ಲೋಕಸಭೆ ಚುನಾವಣೆ 2014ರ (Lok Sabha Election) ಫಲಿತಾಂಶ ಬಹುತೇಕ ಹೊರಬಿದ್ದಿದೆ. ಬಿಜೆಪಿಗ ನೇತೃತ್ವದ ಎನ್ಡಿಎಗೆ ಸರಳ ಬಹುಮತ ಬಂದಿದೆ. ರಾಜಕೀಯ ಹಾಗೂ ಸಿನಿಮಾ ರಂಗ ಪರಸ್ಪರ ಆತ್ಮೀಯ ಬಂಧ ಹೊಂದಿರುವ ಕ್ಷೇತ್ರಗಳು. ಈ ಬಾರಿಯೂ ಸಹ ಕೆಲವು ಸಿನಿಮಾ ಸೆಲೆಬ್ರಿಟಿಗಳಿಗೆ ಕೆಲವು ರಾಜಕೀಯ ಪಕ್ಷಗಳು ಚುನಾವಣಾ ಟಿಕೆಟ್ ನೀಡಿದ್ದವು. ಅಂತೆಯೇ ಕೆಲವರು ಗೆಲುವು ಸಹ ಸಾಧಿಸಿದ್ದಾರೆ. ಕೆಲವರು ಸೋತಿದ್ದಾರೆ. ಯಾರು ಗೆದ್ದರು, ಯಾರು ಸೋತರು ಎಂಬ ಪಟ್ಟಿ ಇಲ್ಲಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಶಿವಣ್ಣ, ಪತ್ನಿ ಗೀತಾ ಪರವಾಗಿ ಚುರುಕಿನ ಪ್ರಚಾರ ಮಾಡಿದ್ದರು. ಆದರೆ ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಸೋಲನುಭವಿಸಿದ್ದಾರೆ. ಬಿಜೆಪಿಯ ಬಿವೈ ರಾಘವೇಂದ್ರ ಭಾರಿ ಅಂತರದ ಗೆಲುವು ದಾಖಲಿಸಿದ್ದಾರೆ.
ಬಾಲಿವುಡ್ ನಟಿ ಕಂಗನಾ ರನೌತ್ ಕಳೆದ ಐದಾರು ವರ್ಷದಿಂದ ಬಿಜೆಪಿ ಪರವಾಗಿ ಟ್ವೀಟ್ಗಳನ್ನು ಮಾಡುತ್ತಲೇ ಬಂದಿದ್ದರು. ಅದರ ಪ್ರತಿಯಾಗಿ ಈ ಬಾರಿ ಲೋಕಸಭಾ ಟಿಕೆಟ್ ಅನ್ನು ಪಡೆದಿದ್ದರು. ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಕಂಗನಾ ಗೆದ್ದಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಕಂಗನಾ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.
ತೆಲುಗು ಚಿತ್ರರಂಗದ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ, ಟಿಡಿಪಿ ಪಕ್ಷದ ಅಭ್ಯರ್ಥಿಯಾಗಿ ಹಿಂದೂಪುರದಿಂದ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇದು ಅವರಿಗೆ ಮೂರನೇ ಗೆಲುವು. ಅವರು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.
ಭೋಜಪುರಿ ನಟನಾಗಿ ಆ ಬಳಿಕ ಬಾಲಿವುಡ್, ತೆಲುಗು, ಕನ್ನಡ ಸಿನಿಮಾಗಳಲ್ಲಿಯೂ ವಿಲನ್, ಪೋಷಕ ಪಾತ್ರಗಳಲ್ಲಿ ನಟಿಸಿರುವ ನಟ ರವಿಕಿಶನ್ ಬಿಜೆಪಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶದ ಗೋರಖ್ಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಗೆಲುವು ಸಾಧಿಸಿದ್ದು, ಇದು ರವಿಕಿಶನ್ ಅವರಿಗೆ ಎರಡನೇ ಗೆಲುವಾಗಿದೆ.
ಭೋಜ್ಪುರಿ ಚಿತ್ರರಂಗದ ಜನಪ್ರಿಯ ನಾಯಕ ನಟ ಮತ್ತು ಗಾಯಕ ಮನೋಜ್ ತಿವಾರಿ ಈಶಾನ್ಯ ದೆಹಲಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಎದುರಾಳಿ ಕಾಂಗ್ರೆಸ್ನ ಕನ್ಹಯ್ಯ ಕುಮಾರ್ ಎದುರು ಗೆದ್ದು ಬೀಗಿದ್ದಾರೆ. ಕಳೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅವರು ಸೋಲನುಭವಿಸಿದ್ದರು.
ಇದನ್ನೂ ಓದಿ:ಲೋಕಸಭೆ ಚುನಾವಣೆ ಫಲಿತಾಂಶ 2024 ಲೈವ್: ದೆಹಲಿ ಎಐಸಿಸಿ ಕಚೇರಿಯಲ್ಲಿ ರಾಹುಲ್, ಖರ್ಗೆ ಸುದ್ದಿಗೋಷ್ಠಿ
ಮಲಯಾಳಂ ನಟ ಸುರೇಶ್ ಗೋಪಿ ಕೇರಳದಲ್ಲಿ ದಾಖಲೆಯನ್ನೇ ಬರೆದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸುರೇಶ್ ಗೋಪಿ ವಿಜಯ ಸಾಧಿಸಿ, ಬಿಜೆಪಿಯ ಖಾತೆಯನ್ನು ಕೇರಳದಲ್ಲಿ ತೆರೆದಿದ್ದಾರೆ. ಶ್ರಿಶೂರ್ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡಿದ್ದರು. ತಮ್ಮ ವಿಜಯವನ್ನು ಅವರು ಮೋದಿಗೆ ಅರ್ಪಿಸಿದ್ದಾರೆ.
ತೆಲುಗಿನ ಸ್ಟಾರ್ ನಟ ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದಾರೆ. ಜನಸೇನಾ ಪಕ್ಷದ ಸಂಸ್ಥಾಪಕರೂ ಆಗಿರುವ ಪವನ್ ಕಲ್ಯಾಣ್ ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರಿಗೆ ಭಾರಿ ಜಯ ದೊರೆತಿರುವುದು ಮಾತ್ರವೇ ಅಲ್ಲದೆ ಜನಸೇನಾ ಪಕ್ಷದ 21 ಅಭ್ಯರ್ಥಿಗಳು ಸಹ ಗೆಲುವು ಪಡೆದಿದ್ದಾರೆ.
ಜನಪ್ರಿಯ ‘ರಾಮಾಯಣ’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರಧಾರಿಯಾಗಿದ್ದ ಅರುಣ್ ಗೋವಿಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಮೀರಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅರುಣ್ ಗೋವಿಲ್ ಆರಂಭಿಕ ಹಿನ್ನಡೆ ಅನುಭವಿಸಿದ್ದರು. ಆದರೆ ಬಳಿಕ ಅವರು ಮುನ್ನಡೆಗೆ ಬಂದರು. ಅವರ ಗೆಲುವು ಇನ್ನೂ ಖಾತ್ರಿ ಆಗಿಲ್ಲ. ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ:Chanakya Exit Poll 2024: ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬಹುಮತ? ಚಾಣಕ್ಯ ಮತಗಟ್ಟೆ ಸಮೀಕ್ಷೆ ಹೀಗಿದೆ
ಈ ಹಿಂದೆ ಬಿಜೆಪಿಯಲ್ಲಿದ್ದ ಹಿರಿಯ ನಟ ಶತ್ರುಜ್ಞ ಸಿಂಹ ಮೋದಿಯ ಏಕಮೇವಾಧಿಪತ್ಯವನ್ನು ಟೀಕಿಸಿ ಪಕ್ಷದಿಂದ ಹೊರಬಂದಿದ್ದರು. ಅವರು ಟಿಎಂಸಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಮಥುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೇಮಾಮಾಲಿನಿ ಮತ್ತೊಮ್ಮೆ ಭಾರಿ ಅಂತರದ ಜಯ ಕಂಡಿದ್ದಾರೆ. ಈ ಹಿಂದೆಯೂ ಅವರು ಇದೇ ಕ್ಷೇತ್ರದಿಂದ ಗೆಲುವು ಕಂಡಿದ್ದರು. ಕೇವಲ ಚುನಾವಣೆ ಸಮಯದಲ್ಲಿ ಮಾತ್ರವೇ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಂಬ ಆರೋಪ ಅವರ ಮೇಲಿದೆ. ಹಾಗಿದ್ದರೂ ಸಹ ಅವರು ಗೆಲುವು ಸಾಧಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Tue, 4 June 24