ರೇಣುಕಾ ಸ್ವಾಮಿಯ ಅಮಾನುಷ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆತನ ಪ್ರೇಯಸಿ ಪವಿತ್ರಾ ಗೌಡ ಹಾಗೂ ಇನ್ನಿತರೆ ಆರೋಪಿಗಳು ಜೈಲು ಸೇರಿದ್ದಾರೆ. ಆರಂಭದಲ್ಲಿ ಪೊಲೀಸರ ಭಯಕ್ಕೆ ಬಳಲಿ ಬೆಂಡಾಗಿದ್ದ ದರ್ಶನ್ ಈಗ ತಿಂಗಳುಗಳು ಕಳೆಯುತ್ತಾ ಜೈಲಿನ ಪರಿಸ್ಥಿತಿಗೆ ಒಗ್ಗಿಕೊಂಡಂತಿದೆ. ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದಾಗ, ಅಲ್ಲಿ ನಿಯಮ ಮುರಿದು ಜೈಲನ್ನು ರೆಸಾರ್ಟ್ ಮಾಡಿಕೊಂಡಿದ್ದ ದರ್ಶನ್, 9 ಅಧಿಕಾರಿಗಳ ಅಮಾನತ್ತಿಗೆ ಕಾರಣವಾಗಿ ಈಗ ಬಳ್ಳಾರಿ ಜೈಲಿಗೆ ಬಂದಿದ್ದಾರೆ. ಇಲ್ಲಿಯೂ ಸಹ ಆರಂಭದ ಕೆಲ ದಿನ ಹುಳ್ಳಗೆ ಇದ್ದ ದರ್ಶನ್ ಈಗ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಮತ್ತೆ ಚಿಗುರಿದಂತೆ ಕಾಣುತ್ತಿದ್ದಾರೆ.
ಇಂದು (ಸೆಪ್ಟೆಂಬರ್ 12) ಮಧ್ಯಾಹ್ನ ಜೈಲಿನಿಂದ ಸಂದರ್ಶಕರ ಕೊಠಡಿಗೆ ಹೋಗುವ ಸಂದರ್ಭದಲ್ಲಿ ಗೇಟಿನ ಹೊರಗೆ ಕಂಡ ಮಾಧ್ಯಮಗಳ ಕ್ಯಾಮೆರಾ ನೋಡುತ್ತಿದ್ದಂತೆ ನಡಿಗೆಯನ್ನೇ ಬದಲಿಸಿ, ವಿಲನ್ ನಡಿಗೆ ಆವಾಹಿಸಿಕೊಂಡಿದ್ದಲ್ಲದೆ, ಮಧ್ಯದ ಬೆರಳು ತೋರಿಸುವ ಮೂಲಕ ತಮ್ಮ ಕೃತ್ರಿಮ ವ್ಯಕ್ತಿತ್ವವನ್ನು ಮತ್ತೊಮ್ಮೆ ಪ್ರದರ್ಶನ ಮಾಡಿದ್ದಾರೆ. ಇತರರ ತುಚ್ಛೀಕರಿಸುವ, ತಾನು ಮೇಲೆಂದು ತೋರ್ಪಡಿಸುವ, ಸರ್ವ ಶಕ್ತನೆಂದು ಪ್ರದರ್ಶಿಸುವ ಹಮ್ಮಿನಲ್ಲಿಯೇ ಜೀವವೇ ಹೋಗಲು ಕಾರಣವಾಗಿರುವ ದರ್ಶನ್, ಜೈಲಿನಲ್ಲಿದ್ದರೂ ಅದೇ ವ್ಯಕ್ತಿತ್ವವನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ:ಬಳ್ಳಾರಿ ಜೈಲಿನಲ್ಲಿ ಸೊರಗಿದ ದರ್ಶನ್; ತಾಯಿ ಬಾರದೇ ಇರುವುದಕ್ಕೆ ದಾಸನಿಗೆ ಬೇಸರ
ದರ್ಶನ್, ಕೊಲೆ ಆರೋಪಿಯಾಗಿ ಜೈಲು ಸೇರಿದ ಆರಂಭದಲ್ಲಿ, ದರ್ಶನ್ ಪಶ್ಚಾತ್ತಾಪದಲ್ಲಿದ್ದಾರೆ ಎಂಬೆಲ್ಲ ಮಾತುಗಳು ಕೇಳಿ ಬಂದಿದ್ದವು, ನ್ಯಾಯಾಲಯಕ್ಕೆ ಬರುತ್ತಿದ್ದಾಗ ಅವರ ಮುಖಚಹರೆಯೂ ಹಾಗೆಯೇ ಇತ್ತು. ಆದರೆ ಈಗ ಆರೋಪ ಪಟ್ಟಿ ಸಲ್ಲಿಕೆಯಾಗಿ ಜಾಮೀನಿಗೆ ಅರ್ಜಿ ಹಾಕುವ ಸಮಯ ಹತ್ತಿರ ಬರುತ್ತಿದ್ದಂತೆ ವರಸೆ ಬದಲು ಮಾಡಿಕೊಂಡಿದ್ದಾರೆ ನಟ ದರ್ಶನ್. ತಮ್ಮ ಅಟ್ಟಹಾಸದಿಂದ ಜೀವವೊಂದು ಹೋಗಿರುವ ಬಗ್ಗೆ ಕಿಂಚಿತ್ತೂ ಪಶ್ಚತ್ತಾಪವಿಲ್ಲದೆ, ಸಿನಿಮಾಗಳಲ್ಲಿ ವಿಲನ್ಗಳು ಬಂದಂತೆ ಅಟ್ಟಹಾಸದ ನಡಿಗೆ ನಡೆಯುತ್ತಾ, ವಿನಾಕಾರಣ ಕ್ಯಾಮೆರಾಗಳಿಗೆ ಮಧ್ಯದ ಬೆರಳು ತೋರಿಸಿದ್ದಾರೆ.
ಇಂದು, ದರ್ಶನ್ ಪರ ವಕೀಲರು ಹಾಗೂ ವಿಜಯಲಕ್ಷ್ಮಿ, ದಿನಕರ್ ತೂಗುದೀಪ ಅವರುಗಳು ದರ್ಶನ್ ಅನ್ನು ನೋಡಲು ಬಳ್ಳಾರಿಗೆ ಆಗಮಿಸಿದ್ದರು. ಆರೋಪ ಪಟ್ಟಿ ಸಲ್ಲಿಕ ಆಗಿದ್ದು, ಜಾಮೀನು ಅರ್ಜಿ ಸಲ್ಲಿಕೆ ಬಗ್ಗೆ ಇಂದು ಚರ್ಚಿಸಲಾಗಿದೆ. ಜಾಮೀನು ಅರ್ಜಿಯ ಜೊತೆಗೆ, ದರ್ಶನ್ ಅನ್ನು ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡುವ ಬಗ್ಗೆಯೂ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ