2025ರ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳಿವು

|

Updated on: Jan 01, 2025 | 10:55 AM

Kannada Movies: 2024 ಮುಗಿದಿದೆ, 2025 ಪ್ರಾರಂಭ ಆಗಿದೆ. 2024 ಕನ್ನಡ ಚಿತ್ರರಂಗದ ಪಾಲಿಗೆ ಸಾಧಾರಣ ವರ್ಷವಾಗಿತ್ತು. ಗೆಲುವುಗಳು ಇದ್ದರೂ ಸಹ ಸೋಲುಗಳು ಸಹ ತುಸು ಹೆಚ್ಚೇ ಇದ್ದವು. ಆದರೆ 2025, 2024ಕ್ಕಿಂತಲೂ ಉತ್ತಮವಾಗಿರುವ ನಿರೀಕ್ಷೆ ಆರಂಭದಲ್ಲಿಯೇ ಮೂಡಿದೆ. 2025ರಲ್ಲಿ ನಿರೀಕ್ಷೆ ಮೂಡಿಸಿರುವ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ.

2025ರ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳಿವು
Expected Kannada Movies
Follow us on

2024 ಕಳೆದು ಹೋಗಿದೆ. 2025 ಪ್ರಾರಂಭವಾಗಿದೆ. 2024 ಕನ್ನಡ ಚಿತ್ರರಂಗದ ಪಾಲಿಗೆ ಸಾಧಾರಣವಾಗಿ ಇತ್ತಷ್ಟೆ. 2024ರ ಮೊದಲಾರ್ಧ ಸತತ ಸೋಲುಗಳೇ ಇದ್ದರೆ ದ್ವೀತೀಯಾರ್ಧದಲ್ಲಿ ಸ್ಯಾಂಡಲ್​ವುಡ್ ತುಸು ಚೇತರಿಕೆ ಕಂಡಿತು. ಒಟ್ಟಾರೆಯಾಗಿ ನೋಡುವುದಾದರೆ 2024 ಅನ್ನು 70-30 ಎನ್ನಬಹುದೇನೋ. ಇದೀಗ 2025 ಬಂದಿದೆ. ಈ ವರ್ಷ ಹಲವು ದೊಡ್ಡ ಸಿನಿಮಾಗಳು ಬಿಡುಗಡೆ ಆಗಲು ರೆಡಿಯಾಗುತ್ತಿವೆ. ಕೆಲವು ಸಿನಿಮಾಗಳ ಚಿತ್ರೀಕರಣ ಚಾಲ್ತಿಯಲ್ಲಿವೆ. ಕೆಲವು ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಒಟ್ಟಾರೆ 2024ಕ್ಕೆ ಹೋಲಿಸಿದರೆ 2025 ಕನ್ನಡ ಸಿನಿಮಾ ಪ್ರೇಮಿಗಳ ಪಾಲಿಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬಹುದಾದ ವರ್ಷವಾಗಿದೆ. ಇಲ್ಲಿದೆ ನೋಡಿ ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾಗಳ ಪಟ್ಟಿ.

‘ಟಾಕ್ಸಿಕ್’

ಯಶ್ ನಟಿಸಿ, ಗೀತು ಮೋಹನ್​ದಾಸ್ ನಿರ್ದೇಶನ ಮಾಡುತ್ತಿರುವ ‘ಟಾಕ್ಸಿಕ್’ ಕನ್ನಡದ ಪಾಲಿಗೆ ಮಾತ್ರವಲ್ಲ ಇಡೀ ದೇಶದ ಸಿನಿಮಾ ಪ್ರೇಮಿಗಳು ಬಹು ನಿರೀಕ್ಷೆಯಿಂದ ಎದುರು ನೋಡುತ್ತಿರುವ ಸಿನಿಮಾ ಆಗಿದೆ. ಈ ಸಿನಿಮಾ 2025ರ ಡಿಸೆಂಬರ್​ಗೆ ತೆರೆಗೆ ಬರಲಿದೆ. ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಇದೇ ವರ್ಷ ಆಗಸ್ಟ್​ನಿಂದ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯಲಿದೆ. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿವೆ.

‘ಕಾಂತಾರ ಚಾಪ್ಟರ್ 1’

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸಹ ಭಾರತವೇ ಎದುರು ನೋಡುತ್ತಿರುವ ಕನ್ನಡ ಸಿನಿಮಾ ಆಗಿದೆ. 2021ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ‘ಕಾಂತಾರ: ಚಾಪ್ಟರ್ 1’ ಆಗಿದ್ದು ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತದಲ್ಲಿದೆ. ಈ ಸಿನಿಮಾವನ್ನು ಹೊಂಬಾಳೆ ನಿರ್ಮಾಣ ಮಾಡುತ್ತಿದೆ. ‘ಕಾಂತಾರ: ಚಾಪ್ಟರ್ 1’ ನಲ್ಲಿ ರಿಷಬ್ ಏನು ಮ್ಯಾಜಿಕ್ ಮಾಡಿದ್ದಾರೆ ನೋಡಬೇಕಿದೆ.

‘ಬಿಲ್ಲಾ ರಂಗ ಭಾಷಾ’

ಸುದೀಪ್ ನಟನೆಯ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಇದೇ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲವಾದರೂ ಕತೆ ಅಂತಿಮವಾಗಿದೆ ಎನ್ನಲಾಗುತ್ತಿದೆ. ಈ ಸಿನಿಮಾವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಇದೇ ವರ್ಷ ಸುದೀಪ್​ರ ಮತ್ತೊಂದು ಸಿನಿಮಾ ಸಹ ಬಿಡುಗಡೆ ಆಗುವ ಸಾಧ್ಯತೆ ಇದೆ.

‘ಡೆವಿಲ್’

ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕಳೆದ ವರ್ಷವೇ ಅಂದರೆ 2024ರ ಡಿಸೆಂಬರ್​ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ದರ್ಶನ್ ಜೈಲು ಪಾಲಾದ ಕಾರಣ ಸಿನಿಮಾ ಬಿಡುಗಡೆ ಆಗಲಿಲ್ಲ. ಈಗ ಜನವರಿ 15ರ ಬಳಿಕ ಚಿತ್ರೀಕರಣ ಪ್ರಾರಂಭ ಆಗುವ ನಿರೀಕ್ಷೆ ಇದ್ದು, ಇದೇ ವರ್ಷ ಬಿಡುಗಡೆ ಆಗಲಿದೆ. ಹಲವು ಕಾರಣಗಳಿಗೆ ಈ ಸಿನಿಮಾದ ಮೇಲೆ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ. ಅದರಲ್ಲಿ ಒಂದು ಪ್ರಮುಖ ಕಾರಣ, ಹಲವು ವರ್ಷಗಳ ಬಳಿಕ ಮಿಲನ ಪ್ರಕಾಶ್ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ.

‘45’

ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ನಟಿಸಿರುವ ‘45’ ಸಿನಿಮಾ ಸಹ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಳ್ಳಬಹುದಾದ ಸಿನಿಮಾ. ಅರ್ಜುನ್ ಜನ್ಯ ಪಾಲಿಗೆ ಇದು ಮೊದಲ ಸಿನಿಮಾ ಆಗಿದ್ದರೂ ಸಹ ಈ ಸಿನಿಮಾಕ್ಕಾಗಿ ಅವರು ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾದ ಗುಣಮಟ್ಟವೂ ಸಹ ಅತ್ಯುತ್ತಮವಾಗಿರುವಂತೆ ನೋಡಿಕೊಳ್ಳಲಾಗಿದೆಯಂತೆ. ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

‘ಉತ್ತರಕಾಂಡ’

ಡಾಲಿ ಧನಂಜಯ್, ಶಿವರಾಜ್ ಕುಮಾರ್ ಇನ್ನೂ ಕೆಲವು ಪ್ರತಿಭಾನ್ವಿತ ನಟರು ನಟಿಸಿರುವ ‘ಉತ್ತರಕಾಂಡ’ ಸಿನಿಮಾ ಸಹ ಕಳೆದ ವರ್ಷವೇ ಬಿಡುಗಡೆ ಆಗಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಈ ಸಿನಿಮಾದ ಬಿಡುಗಡೆ ತಡವಾಗಿದೆ. ಈ ಸಿನಿಮಾದ ಟೀಸರ್​ ಈಗಾಗಲೇ ಬಿಡುಗಡೆ ಆಗಿ ಗಮನ ಸೆಳೆದಿದೆ. ಈ ಸಿನಿಮಾ ಮೇಲೂ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ.

‘ಕೆಡಿ’

ಪ್ರೇಮ್ ನಿರ್ದೇಶನ ಮಾಡಿ ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ‘ಕೆಡಿ’ ಸಿನಿಮಾ ಸಹ ಈ ವರ್ಷದ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆ ಆಗಿದ್ದು, ಗಮನ ಸೆಳೆಯುತ್ತಿದೆ. ‘ಕೆಡಿ’ ಸಿನಿಮಾದಲ್ಲಿ ಹಲವು ತಾರೆಯರು ಒಟ್ಟಿಗೆ ಕೆಲಸ ಮಾಡಿದ್ದಾರೆ.

‘ರಿಚರ್ಡ್ ಆಂಟೊನಿ’

ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸುತ್ತಿರುವ ‘ರಿಚರ್ಡ್ ಆಂಟೊನಿ’ ಸಿನಿಮಾ ಇದೇ ವರ್ಷ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭ ಆಗಿಲ್ಲ. ಸಿನಿಮಾದ ಕತೆಯಲ್ಲಿ ರಕ್ಷಿತ್ ಶೆಟ್ಟಿ ಸಾಕಷ್ಟು ಸಮಯ ವ್ಯಯಿಸುತ್ತಿದ್ದಾರೆ. ಒಂದೊಮ್ಮೆ ಇದೇ ವರ್ಷ ಈ ಸಿನಿಮಾ ಬಿಡುಗಡೆ ಆದರೆ ಖಂಡಿತ ಗಮನ ಹರಿಸಬೇಕಾದ ಸಿನಿಮಾ ಇದಾಗಲಿದೆ.

ನಿರೀಕ್ಷೆ ಹುಟ್ಟಿಸಿರುವ ಇನ್ನು ಕೆಲ ಸಿನಿಮಾಗಳು

ಚಂದ್ರು ನಿರ್ದೇಶನದ ‘ಕಬ್ಜ 2’, ಶಿವರಾಜ್ ಕುಮಾರ್ ನಟಿಸಿ, ಹೇಮಂತ್ ರಾವ್ ನಿರ್ದೇಶಿಸುತ್ತಿರುವ ‘ಭೈರವನ ಕೊನೆ ಪಾಠ’, ದುನಿಯಾ ವಿಜಯ್ ನಿರ್ದೇಶನದ ಹೊಸ ಸಿನಿಮಾ, ಶಿವರಾಜ್ ಕುಮಾರ್​ಗಾಗಿ ಉಮಾಪತಿ ಶ್ರೀನಿವಾಸ್ ನಿರ್ಮಿಸುತ್ತಿರುವ ಸಿನಿಮಾ. ದುನಿಯಾ ವಿಜಿ-ವಿನಯ್ ರಾಜ್​ಕುಮಾರ್ ನಟನೆಯ ‘ಸಿಟಿ ಲೈಟ್ಸ್’, ‘777 ಚಾರ್ಲಿ’ ನಿರ್ದೇಶಕ ಕಿರಣ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾ. ‘ಡೇರ್​ಡೆವಿಲ್ ಮುಸ್ತಫಾ’ ನಿರ್ದೇಶಕ ಶಶಾಂಕ್ ಸೋಗಲ್-ಡಾಲಿ ಧನಂಜಯ್ ಕಾಂಬಿನೇಷನ್​ನ ಹೊಸ ಸಿನಿಮಾ ಇನ್ನೂ ಕೆಲ ಸಿನಿಮಾಗಳು ನಿರೀಕ್ಷೆ ಹುಟ್ಟಿಸಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:51 am, Wed, 1 January 25