿರಂಜೀವಿ ಜೊತೆ ನಟಿಸಲಿದ್ದಾರೆ 90ರ ದಶಕದ ಸ್ಟಾರ್ ಬಾಲಿವುಡ್ ನಟಿ, ಅಭಿಮಾನಿಗಳಿಗೆ ಅಚ್ಚರಿ

Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಒಂದರ ಮೇಲೊಂದು ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆದರೆ ಇದೀಗ ಹೊಸದೊಂದು ಸಿನಿಮಾದಲ್ಲಿ ಚಿರಂಜೀವಿ ತೊಡಗಿಕೊಳ್ಳುತ್ತಿದ್ದು ಈ ಸಿನಿಮಾದಲ್ಲಿ ನಟಿಸಲು ಬಾಲಿವುಡ್​ನ 90-2000ರ ದಶಕದ ಸ್ಟಾರ್ ನಟಿ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.....

ಚಿರಂಜೀವಿ ಜೊತೆ ನಟಿಸಲಿದ್ದಾರೆ 90ರ ದಶಕದ ಸ್ಟಾರ್ ಬಾಲಿವುಡ್ ನಟಿ, ಅಭಿಮಾನಿಗಳಿಗೆ ಅಚ್ಚರಿ
Chir

Updated on: Feb 23, 2025 | 9:34 PM

ಮೆಗಾಸ್ಟಾರ್ ಚಿರಂಜೀವಿ, ರಾಜಕೀಯಕ್ಕೆ ಗುಡ್ ಬೈ ಹೇಳಿ ಮತ್ತೆ ಚಿತ್ರರಂಗದಲ್ಲಿ ತೊಡಗಿಕೊಂಡು ಕೆಲ ವರ್ಷಗಳೇ ಆಗಿವೆ. ಆದರೆ ಬ್ರೇಕ್ ಬಳಿಕ ವಾಪಸ್ ಬಂದ ಬಳಿಕ ಯಾಕೋ ಅವರ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಒಂದರ ಮೇಲೊಂದು ಫ್ಲಾಪ್ ಸಿನಿಮಾಗಳನ್ನೇ ನೀಡುತ್ತಿದ್ದಾರೆ. ಆದರೆ ಸಿನಿಮಾ ಅವಕಾಶಗಳೇನು ಕಡಿಮೆ ಆಗಿಲ್ಲ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ವಯಸ್ಸು 69 ದಾಟಿದ್ದರೂ ಸಹ ತ್ರಿಷಾ, ಕಾಜೊಲ್ ಅಂಥಹಾ ನಾಯಕಿಯರೊಡನೆ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ಚಿರಂಜೀವಿಯ ಹೊಸ ಸಿನಿಮಾಕ್ಕೆ 90ರ ದಶಕದ ಸ್ಟಾರ್ ಬಾಲಿವುಡ್ ನಾಯಕಿ ತೆಲುಗಿಗೆ ಬರುತ್ತಿದ್ದಾರೆ.

90ರ ದಶಕದ ಸ್ಟಾರ್ ಹಿಂದಿ ಹೀರೋಯಿನ್ ಎಂದ ಕೂಡಲೇ ಕರಿಶ್ಮಾ ಕಪೂರ್, ಕಾಜಲ್, ಐಶ್ವರ್ಯಾ ರೈ, ರವೀನಾ ಟಂಡನ್, ಶಿಲ್ಪಾ ಶೆಟ್ಟಿ, ಊರ್ಮಿಳಾ ಮತೋಡ್ಕರ್, ಹೆಸರುಗಳು ನೆನಪಿಗೆ ಬರುತ್ತವೆ. ಆದರೆ ಇವರ ಜೊತೆಗೆ ಮತ್ತೊಬ್ಬ ನಾಯಕಿಯೂ ಸಹ 90 ಮತ್ತು 2000 ದಶಕದಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡಿದ್ದರು. ಸಮಕಾಲೀನ ಬಿಳಿತೊಗಲಿನ, ಸಪೂರ ದೇಹದ ವಯ್ಯಾರದ ನಾಯಕಿಯರ ನಡುವೆ ಕೃಷ್ಣ ವರ್ಣದವರಾಗಿದ್ದುಕೊಂಡೂ ಸಹ ತಮ್ಮ ನಟನೆಯಿಂದ ಸ್ಟಾರ್ ಪಟ್ಟ ಪಡೆದುಕೊಂಡಿದ್ದರು. ಅವರೇ ನಟಿ ರಾಣಿ ಮುಖರ್ಜಿ.

‘ಗುಲಾಮ್’, ‘ಕುಚ್​ ಕುಚ್ ಹೋತಾ ಹೈ’, ‘ಹೆಲ್ಲೊ ಬ್ರದರ್’, ‘ಚೋರಿ ಚೋರಿ ಚುಪ್ಕೆ ಚುಪ್ಕೆ’ ಹೀಗೆ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ ರಾಣಿ ಮುಖರ್ಜಿ ಇದೀಗ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೂ ಮೆಗಾಸ್ಟಾರ್ ಚಿರಂಜೀವಿ ಎದುರು ನಟಿಸಲು. ಚಿರಂಜೀವಿ ಅವರಿಗಾಗಿ ಶ್ರೀಕಾಂತ್ ಒಡೆಲ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾದಲ್ಲಿ ರಾಣಿ ಮುಖರ್ಜಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ:ಹೆಣ್ಣು ಮಕ್ಕಳ ಬಗ್ಗೆ ಚಿರಂಜೀವಿ ಹೇಳಿಕೆಗೆ ತೀವ್ರ ಆಕ್ರೋಶ

ಈ ಹಿಂದೆ 2000 ರಲ್ಲಿ ಬಿಡುಗಡೆ ಆಗಿದ್ದ ಕಲ್ಟ್ ಕ್ಲಾಸಿಕ್ ಸಿನಿಮಾ ‘ಹೇ ರಾಮ್’ ನಲ್ಲಿ ರಾಣಿ ಮುಖರ್ಜಿ ನಟಿಸಿದ್ದರು. ‘ಹೇ ರಾಮ್’ ರಾಣಿ ಮುಖರ್ಜಿ ನಟಿಸಿದ್ದ ಮೊದಲ ದಕ್ಷಿಣ ಭಾರತ ಸಿನಿಮಾ. ಅದಾದ ಬಳಿಕ ರಾಣಿ ನಟಿಸುತ್ತಿರುವ ಎರಡನೇ ದಕ್ಷಿಣ ಭಾರತ ಸಿನಿಮಾ ಇದಾಗಲಿದೆ. ಶ್ರೀಕಾಂತ್ ಒಡೆಲ, ಚಿರಂಜೀವಿ ಅವರಿಗಾಗಿ ರಿವೇಂಜ್ ಸಿನಿಮಾ ಒಂದನ್ನು ನಿರ್ದೇಶನ ಮಾಡಲಿದ್ದು, ಮೆಗಾಸ್ಟಾರ್ ಚಿರಂಜೀವಿ ಅವರ ಪತ್ನಿಯ ಪಾತ್ರದಲ್ಲಿ ರಾಣಿ ಮುಖರ್ಜಿ ನಟಿಸಲಿದ್ದಾರೆ.

ರಾಣಿ ಮುಖರ್ಜಿ, ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಜೊತೆ ವಿವಾಹವಾಗಿದ್ದಾರೆ. 2014 ರಲ್ಲಿ ವಿವಾಹವಾದ ಬಳಿಕ ರಾಣಿ ಮುಖರ್ಜಿ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದರು. 2018 ರ ಕೇವಲ ಮಹಿಳಾ ಪ್ರಧಾನ, ಸಂದೇಶವುಳ್ಳ ಸಿನಿಮಾಗಳಲ್ಲಿ ಮಾತ್ರವೇ ನಟಿಸುತ್ತಿದ್ದಾರೆ. ಇದೀಗ ಚಿರಂಜೀವಿ ಜೊತೆ ನಟಿಸಲು ಬರುತ್ತಿದ್ದಾರೆ. ಇನ್ನು ಮೆಗಾಸ್ಟಾರ್ ಚಿರಂಜೀವಿ ಪ್ರಸ್ತುತ ‘ವಿಶ್ವಂಭರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Sun, 23 February 25