‘ಕಲ್ಕಿ 2898 ಎಡಿ’ಯಲ್ಲಿ ದೀಪಿಕಾ ಪಡುಕೋಣೆ ಸ್ಥಾನ ತುಂಬಲಿರುವ ಸ್ಟಾರ್ ನಟಿ
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಚಾಲ್ತಿಯಲ್ಲಿದೆ. ಆದರೆ ಮೊದಲ ಭಾಗದಲ್ಲಿ ಬಹಳ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದ ದೀಪಿಕಾ ಪಡುಕೋಣೆ ಎರಡನೇ ಭಾಗದಿಂದ ಹೊರಗೆ ಉಳಿದಿದ್ದಾರೆ. ಎರಡನೇ ಭಾಗದಲ್ಲಿ ದೀಪಿಕಾರ ಪಾತ್ರದಲ್ಲಿ ನಟಿಸುತ್ತಾರೆಂದು ಹಲವು ನಾಯಕಿಯರ ಹೆಸರುಗಳು ಕೇಳಿ ಬಂದಿದ್ದವು. ಆದರೆ ಇದೀಗ ಚಿತ್ರತಂಡವು ಸ್ಟಾರ್ ನಟಿಯೊಬ್ಬರ ಹೆಸರನ್ನು ಅಂತಿಮಗೊಳಿಸಿದೆ.

ಮುಖ್ಯಾಂಶಗಳು
- ಕಲ್ಕಿ 2898 ಎಡಿ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ
- ಕಲ್ಕಿ 2898 ಎಡಿ ಸಿನಿದಿಂದ ದೀಪಿಕಾ ಪಡುಕೋಣೆ ಹೊರಕ್ಕೆ
- ದೀಪಿಕಾ ಪಡುಕೋಣೆ ಸ್ಥಾನಕ್ಕೆ ಮತ್ತೊಬ್ಬ ಸ್ಟಾರ್ ನಟಿ
‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾದ 30% ಚಿತ್ರೀಕರಣ ಈಗಾಗಲೇ ಮುಗಿದಿದೆ. ಅದರಲ್ಲೂ ಅಮಿತಾಬ್ ಬಚ್ಚನ್ ಅವರ ನಟನೆಯ ಕೆಲವು ಪ್ರಮುಖ ಭಾಗಗಳ ಚಿತ್ರೀಕರಣ ಸಹ ಮುಗಿಸಲಾಗಿದೆ. ಬಹುತಾರಾಗಣದ ಸಿನಿಮಾ ಇದಾಗಿದ್ದು, ಪ್ರಭಾಸ್ ಜೊತೆಗೆ ಇನ್ನೂ ಹಲವು ಸ್ಟಾರ್ ನಟ ನಟಿಯರು ಸಿನಿಮಾನಲ್ಲಿದ್ದಾರೆ. ಸಿನಿಮಾದ ಮೊದಲ ಭಾಗದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದರು. ಆದರೆ ಎರಡನೇ ಭಾಗದಲ್ಲಿ ಅವರು ಸಿನಿಮಾದಿಂದ ಹೊರನಡೆದಿದ್ದಾರೆ. ಅವರ ಸ್ಥಾನಕ್ಕೆ ಸ್ಟಾರ್ ನಟಿಯೊಬ್ಬರು ಬಂದಿದ್ದಾರೆ.
ದೀಪಿಕಾ ಪಡುಕೋಣೆ, ಕೆಲಸದ ಸಮಯ, ಸಂಭಾವನೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಚಿತ್ರತಂಡದ ಜೊತೆಗೆ ವಿವಾದ ಮಾಡಿಕೊಂಡಿದ್ದು, ಸಿನಿಮಾದಿಂದ ದೀಪಿಕಾ ಹೊರನಡೆದಿದ್ದಾರೆ. ಸಿನಿಮಾನಲ್ಲಿ ಅವರದ್ದು ಬಹಳ ಪ್ರಮುಖವಾದ ಪಾತ್ರ. ಸಿನಿಮಾದ ಕತೆಯ ಕೇಂದ್ರ ಭಾಗದಲ್ಲಿ ಅವರ ಪಾತ್ರ ಇದೆ. ‘ಸುಮತಿ’ ಹೆಸರಿನ ಪಾತ್ರದಲ್ಲಿ ಅವರು ನಟಿಸಿದ್ದರು. ಆದರೆ ಅವರ ನಿರ್ಗಮನದಿಂದ ಸಿನಿಮಾ ತಂಡಕ್ಕೆ ಸಮಸ್ಯೆ ಎದುರಾಗಿದ್ದು, ಅವರ ಪಾತ್ರಕ್ಕೆ ಸ್ಟಾರ್ ನಟಿಯೊಬ್ಬರನ್ನು ಚಿತ್ರತಂಡ ಕರೆತರುತ್ತಿದೆ.
ದೀಪಿಕಾ ಪಡುಕೋಣೆ ಬದಲಿಗೆ ಆಲಿಯಾ ಭಟ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದಾದ ಬಳಿಕ ರಶ್ಮಿಕಾ ಮಂದಣ್ಣ, ಜಾನ್ಹವಿ ಕಪೂರ್ ಹೆಸರುಗಳು ಸಹ ಕೇಳಿ ಬಂದಿದ್ದವು. ಆದರೆ ಇದೀಗ ಚಿತ್ರತಂಡವು ಸಾಯಿ ಪಲ್ಲವಿ ಅವರನ್ನು ದೀಪಿಕಾ ನಿರ್ವಹಿಸಿದ್ದ ‘ಸುಮತಿ’ ಪಾತ್ರಕ್ಕೆ ಓಕೆ ಮಾಡಿದೆ. ಸಾಯಿ ಪಲ್ಲವಿ ಅವರು ಸುಮತಿ ಪಾತ್ರದಲ್ಲಿ ನಟಿಸಲಿದ್ದಾರೆ. ಮಹತ್ವದ ಪಾತ್ರ ಅದಾಗಿದ್ದು, ಸುಮತಿ ಪಾತ್ರದ ರಕ್ಷಕರ ಪಾತ್ರದಲ್ಲಿ ಪ್ರಭಾಸ್ ಮತ್ತು ಅಮಿತಾಬ್ ಬಚ್ಚನ್ ನಟಿಸಿದ್ದು, ಆ ಪಾತ್ರಕ್ಕಿರುವ ಪ್ರಾಮುಖ್ಯತೆಗೆ ಉದಾಹರಣೆ.
ಇದನ್ನೂ ಓದಿ:15 ಬಾರಿ ‘ಹನುಮಾನ್ ಅಂಶ್’ ಸಿನಿಮಾ ನೋಡಿ ಕಣ್ಣೀರಿಟ್ಟ ನೀಮ್ ಕರೋಲಿ ಬಾಬಾ ಪುತ್ರಿ
ಸಾಯಿ ಪಲ್ಲವಿ ದಕ್ಷಿಣದ ಸ್ಟಾರ್ ನಟಿಯಾಗಿ ಬಾಲಿವುಡ್ನ ಒಂದು ಸಿನಿಮಾನಲ್ಲಿ ಈಗಾಗಲೇ ನಟಿಸಿದ್ದಾರೆ. ಇದೀಗ ‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರದಲ್ಲೂ ನಟನೆ ಮಾಡಿದ್ದಾರೆ. ಅದರ ಜೊತೆಗೆ ಇನ್ನೂ ಹಲವು ಸಿನಿಮಾಗಳಲ್ಲಿ ಸಾಯಿ ಪಲ್ಲವಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಣಿರತ್ನಂ ನಿರ್ದೇಶನದಲ್ಲಿ ವಿಜಯ್ ಸೇತುಪತಿ ಜೊತೆಗೆ ಸಾಯಿ ಪಲ್ಲವಿ ನಟನೆ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಕೊಲ್ಕತ್ತ, ಹೈದರಾಬಾದ್, ಚೆನ್ನೈ, ದೆಹಲಿಯಲ್ಲಿ ನಡೆದಿದೆ. ಇದರ ಜೊತೆಗೆ ಇದೀಗ ‘ಕಲ್ಕಿ 2898 ಎಡಿ’ ಸಿನಿಮಾಕ್ಕೂ ಸಾಯಿ ಪಲ್ಲವಿ ಕಾಲಿರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




