ಇಂದು ನಟ ಪುನೀತ್ ರಾಜ್ಕುಮಾರ್ ಅವರಿಗೆ ಚಿತ್ರರಂಗದ ವತಿಯಿಂದ ನಮನ ಸಲ್ಲಿಸುವ ಸಲುವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ‘ಪುನೀತ ನಮನ’ ಕಾರ್ಯಕ್ರಮ ಆಯೋಜಿಸಿದೆ. ಆದರೆ ಇದಕ್ಕೆ ಕೇವಲ ಚಿತ್ರರಂಗಕ್ಕೆ ಮಾತ್ರ ಆಹ್ವಾನವಿದ್ದು, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಸೀಮಿತ ಸಂಖ್ಯೆಯೊಂದಿಗೆ, ಸರಳವಾಗಿ ಪುನೀತ್ಗೆ ನಮನ ಸಲ್ಲಿಸಲು ಮಂಡಳಿ ಆಯೋಜಿಸಿದೆ. ಇದರಿಂದಾಗಿ ಅಭಿಮಾನಿಗಳಿಗೆ ಬೇಸರವಾಗಿತ್ತು. ಜನರ ಪ್ರೀತಿ ಗಳಿಸಿದ ಅಪ್ಪು ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಏಕೆ ಪ್ರವೇಶವಿಲ್ಲ ಎಂದು ಮಂಡಳಿಯನ್ನು ಪ್ರಶ್ನಿಸಲಾಗಿತ್ತು. ಇದೀಗ ನಿರ್ಮಾಪಕ ಸಾ.ರಾ ಗೋವಿಂದು ಹೊಸ ಮಾಹಿತಿ ನೀಡಿದ್ದು, ಅಭಿಮಾನಿಗಳಿಗೆಂದೇ ಬೇರೊಂದು ಕಾರ್ಯಕ್ರಮ ಮಾಡುವುದಾಗಿ ತಿಳಿಸಿದ್ಧಾರೆ. ಬೆಂಗಳೂರು, ಹುಬ್ಬಳ್ಳಿ ಅಥವಾ ದಾವಣಗೆರೆಯಲ್ಲಿ ಕಾರ್ಯಕ್ರಮ ನಡೆಯುವ ಬಗ್ಗೆ ಚರ್ಚೆ ನಡೆಯುತ್ತಿವೆ. ಆದರೆ ಈ ತಿಂಗಳು ಕಾರ್ಯಕ್ರಮ ನಡೆಯುವುದಿಲ್ಲ ಎಂದು ಅವರು ತಿಳಿಸಿದ್ಧಾರೆ.
ಟಿವಿ9ನೊಂದಿಗೆ ಮಾತನಾಡಿದ ನಿರ್ಮಾಪಕ ಸಾ.ರಾ.ಗೋವಿಂದು, ‘‘ಪುನೀತ್ ಅಭಿಮಾನಿಗಳಿಗಾಗಿ ಕಾರ್ಯಕ್ರಮ ಮಾಡುತ್ತೇವೆ. ಎಲ್ಲಿ ಕಾರ್ಯಕ್ರಮ ಮಾಡಬೇಕೆಂದು ಚರ್ಚೆಗಳು ನಡೆಯುತ್ತಿವೆ. ಬೆಂಗಳೂರು, ಹುಬ್ಬಳ್ಳಿ ಅಥವಾ ದಾವಣಗೆರೆಯಲ್ಲಿ ಕಾರ್ಯಕ್ರಮ ಮಾಡಲಾಗುವುದು. ಆದರೆ ಈ ತಿಂಗಳಿನಲ್ಲಿ ಕಾರ್ಯಕ್ರಮ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ ಕುಟುಂಬದ ಅಭಿಮಾನಿಗಳಿಗಾಗಿಯೇ ಪ್ರತ್ಯೇಕ ಕಾರ್ಯಕ್ರಮ ಮಾಡಲಾಗುವುದು’’ ಎಂದು ಹೇಳಿದ್ದಾರೆ.
ಇಂದಿನ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ ಶಕ್ತಿಧಾಮದ ಮಕ್ಕಳು:
ಇಂದಿನ ಕಾರ್ಯಕ್ರಮದ ಕುರಿತು ಮಾತನಾಡಿದ ಸಾ.ರಾ ಗೋವಿಂದು, ‘‘ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಗೀತೆಯಿಂದ ಆರಂಭಗೊಳ್ಳಲಿದೆ. ಮೂರು ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಮೈಸೂರಿನ ಶಕ್ತಿಧಾಮದ ಇಪ್ಪತ್ತು ಮಕ್ಕಳು ಭಾಗಿಯಾಗಿ, ಪುನೀತ್ ಬಗ್ಗೆ ಮಾತನಾಡಲಿದ್ದಾರೆ’’ ಎಂದು ಹೇಳಿದ್ದಾರೆ.
ಒಂದು ತಿಂಗಳ ಬಳಿಕ ಪುನೀತ್ ಪತ್ನಿ ಅಶ್ವಿನಿ ಮಾತನಾಡಲಿದ್ದಾರೆ: ಪುನೀತ್ ಮಾವ ಚಿನ್ನೇಗೌಡ ಮಾಹಿತಿ
ನಟ ಪುನೀತ್ ಬಗ್ಗೆ ಪತ್ನಿ ಅಶ್ವಿನಿ ಒಂದು ತಿಂಗಳ ಬಳಿಕ ಮಾತನಾಡುತ್ತಾರೆ ಎಂದು ಟಿವಿ9ಗೆ ನಟ ಪುನೀತ್ ಮಾವ ಚಿನ್ನೇಗೌಡ ಮಾಹಿತಿ ನೀಡಿದ್ದಾರೆ. ಪುನೀತ್ ಜೊತೆಗಿನ ನೆನಪುಗಳನ್ನು ಸ್ಮರಿಸಿದ ಅವರು, ‘‘ಪುನೀತ್ ರಾಜ್‌ಕುಮಾರ್‌ನ್ನ ಆಡಿಸಿ ಬೆಳೆಸಿದ್ದ ಕೈಗಳು ಇವು. ನಾನು ಅವನ ಎದೆ ನೋಡಿದಾಗಲೇ ದೊಡ್ಡ ಕಲಾವಿದನಾಗ್ತೀಯ ಅಂದಿದ್ದೆ. ಆಗ ಮಾವ ನಾನು ಕಲಾವಿದ ಆಗಲ್ಲ ಅಂದಿದ್ದ. ಪುನೀತ್ ರಾಜಕುಮಾರ್ ಈ ಮಟ್ಟಕ್ಕೆ ಬೆಳಯುತ್ತಾರೆಂದು ಯಾರಿಗೂ ಗೊತ್ತಿರಲಿಲ್ಲ’’ ಎಂದು ಚಿನ್ನೇಗೌಡ ನುಡಿದಿದ್ಧಾರೆ.
ಇದನ್ನೂ ಓದಿ:
ಪುನೀತ ನಮನ ಕಾರ್ಯಕ್ರಮಕ್ಕೆ ಕೇವಲ ಚಿತ್ರರಂಗಕ್ಕೆ ಪ್ರವೇಶ; ಅಭಿಮಾನಿಗಳಿಗೆ ಪ್ರತ್ಯೇಕ ಕಾರ್ಯಕ್ರಮ