Hamsalekha: ಹಂಸಲೇಖ ವಿವಾದಿತ ಹೇಳಿಕೆ ಪ್ರಕರಣ; ಪೇಜಾವರ ಶ್ರೀ ಶಿಷ್ಯರಿಂದ ದೂರು ದಾಖಲು
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ದಲಿತರ ಮನೆಯಲ್ಲಿ ವಾಸ್ತವ್ಯದ ಕುರಿತಂತೆ ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟಂತೆ, ಬೆಂಗಳೂರಿನಲ್ಲಿ ದೂರು ದಾಖಲಾಗಿದೆ.
ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಇತ್ತೀಚೆಗೆ ಮಾತನಾಡುತ್ತಾ ದಲಿತರ ಮನೆಯಲ್ಲಿ ಸವರ್ಣೀಯರ ವಾಸ್ತವ್ಯದ ಕುರಿತಂತೆ ಹೇಳಿಕೆ ನೀಡಿದ್ದರು. ಇದು ಪರ ಹಾಗೂ ವಿರೋಧದ ಚರ್ಚೆಗೆ ಕಾರಣವಾಗಿತ್ತು. ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿರುವಂತೆಯೇ ಅವರು ಕ್ಷಮೆ ಯಾಚಿಸಿದ್ದರು. ಇದೀಗ ಹಂಸಲೇಖ ಹೇಳಿಕೆಯ ವಿರುದ್ಧ ದೂರು ದಾಖಲಾಗಿದೆ. ಅವರ ಹೇಳಿಕೆಗೆ ಪೇಜಾವರ ಶ್ರೀಗಳ ಶಿಷ್ಯರಿಂದ ಆಕ್ಷೇಪ ವ್ಯಕ್ತವಾಗಿದ್ದು, ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇಂದು (ನವೆಂಬರ್ 16) ಕೃಷ್ಣರಾಜ ಎಂಬುವವರು ಹಂಸಲೇಖ ವಿರುದ್ಧ ದೂರು ನೀಡಿದ್ಧಾರೆ.
ಪ್ರಕರಣವೇನು? ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಂಸಲೇಖ ಪೇಜಾವರ ಶ್ರೀಗಳ ಕುರಿತು ಹೇಳಿಕೆ ನೀಡಿದ್ದರು. ಮೇಲುಜಾತಿ ಹಾಗೂ ಕೀಳುಜಾತಿ, ಜಾತಿ ತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ಅವರು ಪ್ರಯೋಗಿಸಿದ್ದ ಪದಗಳು ವಿವಾದಕ್ಕೆ ಕಾರಣವಾಗಿತ್ತು. ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು.
ಕ್ಷಮೆಯಾಚಿಸಿದ ಹಂಸಲೇಖ: ಹೇಳಿಕೆ ವಿವಾದ ಪಡೆಯುತ್ತಿದ್ದಂತೆಯೇ ಕ್ಷಮೆಯಾಚಿಸಿದ್ದ ಹಂಸಲೇಖ, ‘‘ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ. ಆ ವೇದಿಕೆಯಲ್ಲಿ ನುಡಿದರೆ ಮುತ್ತಿನಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ, ತಪ್ಪಾಗಿದೆ. ಅಸ್ಪ್ರಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥ ಗುರುಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದರು.
ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು, ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರ ಯಾವುದರ ಮೂಲಕ ಇದ್ದರೂ ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಅವರು ನುಡಿದಿದ್ದರು. ಇದೀಗ ಅವರ ಹೇಳಿಕೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಇದನ್ನೂ ಓದಿ:
Hamsalekha: ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ಕ್ಷಮೆ ಕೋರಿದ ಹಂಸಲೇಖ