ಪವನ್ ಕಲ್ಯಾಣ್ಗೆ ಮೊದಲ ಚುನಾವಣಾ ಜಯ, ಪಕ್ಷಕ್ಕೂ ಭರ್ಜರಿ ಗೆಲುವು
ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿದ್ದಾರೆ. ಪೀಠಾಪುರಂ ಕ್ಷೇತ್ರದಿಂದ ಪವನ್ ಕಲ್ಯಾಣ್ ಗೆದ್ದಿರುವುದು ಮಾತ್ರವೇ ಅಲ್ಲದೆ, ಜನಸೇನಾ ಪಕ್ಷದ 21 ಅಭ್ಯರ್ಥಿಗಳನ್ನು ಗೆಲುವಿನ ಹಾದಿಗೆ ಕರೆತಂದಿದ್ದಾರೆ.
ಆಂಧ್ರ ಪ್ರದೇಶ (Andhra Pradesh) ರಾಜಕೀಯದಲ್ಲಿ ನೆಲೆ ಕಂಡುಕೊಳ್ಳಲು ಕಳೆದ 14 ವರ್ಷಗಳಿಂದಲೂ ಪ್ರಯತ್ನ ಮಾಡುತ್ತಿದ್ದ ನಟ, ರಾಜಕಾರಣಿ ಪವನ್ ಕಲ್ಯಾಣ್ ಗೆ ಈ ಚುನಾವಣೆಯಲ್ಲಿ ಗಮನಾರ್ಹ ಗೆಲುವು ಲಭಿಸಿದೆ. ಜನಸೇನಾ ಪಕ್ಷದ ಪವನ್ ಕಲ್ಯಾಣ್ ಸ್ವತಃ ಭರ್ಜರಿ ಗೆಲುವು ಕಂಡಿರುವ ಜೊತೆಗೆ ತಮ್ಮ ಜನಸೇನಾ ಅಭ್ಯರ್ಥಿಗಳನ್ನು ಸಹ ದೊಡ್ಡ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡಿದ್ದಾರೆ. ಪೀಠಾಪುರಂ ಕ್ಷೇತ್ರದಿಂದ ಆಂಧ್ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪವನ್ ಕಲ್ಯಾಣ್ ಎದುರಾಳಿ ವಂಗ ಗೀತಾ ವಿರುದ್ಧ ಭಾರಿ ಮತದ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಆ ಮೂಲಕ ರಾಜಕೀಯ ಜೀವನದ ಮೊದಲ ಚುನಾವಣಾ ವಿಜಯ ಸಾಧಿಸಿದ್ದಾರೆ.
ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಕಳೆದ ಐದು ವರ್ಷಗಳಿಂದಲೂ ಆಂಧ್ರ ಪ್ರದೇಶದ ಆಡಳಿತ ಪಕ್ಷ ವೈಸಿಪಿ ವಿರುದ್ಧ, ಸಿಎಂ ಜಗನ್ ವಿರುದ್ಧ ಗಟ್ಟಿ ದನಿಯಲ್ಲಿ ವಿರೋಧ ಮಾಡುತ್ತಲೇ ಬಂದಿದ್ದರು. ಹಲವು ಸಮಸ್ಯೆಗಳನ್ನು ಎತ್ತಿ ಹೋರಾಟ, ಪ್ರತಿಭಟನೆಗಳನ್ನು ಮಾಡಿದ್ದರು. ಗೃಹ ಬಂಧನಕ್ಕೂ ಒಳಗಾಗಿದ್ದರು. ಜಗನ್ರನ್ನು ಅಧಿಕಾರದಿಂದ ಇಳಿಸುವುದೇ ಉದ್ದೇಶವೆಂದು ಚುನಾವಣೆ ಪ್ರಚಾರ ಆರಂಭಿಸಿದ್ದ ಪವನ್ ಕಲ್ಯಾಣ್, ಕೊನೆಗೂ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.
ಇದನ್ನೂ ಓದಿ:ಪವನ್ ಕಲ್ಯಾಣ್ ಸೋಲಿಸಲು ನೂರಾರು ಕೋಟಿ ಆಫರ್: ಗುಟ್ಟು ಬಿಚ್ಚಿಟ್ಟ ಮಾಜಿ ಶಾಸಕ
ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ ಹಾಗೂ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಪವನ್ ಕಲ್ಯಾಣ್ ಚುನಾವಣೆ ಎದುರಿಸಿದ್ದರು. ಮೈತ್ರಿ ನಿರ್ಣಯದಂತೆ 21 ಸೀಟುಗಳನ್ನು ಪವನ್ ಕಲ್ಯಾಣ್ ಪಡೆದುಕೊಂಡು 21 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ತಮ್ಮನ್ನು ಸೇರಿದಂತೆ ಎಲ್ಲ 21 ಅಭ್ಯರ್ಥಿಗಳನ್ನು ಪವನ್ ಕಲ್ಯಾಣ್ ಗೆಲ್ಲಿಸಿಕೊಳ್ಳುವತ್ತ ದಾಪುಗಾಲು ಹಾಕಿದ್ದಾರೆ. ಸ್ವತಃ ಪೀಠಾಪುರಂ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದ ಗೆಲುವು ಸಹ ಪಡೆದುಕೊಂಡಿದ್ದಾರೆ.
ಈ ಬಾರಿ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಶುರುವಾಗುವ ಬಹಳ ಮುಂಚಿತವಾಗಿಯೇ ಪ್ರಚಾರ ಆರಂಭಿಸಿದ್ದ ಪವನ್ ಕಲ್ಯಾಣ್ ಮೂರು ಹಂತಗಳಲ್ಲಿ ರಾಜ್ಯ ಪ್ರವಾಸ ಮಾಡಿದ್ದರು. ಅದಕ್ಕಾಗಿ ವಿಶೇಷ ವಾಹನವನ್ನು ಸಹ ಖರೀದಿಸಿ ತಂದು ಅದಕ್ಕೆ ‘ವಾರಾಹಿ’ ಎಂದು ಹೆಸರಿಟ್ಟು ಅದರಲ್ಲಿಯೇ ಚುನಾವಣಾ ಪ್ರಚಾರ ಮಾಡಿದ್ದರು. ರಾಜ್ಯದೆಲ್ಲೆಡೆ ಈ ಬಾರಿ ಪವನ್ ಕಲ್ಯಾಣ್ರ ಹವಾ ಜೋರಾಗಿಯೇ ಬೀಸಿತ್ತು. ಆದರೆ ಟಿಡಿಪಿ ಜೊತೆ ಮೈತ್ರಿ ಮಾಡಿಕೊಂಡ ಕಾರಣ, ಮೈತ್ರಿ ಒಪ್ಪಂದಂತೆ ಪವನ್ಗೆ ಕೇವಲ 21 ಕ್ಷೇತ್ರಗಳು ದೊರಕಿದವು. ಆ 21 ಕ್ಷೇತ್ರಗಳಲ್ಲಿಯೂ ಜನಸೇನಾ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಪವನ್ ಸೇರಿದಂತೆ ಆರು ಮಂದಿ ಅಭ್ಯರ್ಥಿಗಳ ಗೆಲುವು ಈಗಾಗಲೇ ಘೋಷಣೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Tue, 4 June 24