ಕಿಚ್ಚ ಸುದೀಪ್ ಅವರು ತಮ್ಮ 46ನೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಶೀರ್ಷಿಕೆ ಅಂತಿಮವಾಗದ ಈ ಸಿನಿಮಾಗೆ ತಾತ್ಕಾಲಿಕವಾಗಿ ‘K 46‘ ಎಂದು ಕರೆಯಲಾಗುತ್ತಿದೆ. ಇದರ ಶೂಟಿಂಗ್ ತಮಿಳುನಾಡಿನಲ್ಲಿ ನಡೆಯುತ್ತಿದೆ. ಕಾಲಿವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ವಿ ಕ್ರಿಯೇಶನ್ಸ್’ ಮೂಲಕ ಕಲೈಪುಲಿ ಎಸ್. ಧಾನು ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ತಮಿಳುನಾಡಿನಲ್ಲಿ ನಡೆಯುತ್ತಿದೆ. ಅದಕ್ಕಾಗಿ ಮಹಾಬಲಿಪುರಂನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ವಿಶೇಷ ಏನೆಂದರೆ ‘K 46′ ಸಿನಿಮಾದ ಸೆಟ್‌ನಲ್ಲಿ ಕೆಲಸ ಮಾಡುತ್ತಿರುವ ಶೇಕಡ 80ರಷ್ಟು ಮಂದಿ ಕನ್ನಡದವರು. ಅದಕ್ಕೆ ಕಾರಣವಾಗಿರುವುದು ಕಿಚ್ಚ ಸುದೀಪ್ (Kichcha Sudeep) ಅವರ ಕನ್ನಡ ಪ್ರೀತಿ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
ಗುರುವಾರ (ಆಗಸ್ಟ್ 03) ‘K 46′ ಸಿನಿಮಾದ ಶೂಟಿಂಗ್ ಮುಗಿಸಿದ ಬಳಿಕ ಮಹಾಬಲಿಪುರಂನಲ್ಲಿ ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತಿಗೆ ಸಿಕ್ಕ ಕಿಚ್ಚ ಸುದೀಪ್ ಅವರು ಒಂದಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡರು. ಮೊದಲೇ ಹೇಳಿದಂತೆ ಈ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಕಾಲಿವುಡ್‌ನ ನಿರ್ಮಾಣ ಸಂಸ್ಥೆ. ಹಾಗಾಗಿ ತಮಿಳಿನಲ್ಲಿ ಈ ಸಿನಿಮಾ ನಿರ್ಮಿಸಬೇಕು ಎಂಬುದು ನಿರ್ಮಾಪಕರ ಉದ್ದೇಶ ಆಗಿತ್ತು. ಆದರೆ ಸುದೀಪ್ ಅಂದುಕೊಂಡಿದ್ದೇ ಬೇರೆ. ಕನ್ನಡದಲ್ಲಿಯೇ ಸಿನಿಮಾ ಶೂಟಿಂಗ್ ಮಾಡಿ ನಂತರ ತಮಿಳಿಗೆ ಡಬ್ ಮಾಡುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದರು ಸುದೀಪ್. ಹಾಗಾಗಿ ಈ ಸಿನಿಮಾದ ಶೂಟಿಂಗ್ ತಮಿಳುನಾಡಿನಲ್ಲಿ ನಡೆದರೂ ಕೂಡ ಚಿತ್ರೀಕರಣದ ಸೆಟ್‌ನಲ್ಲಿ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರೇ ತುಂಬಿಕೊಂಡಿದ್ದಾರೆ. ಆ ಮೂಲಕ ಮಹಾಬಲಿಪುರಂನಲ್ಲೂ ಕನ್ನಡದ ಕಂಪು ಹರಡಿದೆ.
‘K 46′ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಒಂದೇ ಹಂತದಲ್ಲಿ ಶೂಟಿಂಗ್ ಮುಗಿಸಬೇಕು ಎಂಬ ಗುರಿಯನ್ನು ಚಿತ್ರತಂಡ ಇಟ್ಟುಕೊಂಡಿದೆ. ಸುದೀಪ್ ಅವರು ಆಗಸ್ಟ್ ತಿಂಗಳು ಪೂರ್ತಿ ತಮಿಳುನಾಡಿನಲ್ಲಿ ಶೂಟಿಂಗ್ ಮಾಡಲಿದ್ದಾರೆ. ನಂತರ ಬೆಂಗಳೂರಿಗೆ ಬಂದು ಜನ್ಮದಿನ (ಸೆ.2) ಆಚರಿಸಿಕೊಂಡ ಬಳಿಕ ಮತ್ತೆ ತಮಿಳುನಾಡಿಗೆ ಹಿಂದಿರುಗಿ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2023ರ ಡಿಸೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ವಿವಾದ ಬದಿಗಿಟ್ಟು ಶೂಟಿಂಗ್ಗೆ ರೆಡಿ ಆದ ಕಿಚ್ಚ ಸುದೀಪ್; ‘K46’ ಚಿತ್ರೀಕರಣ ಎಲ್ಲಿ?
‘ವಿಕ್ರಾಂತ್ ರೋಣ’ ತೆರೆಕಂಡು ದೊಡ್ಡ ಗ್ಯಾಪ್ ಆಗಿದೆ. ಆ ಬಳಿಕ ಸುದೀಪ್ ಆರಂಭಿಸಿದ ಚಿತ್ರವೇ ‘K 46′. ಇದಲ್ಲದೆ ಇನ್ನೂ ಒಂದಷ್ಟು ಕಥೆಗಳಿಗೆ ಸುದೀಪ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಚ್ಚರಿ ಏನೆಂದರೆ ತಮ್ಮ 50ನೇ ಸಿನಿಮಾದ ತನಕವು ಲೈನ್ಅಪ್ ಆಗಿದೆ ಎಂದು ಅವರು ತಿಳಿಸಿದ್ದಾರೆ. ಆ ಸಿನಿಮಾಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಬಹಿರಂಗ ಆಗಬೇಕಿದೆ.
‘K 46′ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನಷ್ಟೇ ಫೈನಲ್ ಆಗಬೇಕಿದೆ. ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಅವರು ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಕೆಲವೇ ವಾರಗಳ ಹಿಂದೆ ಬಿಡುಗಡೆಯಾದ ಟೀಸರ್‌ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದರಲ್ಲಿನ ಸುದೀಪ್ ಅವರ ಗೆಟಪ್ ಗಮನ ಸೆಳೆದಿದೆ. ಡೈಲಾಗ್‌ನ ಕಾರಣದಿಂದ ಸಿನಿಮಾ ಮೇಲಿನ ಹೈಪ್ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:53 am, Fri, 4 August 23