ಟಾಲಿವುಡ್ನ ಜನಪ್ರಿಯ ನಟ ಸಾಯಿ ಧರಮ್ ತೇಜ್ ಅವರು ಬೈಕ್ ಅಪಘಾತದಿಂದ ಗಾಯಗೊಂಡಿರುವುದು ಬೇಸರದ ಸಂಗತಿ. ಸದ್ಯ ಅವರಿಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ (ಸೆ.10) ರಾತ್ರಿ 8 ಗಂಟೆಗೆ ಅತಿ ವೇಗದಿಂದ ಸ್ಪೋರ್ಟ್ಸ್ ಬೈಕ್ ಓಡಿಸಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಕೇವಲ ಎರಡು ದಿನಗಳ ಹಿಂದೆ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಬಗ್ಗೆ ಸಾಯಿ ಧರಮ್ ತೇಜ್ ಮಾತನಾಡಿದ್ದರು. ಆದರೆ ಇಂದು ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಾರೆ!
ಕರ್ನಾಟಕದಲ್ಲಿ ಸೇವೆ ಸಲ್ಲಿಸಿ ಜನಮನ ಗೆದ್ದಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಅವರಿಗೂ ಟಾಲಿವುಡ್ನ ಹೀರೋ ಸಾಯಿ ಧರಮ್ ತೇಜ್ಗೂ ಏನು ಸಂಬಂಧ? ‘ರಿಪಬ್ಲಿಕ್’ ಸಿನಿಮಾದಲ್ಲಿ ಸಾಯಿ ಧರಮ್ ತೇಜ್ ಐಎಎಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಸದ್ಯ ಆ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಆ ಪ್ರಯುಕ್ತ ನಿಜಜೀವನದಲ್ಲಿ ಸಾಧನೆ ಮಾಡಿದ ಐಎಎಸ್ ಅಧಿಕಾರಿಗಳಿಗೆ ಚಿತ್ರತಂಡ ನಮನ ಸಲ್ಲಿಸುತ್ತಿದೆ. ಇದರ ಮೊದಲ ಭಾಗವಾಗಿ ಡಿಕೆ ರವಿ ಅವರ ಜೀವನ ಮತ್ತು ಸಾಧನೆಗಳನ್ನು ವಿವರಿಸುವ ವಿಡಿಯೋವನ್ನು ಕೇವಲ 2 ದಿನಗಳ ಹಿಂದೆ ಸಾಯಿ ಧರಮ್ ತೇಜ್ ಹಂಚಿಕೊಂಡಿದ್ದರು.
‘ಥ್ಯಾಂಕ್ ಯೂ ಕಲೆಕ್ಟರ್ ಡಿಕೆ ರವಿ’ ಎಂಬ ಕ್ಯಾಪ್ಷನ್ ಜೊತೆ ಈ ವಿಡಿಯೋವನ್ನು ಸಾಯಿ ಧರಮ್ ತೇಜ್ ಶೇರ್ ಮಾಡಿಕೊಂಡಿದ್ದರು. ಅದರಲ್ಲಿ ಡಿಕೆ ರವಿ ಅವರ ಅಪರೂಪದ ಮಾತುಗಳು ಇವೆ. ಅವರ ದಿಟ್ಟತನ ಮತ್ತು ಸಾಧನೆಗಳ ಬಗ್ಗೆ ಮಾಹಿತಿ ಇದೆ. ಡಿವಿ ರವಿ ಅವರನ್ನು ಧೀರ ಯೋಧ ಎಂದು ಸಾಯಿ ಧರಮ್ ತೇಜ್ ಬಣ್ಣಿಸಿದ್ದರು. ಆ ಮೂಲಕ ಅವರು ಕರುನಾಡಿನ ದಕ್ಷ ಅಧಿಕಾರಿಗೆ ನಮನ ಸಲ್ಲಿಸಿದ್ದರು. ಅದಾಗಿ ಎರಡು ದಿನ ಕಳೆಯುವುದರೊಳಗೆ ಅವರು ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
Presenting you the first story of a brave soldier D.K.RAVI (IAS) from our initiative #ThankYouCollector
▶️: https://t.co/Naaaw44dwv#ThankYouCollectorDKRavi pic.twitter.com/28SSaJtHP0
— Sai Dharam Tej (@IamSaiDharamTej) September 8, 2021
ಹೆಲ್ಮೆಟ್ ಧರಿಸಿದ್ದರಿಂದ ಸಾಯಿ ಧರಮ್ ತೇಜ್ ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ಹೇಳಲಾಗುತ್ತಿದೆ. ಐಸಿಯುನಲ್ಲಿ ಅವರು ಚಿಕಿತ್ಸೆ ನೀಡಲಾಗುತ್ತಿದೆ. ಪವನ್ ಕಲ್ಯಾಣ್, ಮೆಗಾ ಸ್ಟಾರ್ ಚಿರಂಜೀವಿ, ಅಲ್ಲು ಅರವಿಂದ್ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ:
ಚಿರಂಜೀವಿ ಅಳಿಯ ಸಾಯಿ ಧರಮ್ ತೇಜ್ ಆಕ್ಸಿಡೆಂಟ್ನ ಸಿಸಿಟಿವಿ ದೃಶ್ಯ; ಹೆಲ್ಮೆಟ್ನಿಂದ ಬಚಾವ್
Sai Dharam Tej: ಪ್ರಜ್ಞಾಹೀನ ಸ್ಥಿತಿಯಲ್ಲಿ ನಟ ಸಾಯಿ ಧರಮ್ ತೇಜ್; ಆದರೆ ಆಪ್ತರು ಹೇಳೋದೇ ಬೇರೆ