
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ಒಂದಷ್ಟು ಜನರು ಚಿತ್ರಮಂದಿರಕ್ಕೆ ನುಗ್ಗುತ್ತಾರೆ. ಒಂದಷ್ಟು ಒಳ್ಳೆಯ ಕಲೆಕ್ಷನ್ ಆಗುತ್ತದೆ ಎಂಬ ನಂಬಿಕೆ ನಿರ್ಮಾಪಕರದ್ದು. ಈಗ ಅವರ ನಟನೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ರಿಲೀಸ್ ಆಗಿದೆ. ಆದರೆ, ಈ ಚಿತ್ರ ಅಂದುಕೊಂಡಂತೆ ಕಲೆಕ್ಷನ್ ಮಾಡಿಲ್ಲ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಕೇವಲ 1 ಕೋಟಿ ರೂಪಾಯಿ ಅನ್ನೋದು ಬೇಸರದ ವಿಚಾರ.
ರಶ್ಮಿಕಾ ಮಂದಣ್ಣ ಅವರು ಇಷ್ಟು ದಿನ ನಟಿಸಿದ ಸಿನಿಮಾಗಳೆಲ್ಲವೂ ಸ್ಟಾರ್ ಹೀರೋಗಳು ಇರುವಂತಹ ಸಿನಿಮಾಗಳೇ ಆಗಿತ್ತು. ಬಜೆಟ್ ಕೂಡ ಜೋರಾಗೇ ಇರುತ್ತಿತ್ತು. ಇನ್ನು, ರಿಲೀಸ್ಗೂ ಮೊದಲು ಒಂದು ಅಬ್ಬರದ ಜೊತೆ ಚಿತ್ರ ಬಿಡುಗಡೆ ಆಗುತ್ತಿತ್ತು. ಆದರೆ, ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ಮಾತ್ರ ಇದಕ್ಕೆ ಭಿನ್ನ. ಈ ಚಿತ್ರ ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆದ ಹೊರತಾಗಿಯೂ ಸಿನಿಮಾ ಮೊದಲ ದಿನ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಲು ವಿಫಲವಾಗಿದೆ.
ರಶ್ಮಿಕಾ ನಟನೆಯ ‘ಅನಿಮಲ್’ (900 ಕೋಟಿ ರೂಪಾಯಿ), ‘ಪುಷ್ಪ 2’ (1742 ಕೋಟಿ ರೂಪಾಯಿ), ‘ಛಾವಾ’ (800 ಕೋಟಿ ರೂಪಾಯಿ), ‘ಥಾಮಾ’ (120 ಕೋಟಿ ರೂಪಾಯಿ) ಸಿನಿಮಾಗಳು ಒಳ್ಳೆಯ ಗಳಿಕೆ ಮಾಡಿದವು. ಈ ಎಲ್ಲಾ ಸಿನಿಮಾಗಳಿಗೆ ಭರ್ಜರಿ ಪ್ರಚಾರ ಕೊಡಲಾಗಿತ್ತು. ಆದರೆ, ‘ದಿ ಗರ್ಲ್‌ಫ್ರೆಂಡ್’ ಚಿತ್ರ ಹಾಗಲ್ಲ. ಈ ಚಿತ್ರದಲ್ಲಿ ಕನ್ನಡದ ದೀಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಈ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಕೂಡ ನೀಡಿಲ್ಲ. ಜೊತೆಗೆ ಇದು ರೆಗ್ಯುಲರ್ ಸಿನಿಮಾ ಕೂಡ ಅಲ್ಲ. ಹೀಗಾಗಿ, ಇದು ಜನರನ್ನು ಆಕರ್ಷಿಸಲು ಸಾಧ್ಯವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ರಶ್ಮಿಕಾ ಮೊದಲ ಬಾರಿಗೆ ಮುಗ್ಗರಿಸಿದ್ದಾರೆ.
ಇದನ್ನೂ ಓದಿ: ‘ನಿಮ್ಮ ಬಗ್ಗೆ ಹೆಮ್ಮೆ ಇದೆ’: ಕನ್ನಡಿಗ ದೀಕ್ಷಿತ್ ಶೆಟ್ಟಿ ಬಗ್ಗೆ ರಶ್ಮಿಕಾ ಮಂದಣ್ಣ ಮಾತು
ಇನ್ನು, ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಬಜೆಟ್ ಕೂಡ ಕಡಿಮೆಯೇ. ಹೀಗಾಗಿ, ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ನಷ್ಟ ಆಗೋದು ಅನುಮಾನ ಎಂದೇ ಹೇಳಲಾಗುತ್ತಾ ಇದೆ. ಈ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟಾಗುತ್ತದೆ ಎನ್ನುವ ಕುತೂಹಲ ಮೂಡಿದೆ. ‘ದಿ ಗರ್ಲ್‌ಫ್ರೆಂಡ್’ ಸಿನಿಮಾನ ರಾಹುಲ್ ರವೀಂದ್ರನ್ ನಿರ್ದೇಶನ ಮಾಡಿದ್ದಾರೆ. ಕಪಲ್ ಲವ್ಸ್ಟೋರಿನ ಇದು ಹೊಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Sat, 8 November 25