
ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಬಲು ಜನಪ್ರಿಯ ನಟಿ. ‘ಪುಷ್ಪ’ ನಿರ್ದೇಶಕ ಸುಕುಮಾರ್ ಅವರು ಸಾಯಿ ಪಲ್ಲವಿಯನ್ನು ಪವನ್ ಕಲ್ಯಾಣ್ ಅವರಿಗೆ ಸಹ ಹೋಲಿಸಿದ್ದರು, ಅಷ್ಟು ದೊಡ್ಡ ಅಭಿಮಾನಿ ವರ್ಗವನ್ನು ಸಾಯಿ ಪಲ್ಲವಿ ಹೊಂದಿದ್ದಾರೆ. ಭಿನ್ನ ಸಿನಿಮಾಗಳ ಆಯ್ಕೆ, ಸಿನಿಮಾಗಳ ಹೊರಗೆ ಅವರ ವ್ಯಕ್ತಿತ್ವ, ನಿಲವುಗಳು ಸಾಯಿ ಪಲ್ಲವಿಗೆ ದೊಡ್ಡ ಅಭಿಮಾನಿ ವರ್ಗವನ್ನು ಸಂಪಾದಿಸಿ ಕೊಟ್ಟಿವೆ. ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ನಟಿಸಿರುವ ಸಾಯಿ ಪಲ್ಲವಿ, ಇದೀಗ ಮೊದಲ ಬಾರಿಗೆ ಹಿಂದಿಗೆ ಕಾಲಿರಿಸಿದ್ದು, ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರ ಮೊದಲ ಸಿನಿಮಾ ಬಿಡುಗಡೆಗೆ ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಅಡ್ಡಗಾಲು ಹಾಕುತ್ತಿದ್ದಾರೆ. ಅದು ಹೇಗೆ?
ಸಾಯಿ ಪಲ್ಲವಿ, ಬಾಲಿವುಡ್ನ ಬಲು ದೊಡ್ಡ ಬಜೆಟ್ನ ಸಿನಿಮಾ ‘ರಾಮಾಯಣ’ದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾನಲ್ಲಿ ರಣ್ಬೀರ್ ಕಪೂರ್ ಮತ್ತು ಯಶ್ ಸಹ ನಟಿಸುತ್ತಿರುವುದು ಗೊತ್ತಿರುವುದೇ. ಆದರೆ ಇದು ಸಾಯಿ ಪಲ್ಲವಿ ಅವರ ಮೊದಲ ಹಿಂದಿ ಸಿನಿಮಾ ಅಲ್ಲ. ‘ರಾಮಾಯಣ’ಕ್ಕೆ ಮುಂಚೆ, ಆಮಿರ್ ಖಾನ್ ಪುತ್ರನ ಜೊತೆಗೆ ಸಾಯಿ ಪಲ್ಲವಿ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ.
ಆಮಿರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ ‘ಮೇರೆ ರಹೊ’ ಸಿನಿಮಾನಲ್ಲಿ ಸಾಯಿ ಪಲ್ಲವಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಭಾರತ ಮತ್ತು ಜಪಾನ್ನಲ್ಲಿ ನಡೆದಿದೆ. ಅಸಲಿಗೆ 2024ರಲ್ಲೇ ಚಿತ್ರೀಕರಣ ಶುರುವಾಗಿದ್ದು, ಚಿತ್ರೀಕರಣ ಮುಗಿದು ತಿಂಗಳುಗಳೇ ಆಗಿವೆ. ಆದರೆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಇದಕ್ಕೆ ಆಮಿರ್ ಖಾನ್ ಕಾರಣ ಎನ್ನಲಾಗುತ್ತಿದೆ.
ಇದನ್ನೂ ಓದಿ:ಚಿರಂಜೀವಿಗೆ ನೋ ಹೇಳಿ ಈಗ ರಜನೀಕಾಂತ್ಗೆ ಎಸ್ ಎಂದ ಸಾಯಿ ಪಲ್ಲವಿ
ಆಮಿರ್ ಖಾನ್ ಅವರು ‘ಮೇರೆ ರಹೊ’ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಲೇ ಹೋಗುತ್ತಿದ್ದಾರಂತೆ. ಪೋಸ್ಟ್ ಪ್ರೊಡಕ್ಷನ್ ಸರಿ ಬಾರದೇ ಇರುವುದು ಸೇರಿದಂತೆ, ಇತರೆ ದೊಡ್ಡ ಸಿನಿಮಾಗಳು ಚಿತ್ರಮಂದಿರದಲ್ಲಿ ಇಲ್ಲದೇ ಇರುವ ಸಮಯದಲ್ಲಿ ಬಿಡುಗಡೆ ಮಾಡಲೆಂದು ಸಿನಿಮಾದ ಬಿಡುಗಡೆಯನ್ನು ಮುಂದೂಡುತ್ತಲೇ ಬರುತ್ತಿದ್ದಾರೆ. ಇದೀಗ ಫೆಬ್ರವರಿ 14ರ ವೇಳೆಗೆ ಸಿನಿಮಾ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ. ಆದರೆ ಇನ್ನೂ ಖಾತ್ರಿ ಆಗಿಲ್ಲ.
ಇನ್ನು ಸಾಯಿ ಪಲ್ಲವಿ ಅವರ ಕೈಯಲ್ಲಿ ಪ್ರಸ್ತುತ ಹಲವು ಸಿನಿಮಾಗಳಿವೆ. ‘ರಾಮಾಯಣ’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾನಲ್ಲಿ ನಟಿಸಲಿದ್ದಾರೆ. ಮಣಿರತ್ನಂ ನಿರ್ದೇಶಿಸಲಿರುವ ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸಲಿದ್ದಾರೆ. ತೆಲುಗಿನಲ್ಲಿ ಮತ್ತೊಮ್ಮೆ ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನದ ಸಿನಿಮಾನಲ್ಲಿಯೂ ನಟಿಸಲಿದ್ದಾರೆ.