‘ಆರ್ಆರ್ಆರ್’ ಸಿನಿಮಾ (RRR Movie) ರಿಲೀಸ್ ಆಗಿ ಇಂದಿಗೆ (ಮಾರ್ಚ್ 24) ಒಂದು ವರ್ಷ. ಎಸ್ಎಸ್ ರಾಜಮೌಳಿ ನಿರ್ದೇಶನದ, ಜೂ.ಎನ್ಟಿಆರ್, ರಾಮ್ ಚರಣ್ (Ram Charan), ಅಜಯ್ ದೇವಗನ್, ಆಲಿಯಾ ಭಟ್ ಮೊದಲಾದವರು ನಟಿಸಿದ ಈ ಸಿನಿಮಾ ಸೂಪರ್ ಹಿಟ್ ಆಯಿತು. ಸಾಮಾನ್ಯವಾಗಿ ಸಿನಿಮಾ ರಿಲೀಸ್ ಆದ ಒಂದು ತಿಂಗಳಿಗೆ ಸದ್ದು ಕಡಿಮೆ ಆಗಿ ಬಿಡುತ್ತದೆ. ಆದರೆ, ‘ಆರ್ಆರ್ಆರ್’ ಸಿನಿಮಾ ಒಂದು ವರ್ಷ ಕಳೆದರೂ ಪ್ರಚಲಿತದಲ್ಲಿದೆ. ಈ ಚಿತ್ರ ಮಾಡಿದ ಸಾಧನೆ ತುಂಬಾನೇ ದೊಡ್ಡದು. ಆ ಬಗ್ಗೆ ಇಲ್ಲಿದೆ ವಿವರ.
‘ಆರ್ಆರ್ಆರ್’ ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಯಿತು. ಮಾರ್ಚ್ 23ರ (2022) ರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಕಾಣೋಕೆ ಆರಂಭವಾಯಿತು. ಇದರಿಂದ ಚಿತ್ರಕ್ಕೆ ಮೊದಲ ದಿನ ಭರ್ಜರಿ ಕಲೆಕ್ಷನ್ ಆಯಿತು. ಮೇಕಿಂಗ್, ಗ್ರಾಫಿಕ್ಸ್, ಸಾಹಸ ದೃಶ್ಯಗಳು ಚಿತ್ರದಲ್ಲಿ ಹೈಲೈಟ್ ಆಯಿತು. ಇದರಿಂದ ಸಿನಿಮಾ ಸೂಪರ್ ಹಿಟ್ ಆಯಿತು. ಕಳೆದ ವರ್ಷ ಜಪಾನ್ನಲ್ಲಿ ರಿಲೀಸ್ ಆಗಿ ಸಿನಿಮಾ ಗೆದ್ದಿದೆ. ಚಿತ್ರದ ಒಟ್ಟಾರೆ ಗಳಿಕೆ 1200 ಕೋಟಿ ರೂಪಾಯಿ ಸಮೀಪಿಸಿದೆ.
‘ಆರ್ಆರ್ಆರ್’ ಸಿನಿಮಾ ಬಾಲಿವುಡ್ನಲ್ಲೂ ಸದ್ದು ಮಾಡಿತ್ತು. ಅಲ್ಲಿಯೂ ನೂರಾರು ಕೋಟಿ ರೂಪಾಯಿ ಗಳಿಕೆ ಮಾಡಿ ರಾಜಮೌಳಿ ಚಿತ್ರ ಭೇಷ್ ಎನಿಸಿಕೊಂಡಿತು. ‘ಬಾಹುಬಲಿ’ ಸರಣಿ ನೋಡಿ ರಾಜಮೌಳಿ ಅವರನ್ನು ಹಿಂದಿಯವರು ಮೆಚ್ಚಿಕೊಂಡಿದ್ದರು. ‘ಆರ್ಆರ್ಆರ್’ ಚಿತ್ರದಿಂದ ಅವರ ಜನಪ್ರಿಯತೆ ದುಪ್ಪಟ್ಟಾಯಿತು.
‘ಆರ್ಆರ್ಆರ್’ ಚಿತ್ರವನ್ನು ಹಾಲಿವುಡ್ ಮಂದಿಯೂ ಮೆಚ್ಚಿಕೊಂಡಿದ್ದಾರೆ. ‘ಟೈಟಾನಿಕ್’, ‘ಅವತಾರ್’ ರೀತಿಯ ಸಿನಿಮಾ ನಿರ್ದೇಶನ ಮಾಡಿದ್ದ ಜೇಮ್ಸ್ ಕ್ಯಾಮೆರಾನ್ ಸೇರಿದಂತೆ ಅನೇಕರು ಚಿತ್ರವನ್ನು ನೋಡಿ ಹೊಗಳಿದರು.
ಭಾರತದಲ್ಲೇ ಸಿದ್ಧವಾದ ಹಾಡಿಗೆ ಈವರೆಗೆ ಆಸ್ಕರ್ ಸಿಕ್ಕಿರಲಿಲ್ಲ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡಿಗೆ ಈ ಅವಾರ್ಡ್ ಸಿಕ್ಕಿತು. ಈ ತಿಂಗಳಲ್ಲಿ ನಡೆದ ಅಕಾಡೆಮಿ ಅವಾರ್ಡ್ನಲ್ಲಿ ಈ ಚಿತ್ರದ ಹಾಡಿಗೆ ಪ್ರಶಸ್ತಿ ಸಿಕ್ಕಿತು. ಈ ಮೂಲಕ ರಾಜಮೌಳಿ ಇತಿಹಾಸ ನಿರ್ಮಿಸಿದರು. ಇದಲ್ಲದೆ, ಗೋಲ್ಡನ್ ಗ್ಲೋಬ್ ಮೊದಲಾದ ಪ್ರಶಸ್ತಿಗಳು ಚಿತ್ರಕ್ಕೆ ಸಿಕ್ಕಿತ್ತು.
‘ಆರ್ಆರ್ಆರ್’ ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದರೂ ಪ್ರಚಲಿತದಲ್ಲೇ ಇದೆ. ಜನರು ಈ ಚಿತ್ರವನ್ನು ಆಗಾಗ ನೆನಪಿಸಿಕೊಳ್ಳುವ ಘಟನೆ ನಡೆಯುತ್ತಲೇ ಇತ್ತು ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:15 am, Fri, 24 March 23