ನಟಿ ಸಮಂತಾ (Samantha) ಸತತವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಲೇ ಇದ್ದಾರೆ. ವಿಚ್ಛೇದನದ ಬಳಿಕ ಖಿನ್ನತೆಗೆ ಜಾರಿದ್ದ ಸಮಂತಾ ಅದಾದ ಬಳಿಕ ಭಿನ್ನ ಭಿನ್ನ ಆರೋಗ್ಯ (Health) ಸಮಸ್ಯೆಗಳಿಗೆ ಒಳಗಾಗುತ್ತಲೇ ಇದ್ದರು. ಚರ್ಮದ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಹೀಗೆ ಒಂದರ ಹಿಂದೊಂದು ಸಮಸ್ಯೆಗಳು ಸಮಂತಾರನ್ನು ಕಾಡುತ್ತಲೇ ಇದ್ದವು. ರೋಗಗಳಿಂದ ದೂರವಾಗಲೆಂದು ಹೊಸ ಮಾದರಿಯ ಥೆರಪಿಯೊಂದನ್ನು ಸಮಂತಾ ಮಾಡಿಸಿಕೊಳ್ಳುತ್ತಿದ್ದಾರೆ. ಇದು ಆಮ್ಲಜನಕದ ಥೆರಪಿಯಾಗಿದ್ದು, ಥೆರಪಿಯ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಎಚ್ಬಿಓಟಿ ಹೆಸರಿನ ಚಿಕತ್ಸೆಯನ್ನು ಸಮಂತಾ ಪಡೆದುಕೊಳ್ಳುತ್ತಿದ್ದಾರೆ. ಎಚ್ಬಿಓಟಿ ಎಂದರೆ ಹೈಪರ್ಬ್ಯಾರಿಕ್ ಆಕ್ಸಿಜನ್ ಥೆರಪಿ ಎಂದರ್ಥ. ಈ ಚಿಕಿತ್ಸಾ ವಿಧಾನದಲ್ಲಿ ವ್ಯಕ್ತಿಗೆ ಪ್ರತ್ಯೇಕವಾಗಿ ಶುದ್ಧ ಆಮ್ಲಜನಕವನ್ನು ಸಾಮಾನ್ಯಕ್ಕಿಂತಲೂ ಹೆಚ್ಚಿನ ವೇಗದಲ್ಲಿ ನೀಡಲಾಗುತ್ತದೆ. ಈ ಥೆರಪಿ ಮಾಡಿಸಲು ವಿಶೇಷವಾದ ಕೋಣೆ ಅಥವಾ ಚೇಂಬರ್ಗಳನ್ನು ನಿರ್ಮಿಸಿ ಅದರಲ್ಲಿ ಚಿಕಿತ್ಸೆ ಪಡೆಯುವವರನ್ನು ಕೂರಿಸಿ ಅಥವಾ ಮಲಗಿಸಿ ವೇಗವಾಗಿ ಶುದ್ಧ ಆಮ್ಲಜನಕವನ್ನು ಅವರ ದೇಹಕ್ಕೆ ಹರಿಸಲಾಗುತ್ತದೆ.
ಈ ರೀತಿಯಾಗಿ ಮಾಡುವುದರಿಂದ ಶ್ವಾಸಕೋಶಗಳು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುತ್ತವೆ ಹಾಗೂ ರಕ್ತದಲ್ಲಿಯೂ ಆಮ್ಲಜನಕದ ಪ್ರಮಾಣ ಹೆಚ್ಚಾಗುತ್ತದೆ. ಚರ್ಮವು ಶುಷ್ಕವಾಗಿ ಬಿಳಿಚಿಕೊಳ್ಳುವುದರಿಂದ ರಕ್ಷಿಸುತ್ತದೆ, ರಕ್ತದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಶ್ವಾಸಕೋಶದ ಸೋಂಕುಗಳು ನಿವಾರಣೆಯಾಗುತ್ತದೆ. ಗಾಯಗಳು, ನೋವುಗಳು ಬೇಗನೆ ಮಾಯಲು, ವಾಸಿಯಾಗಲು ಪ್ರಾರಂಭವಾಗುತ್ತವೆ.
ಇದನ್ನೂ ಓದಿ:Samantha: ಸಮಂತಾ ಅನಾರೋಗ್ಯದ ಬಗ್ಗೆ ಮತ್ತೆ ಹಬ್ಬಿದೆ ಸುದ್ದಿ; 6 ತಿಂಗಳು ಅಮೆರಿಕದಲ್ಲಿ ಚಿಕಿತ್ಸೆ?
ಮತ್ತೊಂದು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಕಳೆದ ಆರು ತಿಂಗಳು ನನ್ನ ಪಾಲಿಗೆ ಅತ್ಯಂತ ಕಠಿಣವಾದ ಹಾಗೂ ಶ್ರಮದಾಯಕವಾದ ಆರು ತಿಂಗಳಾಗಿದ್ದವು. ಕೊನೆಗೂ ಅದು ಅಂತ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ. ಅನಾರೋಗ್ಯ ಇನ್ನಿತರೆ ಕಾರಣಗಳಿಗೆ ಸಮಂತಾರ ಶೂಟಿಂಗ್ ಶೆಡ್ಯೂಲ್ನಲ್ಲಿ ವ್ಯತ್ಯಾಸವಾಗಿ ಒಪ್ಪಿಕೊಂಡಿದ್ದ ಸಿನಿಮಾ ಹಾಗೂ ವೆಬ್ ಸರಣಿಯನ್ನು ಬೇಗನೆ ಮುಗಿಸಿಕೊಡುವ ಒತ್ತಡ ಸಮಂತಾ ಮೇಲಿತ್ತು. ಹಾಗಾಗಿ ಸತತ ಪ್ರಯಾಣ, ಹಗಲು ರಾತ್ರಿ ಚಿತ್ರೀಕರಣದಲ್ಲಿ ಸಮಂತಾ ಭಾಗಿಯಾಗಿದ್ದರು. ಸಿನಿಮಾ ಪ್ರಚಾರಗಳಲ್ಲಿಯೂ ಭಾಗಿಯಾಗಿದ್ದರು, ಇದರ ನಡುವೆ ಅನಾರೋಗ್ಯವೂ ಸಮಂತಾರನ್ನು ಕಾಡಿತ್ತು. ಹಾಗಾಗಿ ಕಳೆದ ಆರು ತಿಂಗಳು ಬಹಳ ಕಷ್ಟಕರವಾಗಿತ್ತು ಎಂದು ಸಮಂತಾ ಹೇಳಿದ್ದಾರೆ.
ಸಮಂತಾ ಪ್ರಸ್ತುತ ಹಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ನಟಿಸಿರುವ ಖುಷಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಜೊತೆಗೆ ವರುಣ್ ಧವನ್ ಜೊತೆಗೆ ಹಿಂದಿ ಸಿಟಾಡೆಲ್ ವೆಬ್ ಸರಣಿಯಲ್ಲಿ ಸಮಂತಾ ನಟಿಸಿದ್ದು ಅದೂ ಸಹ ಶೀಘ್ರವೇ ತೆರೆಗೆ ಬರಲಿದೆ. ಅದರ ಬಳಿಕ ಬಾಲಿವುಡ್ನ ಹೊಸ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ. ಅದರ ಬಳಿಕ ಇಂಗ್ಲೀಷ್ನ ಅರೇಂಜ್ಮೆಂಟ್ ಆಫ್ ಲವ್ಸ್ ಸಿನಿಮಾದಲ್ಲಿಯೂ ಸಮಂತಾ ನಟಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ