ಸೌಂದರ್ಯದ ಬಗ್ಗೆ ಬಹುತೇಕರಿಗೆ ಭ್ರಮೆಗಳಿರುತ್ತವೆ. ನಾವು ಹೀಗೆಯೇ ಕಾಣಬೇಕು ಎಂದು ಜನರು ಎಲ್ಲಿಲ್ಲದ ಕಸರತ್ತು ಮಾಡುತ್ತಾರೆ. ಅದರಲ್ಲೂ ನಟಿಯರು ತಮ್ಮ ಬಾಹ್ಯ ಸೌಂದರ್ಯದ ಕಡೆಗೆ ಹೆಚ್ಚು ಗಮನ ನೀಡುತ್ತಾರೆ ಎಂದರೆ ತಪ್ಪಿಲ್ಲ. ಮೇಕಪ್ ಮತ್ತು ಕಾಸ್ಟ್ಯೂಮ್ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಖ್ಯಾತ ನಟಿ ಸಮೀರಾ ರೆಡ್ಡಿ ಕೂಡ ಹಾಗೆಯೇ ಇದ್ದರು. ದೇಹದ ಸೌಂದರ್ಯದ ಬಗ್ಗೆ ಅವರು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದರು. ಆದರೆ ಈಗ ಬದಲಾಗಿದ್ದಾರೆ. ಆ ಬಗ್ಗೆ ಸ್ವತಃ ಸಮೀರಾ ಕೆಲವು ವಿಚಾರಗಳನ್ನು ಬಾಯಿ ಬಿಟ್ಟಿದ್ದಾರೆ.
2002ರಿಂದ 2013ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಮೀರಾ ರೆಡ್ಡಿ, 2014ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರು ನಟಿಸಿದ ಕೊನೇ ಸಿನಿಮಾ ಕನ್ನಡದ ‘ವರದನಾಯಕ’. ಆ ಚಿತ್ರದಲ್ಲಿ ಅವರು ಸುದೀಪ್ಗೆ ಜೋಡಿ ಆಗಿದ್ದರು. ಆ ಸಿನಿಮಾದ ನಂತರ ಸಂಸಾರದ ಕಡೆಗೆ ಸಮೀರಾ ಹೆಚ್ಚು ಗಮನ ನೀಡಿದರು. ಎರಡು ಮಕ್ಕಳ ತಾಯಿ ಆಗಿರುವ ಅವರು ಈಗ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಬದುಕಿನ ಕೆಲವು ಖಾಸಗಿ ವಿಚಾರಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಬೇರೆ ಎಲ್ಲ ನಟಿಯರಂತೆ ಸಮೀರಾ ರೆಡ್ಡಿ ಕೂಡ ತಮ್ಮ ದೇಹದ ಸೌಂದರ್ಯಕ್ಕಾಗಿ ತುಂಬ ತಲೆ ಕೆಡಿಸಿಕೊಳ್ಳುತ್ತಿದ್ದರು. ಆದರೆ ಈಗ ಅವರು ಬದಲಾಗಿದ್ದಾರೆ. ನಾವು ಹೇಗಿದ್ದೇವೆಯೋ ಹಾಗೆಯೇ ನಮ್ಮನ್ನು ನಾವು ಒಪ್ಪಿಕೊಳ್ಳಬೇಕು ಎಂಬುದನ್ನು ಅರಿತುಕೊಂಡಿದ್ದಾರೆ. ಅಭಿಮಾನಿಗಳಿಗೂ ಈ ಮಾತನ್ನು ಮನವರಿಕೆ ಮಾಡಿಸುವ ಸಲುವಾಗಿ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
‘ಪ್ಯಾಡೆಡ್ ಬ್ರಾಗಳು, ಕಲರ್ಡ್ ಕಾಂಟೆಕ್ಟ್ ಲೆನ್ಸ್ಗಳು, ಎಡಿಟ್ ಮಾಡಿದ ಫೋಟೋಗಳ ಕಾಲದಿಂದ ಈಗ ನಾನು ನಾನಾಗಿಯೇ ಇರುವ ಸ್ವತಂತ್ರದವರಗೆ ಸಾಗಿ ಬಂದಿದ್ದೇನೆ. ಯಾವುದೇ ಒತ್ತಡ ಇಲ್ಲ’ ಎಂಬ ಕ್ಯಾಪ್ಷನ್ನೊಂದಿಗೆ ಸಮೀರಾ ಶೇರ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ. ಸಮೀರಾ ಅವರ ಈ ಬದಲಾವಣೆ ಬಗ್ಗೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೌಂದರ್ಯದ ಬಗ್ಗೆ ಇರುವ ಭ್ರಮೆಯನ್ನು ಕಳಚಿ ಹಾಕುವಲ್ಲಿ ಅವರ ಪ್ರಯತ್ನ ಗಮನ ಸೆಳೆಯುತ್ತಿವೆ. ಸಮೀರಾ ಪೋಸ್ಟ್ಗಳಿಗೆ ಅನೇಕರು ಪಾಸಿಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು, ಮದುವೆ-ಮಕ್ಕಳು ಆದ ಬಳಿಕ ಫಿಟ್ನೆಸ್ ಕಡೆಗೆ ಗಮನ ನೀಡಲು ಸಮೀರಾಗೆ ಸಾಧ್ಯವಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅವರು ಸ್ಲಿಮ್ ಆಗುವ ಪ್ರಯತ್ನ ನಡೆಸುತ್ತಿದ್ದಾರೆ. ತಮ್ಮ ದಿನಚರಿಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಮಾಡಿಕೊಂಡಿದ್ದಾರೆ. ಆ ಬಗ್ಗೆಯೂ ಅವರು ಆಗಾಗ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.
ಪ್ರತಿ ವಾರವೂ ಅರ್ಧ ಕೆಜಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬ ಟಾರ್ಗೆಟ್ ಇಟ್ಟುಕೊಂಡು, ಅದಕ್ಕೆ ತಕ್ಕಂತೆ ತಮ್ಮ ಜೀವನ ಶೈಲಿಯನ್ನು ಅವರು ರೂಢಿಸಿಕೊಳ್ಳುತ್ತಿದ್ದಾರೆ. ನಿಧಾನವಾದರೂ ಪರವಾಗಿಲ್ಲ. ತಾವು ಗುರಿ ಸಾಧಿಸುವುದು ಖಚಿತ ಎಂಬ ಭರವಸೆಯೊಂದಿಗೆ ಅವರು ಮುನ್ನುಗ್ಗುತ್ತಿದ್ದಾರೆ.
ಇದನ್ನೂ ಓದಿ: ‘ವರದನಾಯಕ’ ನಟಿ ಸಮೀರಾ ರೆಡ್ಡಿ ತೂಕ 90 ಕೆಜಿ! ಸ್ಲಿಮ್ ಆಗಲು ಕಂಡುಕೊಂಡಿದ್ದಾರೆ ಸಿಂಪಲ್ ಸೂತ್ರ
(Sameera Reddy video post about padded bras and pure freedom goes viral on social media)