ನಟಿ ಸಾಕ್ಷಿ ಅಗರ್ವಾಲ್ (Sakshi Agarwal) ಅವರು ಇಂದು (ಜುಲೈ 20) ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಕಡೆಯಿಂದ ಶುಭಾಶಯ ಬರುತ್ತಿದೆ. ಮೂರು ವಾರಗಳ ಹಿಂದೆ ಸಾಕ್ಷಿ ಅಮೆರಿಕಕ್ಕೆ (America) ತೆರಳಿದ್ದಾರೆ. ಅಲ್ಲಿ ಅವರು ಒಂದು ತಿಂಗಳ ಕಾಲ ಸಮಯ ಕಳೆಯುವ ಬಗ್ಗೆ ಆಗಲೇ ತಿಳಿಸಿದ್ದರು. ಹೀಗಾಗಿ, ಅಮೆರಿಕದಲ್ಲೇ ಅವರು ಈ ಬಾರಿ ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಕನ್ನಡಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಬಣ್ಣದ ಬದುಕು ಆರಂಭಿಸಿದ ಸಾಕ್ಷಿ ಅವರು ಈಗ ಹಾಲಿವುಡ್ನತ್ತ ಮುಖ ಮಾಡಿದ್ದಾರೆ.
2013ರಲ್ಲಿ ತೆರೆಗೆ ಬಂದ ತಮಿಳಿನ ‘ರಾಜಾ ರಾಣಿ’ ಸಿನಿಮಾದಲ್ಲಿ ಸಾಕ್ಷಿ ನಟಿಸಿದ್ದರು. ಈ ಚಿತ್ರದಲ್ಲಿ ಅವರ ಪಾತ್ರ ಅಷ್ಟು ಪ್ರಾಮುಖ್ಯತೆ ಪಡೆದಿರಲಿಲ್ಲ. ಹೀಗಾಗಿ, ಅವರು ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದು ಕನ್ನಡದ ‘ಸಾಫ್ಟ್ವೇರ್ ಗಂಡ’ ಚಿತ್ರದ ಮೂಲಕ ಎನ್ನಬಹುದು. 2014ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ಜಗ್ಗೇಶ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ನಾನ್ಸಿ ಎಂಬ ಪಾತ್ರವನ್ನು ಸಾಕ್ಷಿ ಮಾಡಿದ್ದರು.
ಕನ್ನಡದಲ್ಲಿ ನಟಿಸಿದ ನಂತರದಲ್ಲಿ ಸಾಕ್ಷಿಗೆ ಹಲವು ತಮಿಳು ಆಫರ್ಗಳು ಬಂದವು. 2015ರಿಂದ ಈಚೆಗೆ ಅವರು ಹಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘4 ಸಾರಿ’ ಸಿನಿಮಾ 2021ರಲ್ಲಿ ತೆರೆಗೆ ಬಂತು. ಅದಾದ ಬಳಿಕ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ.
ವಿಶೇಷ ಎಂದರೆ ಸಾಕ್ಷಿ ಕೈಯಲ್ಲಿ ಈಗ ಒಂದಲ್ಲ, ಎರಡಲ್ಲ ಬರೋಬ್ಬರಿ 8 ಸಿನಿಮಾಗಳು ಇವೆ. ಇವುಗಳ ಪೈಕಿ 7 ತಮಿಳು ಸಿನಿಮಾ, ಒಂದು ಹಾಲಿವುಡ್ ಚಿತ್ರ. ‘120 ಅವರ್ಸ್’ ಹೆಸರಿನ ಇಂಗ್ಲಿಷ್ ಸಿನಿಮಾದಲ್ಲಿ ಸಾಕ್ಷಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ಹಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ: ಸಾವಿನ ಕದ ತಟ್ಟಿ ಬಂದಿದ್ದ ಕಾಜಲ್ ಅಗರ್ವಾಲ್; ಬದುಕುಳಿದಿದ್ದು ನಿಜಕ್ಕೂ ಅಚ್ಚರಿ
8 ಚಿತ್ರಗಳ ಕೆಲಸಗಳಲ್ಲಿ ಸಾಕ್ಷಿ ಬ್ಯುಸಿ ಆಗಿದ್ದರು. ಇತ್ತೀಚೆಗೆ ಕೆಲವು ಚಿತ್ರಗಳ ಕೆಲಸಗಳನ್ನು ಅವರು ಪೂರ್ಣಗೊಳಿಸಿದ್ದಾರೆ. ಈ ಕಾರಣಕ್ಕೆ ಅವರು ಒಂದು ತಿಂಗಳ ಬ್ರೇಕ್ ತೆಗೆದುಕೊಂಡಿದ್ದಾರೆ. ಅಮೆರಿಕದಲ್ಲಿ ಬರ್ತ್ಡೇ ಆಚರಿಸಿಕೊಂಡ ನಂತರದಲ್ಲಿ ಸಾಕ್ಷಿ ಮರಳಿ ಭಾರತಕ್ಕೆ ಮರಳಲಿದ್ದಾರೆ. ನಂತರ ಬಾಕಿ ಉಳಿದಿರುವ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಲಿದ್ದಾರೆ.