
ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಮುಂಬರುವ ‘ಮೈಸಾ’ ಸಿನಿಮಾದ ಚಿತ್ರೀಕರಣದ ವೇಳೆ ಅವರು ತೊಡೆಯ ಭಾಗಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದರು. ಕಳೆದ ಒಂದು ತಿಂಗಳಿನಿಂದ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಮತ್ತೆ ಕೆಲಸಕ್ಕೆ ಹಾಜರಾಗುವುದಾಗಿ ತಮ್ಮ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಶ್ಮಿಕಾ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಶ್ರಾಂತಿಯ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆದ ಸುಂದರ ಕ್ಷಣಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಮನೆಯಲ್ಲಿ ಪೂಜೆ ಮಾಡುವುದು, ಸಾಕು ನಾಯಿಯೊಂದಿಗೆ ಆಟವಾಡುವುದು ಮತ್ತು ತಂಗಿಯೊಂದಿಗೆ ಸಮಯ ಕಳೆದ ಚಿತ್ರಗಳು ಅದರಲ್ಲಿವೆ. ಶೀಘ್ರದಲ್ಲೇ ಶೂಟಿಂಗ್‌ಗೆ ಮರಳಲಿದ್ದು, ಮನೆಯ ಈ ಕ್ಷಣಗಳನ್ನು ನೆನಪಿಸಿಕೊಳ್ಳುವುದಾಗಿ ಅವರು ಬರೆದುಕೊಂಡಿದ್ದಾರೆ.
ರಶ್ಮಿಕಾ ಅವರ ಈ ಪೋಸ್ಟ್ ನೋಡಿ ಅಭಿಮಾನಿಗಳು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ನೆಚ್ಚಿನ ನಟಿ ಗುಣಮುಖರಾಗಿ ಮತ್ತೆ ಶೂಟಿಂಗ್‌ಗೆ ಮರಳುತ್ತಿರುವುದು ಅವರಲ್ಲಿ ಸಮಾಧಾನ ತಂದಿದೆ. ರಶ್ಮಿಕಾ ಅವರ ಕಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಅಭಿಮಾನಿಗಳು ಪ್ರೀತಿಯಿಂದ ಸಲಹೆ ನೀಡಿದ್ದಾರೆ.
‘ಮೈಸಾ’ ಸಿನಿಮಾದ ಡ್ಯಾನ್ಸ್ ಸನ್ನಿವೇಶದ ಶೂಟಿಂಗ್ ವೇಳೆ ರಶ್ಮಿಕಾ ಅವರಿಗೆ ಗಾಯವಾಗಿತ್ತು. ತೊಡೆಯ ಭಾಗದ ಸ್ನಾಯುವಿನ ಸಮಸ್ಯೆಯಿಂದಾಗಿ ಅವರು ವಿಶ್ರಾಂತಿ ಪಡೆಯಬೇಕಾಯಿತು. ತಮ್ಮ ದೇಹವನ್ನು ಯಂತ್ರದಂತೆ ದಂಡಿಸದೆ ಮನುಷ್ಯನಂತೆ ನೋಡಿಕೊಳ್ಳುವುದನ್ನು ಕಲಿಯಬೇಕಿದೆ ಎಂದು ಅವರು ಈ ಹಿಂದೆ ಹೇಳಿದ್ದರು. ದೇವರು ತಮಗೆ ಬಲವಂತವಾಗಿ ವಿಶ್ರಾಂತಿ ನೀಡಿದ್ದಾನೆ ಎಂದು ಅವರು ತಮಾಷೆಯಾಗಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಇರುಮುಡಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಮೆಚ್ಚುಗೆ: ‘ಟಾಕ್ಸಿಕ್’ ಸಿನಿಮಾಗೂ ನಟಿಯಿಂದ ಸಿಗುತ್ತಾ ಹೊಗಳಿಕೆ?
ರವೀಂದ್ರ ಪುಲ್ಲೆ ನಿರ್ದೇಶನದ ‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ಗೊಂಡ್ ಬುಡಕಟ್ಟು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಅವರ ಮೊದಲ ಮಹಿಳಾ ಪ್ರಧಾನ ಪ್ಯಾನ್-ಇಂಡಿಯಾ ಆಕ್ಷನ್ ಸಿನಿಮಾವಾಗಿದೆ. ಇದರ ಹೊರತಾಗಿ ವಿಜಯ್ ದೇವರಕೊಂಡ ಜೊತೆಗಿನ ‘ರಣಬಾಲಿ’ ಸಿನಿಮಾದಲ್ಲೂ ಅವರು ನಟಿಸಿದ್ದು, ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.