ನಟ ಚೇತನ್​ ಈವರೆಗೆ ಒಮ್ಮೆಯೂ ವೋಟ್​ ಹಾಕಿಲ್ಲ; ಅದಕ್ಕೆ ಇದೆ ಒಂದು ವಿಶೇಷ ಕಾರಣ

Chetan Kumar: ಅಚ್ಚರಿ ಎನಿಸಿದರೂ ಇದು ನಿಜ. ಭಾರತದಲ್ಲಿ ಚೇತನ್​ ವೋಟ್​ ಹಾಕಿಲ್ಲ. ಅವರಿಗೆ ಇಲ್ಲಿ ಮತದಾನ ಮಾಡುವ ಮತ್ತು ಚುನಾವಣೆಗೆ ನಿಲ್ಲುವ ಅಧಿಕಾರ ಇಲ್ಲ!

ನಟ ಚೇತನ್​ ಈವರೆಗೆ ಒಮ್ಮೆಯೂ ವೋಟ್​ ಹಾಕಿಲ್ಲ; ಅದಕ್ಕೆ ಇದೆ ಒಂದು ವಿಶೇಷ ಕಾರಣ
ನಟ ಚೇತನ್​ ಕುಮಾರ್
Edited By:

Updated on: Jun 20, 2021 | 2:01 PM

ನಟ ಚೇತನ್​ ಕುಮಾರ್​ ಅವರು ತಮ್ಮ ಸಿದ್ಧಾಂತಗಳ ಕಾರಣದಿಂದ ಆಗಾಗ ವಿವಾದಕ್ಕೆ ಒಳಗಾಗುತ್ತ ಇರುತ್ತಾರೆ. ಅಮೆರಿಕದಲ್ಲಿ ಬೆಳೆದು, ಅಲ್ಲಿಯೇ ವಿದ್ಯಾಭ್ಯಾಸ ಪಡೆದ ಅವರು ನಂತರ ಕರ್ನಾಟಕಕ್ಕೆ ಬಂದರು. ‘ಆ ದಿನಗಳು’ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಚೇತನ್​ ಕುಮಾರ್​ ಈಗ ಸಾಮಾಜಿಕ ಹೋರಾಟದಿಂದ ಸದ್ದು ಮಾಡುತ್ತಿದ್ದಾರೆ. ಬ್ರಾಹ್ಮಣ್ಯದ ಬಗ್ಗೆ ಅವರು ಇತ್ತೀಚೆಗೆ ಮಾಡಿದ ಸೋಶಿಯಲ್​ ಮೀಡಿಯಾ ಪೋಸ್ಟ್​ಗಳಿಂದ ವಿವಾದ ಸೃಷ್ಟಿ ಆಯಿತು. ಅಚ್ಚರಿ ಎಂದರೆ, ಭಾರತದ ಅಭಿವೃದ್ಧಿ ಮತ್ತು ಸಮಾನತೆ ಬಗ್ಗೆ ಮಾತನಾಡುವ ಚೇತನ್​ ಈವರೆಗೆ ಒಮ್ಮೆಯೂ ಕೂಡ ವೋಟ್​ ಹಾಕಿಲ್ಲ!

ಅಚ್ಚರಿ ಎನಿಸಿದರೂ ಇದು ನಿಜ. ಭಾರತದಲ್ಲಿ ಚೇತನ್​ ವೋಟ್​ ಹಾಕಿಲ್ಲ ಎಂದಮಾತ್ರಕ್ಕೆ ಅವರು ತಮ್ಮ ಮತದಾನದ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಅರ್ಥವಲ್ಲ. ಅವರಿಗೆ ಭಾರತದಲ್ಲಿ ಮತದಾನ ಮಾಡುವ ಮತ್ತು ಚುನಾವಣೆಗೆ ನಿಲ್ಲುವ ಅಧಿಕಾರ ಇಲ್ಲ! ಯಾಕೆಂದರೆ ಅವರು ಓಸಿಐ ಕಾರ್ಡ್​ ಹೊಂದಿರುವವರು. ಅಂದರೆ, ಓವರ್​ಸೀಸ್​ ಸಿಟಿಜನ್​ ಆಫ್​ ಇಂಡಿಯಾ. ವಿದೇಶದಲ್ಲಿರುವ ಭಾರತೀಯ ಮೂಲಕ ದಂಪತಿಯ ಮಕ್ಕಳಿಗೆ ಈ ಕಾರ್ಡ್​ ಸಿಗುತ್ತದೆ.

‘ನಾವು 75 ವರ್ಷದಿಂದ ಭಾರತೀಯ ಮೂಲ ನಿವಾಸಿಗಳು. ಇದು ನಮ್ಮ ದೇಶ. ನಾನು ಓಸಿಐ ಕಾರ್ಡ್​ ಹೊಂದಿರುವವನು ಹೌದು. ಮತ ಹಾಕುವ ಹಕ್ಕು ನನಗಿಲ್ಲ. ನಾನು ಯಾವತ್ತೂ ಇಲ್ಲಿ ಮತ ಹಾಕಿಲ್ಲ. ನನಗೆ ಎಲೆಕ್ಷನ್​ಗೆ ನಿಲ್ಲುವ ಹಕ್ಕು ಕೂಡ ಇಲ್ಲ. ಈ ಎರಡನ್ನು ಹೊರತುಪಡಿಸಿದರೆ ಪ್ರತಿಯೊಬ್ಬ ಭಾರತೀಯನಿಗೆ ಸಿಗಬೇಕಾದ ಹಕ್ಕು ನನಗೂ ಸಿಕ್ಕಿದೆ. ನನ್ನ ತಂದೆ-ತಾಯಿ, ತಾತ-ಅಜ್ಜಿ ಎಲ್ಲರೂ ಇಂಡಿಯಾದವರೇ. ನಾನು ಈ ದೇಶಕ್ಕೆ ಕೊಡುಗೆ ಸಲ್ಲಿಸಬೇಕು. ಪಾಸ್​ಪೋರ್ಟ್​ ಮುಖ್ಯ ಆಗುವುದಿಲ್ಲ. ಮನಸ್ಥಿತಿ ಮುಖ್ಯ ಆಗುತ್ತದೆ’ ಎಂದು ಚೇತನ್​ ಹೇಳಿದ್ದಾರೆ.

‘ನಾಳೆ ಯಾರೋ ಬಿಳಿಯರು ಬಂದು ಇಲ್ಲಿ ಸೇವೆ ಮಾಡುತ್ತಾರೆ ಎಂದರೆ ನಾವು ಅವರನ್ನು ಭಾರತೀಯರು ಅಂತ ಒಪ್ಪಿಕೊಳ್ಳೋಣ. ಆ ಒಂದು ಮನುಷ್ಯತ್ವಕ್ಕೆ ನಾವು ಬೆಲೆ ಕೊಡೋಣ. ಇಂಡಿಯನ್​ ಪಾಸ್​ಪೋರ್ಟ್​ ಇಟ್ಟುಕೊಂಡಿರುವವರು ಪಾರ್ಲಿಮೆಂಟ್​ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ಅವರೆಲ್ಲ ದೇಶದ್ರೋಹ ಮಾಡುತ್ತಿದ್ದಾರೆ. ಅವರನ್ನು ಗಡಿಪಾರು ಮಾಡಲಿ. ನಾನು ಯಾವತ್ತೂ ಇಲ್ಲಿನ ಕಾನೂನು ಉಲ್ಲಂಘನೆ ಮಾಡಿಲ್ಲ. ಸಂವಿಧಾನದ ಅಡಿಯಲ್ಲಿ ಉತ್ತಮ ಸಮಾಜ ನಿರ್ಮಿಸುವ ಉದ್ದೇಶ ನನಗಿದೆ. ಕೈಲಾದ ಸಮಾಜ ಸೇವೆ, ಹೋರಾಟ ಮತ್ತು ಜನ ಜಾಗೃತಿಯ ಕೆಲಸವನ್ನು ಮುಂದೆಯೂ ಮಾಡುತ್ತೇನೆ’ ಎಂದು ಚೇತನ್​ ಹೇಳಿದ್ದಾರೆ.

ಇದನ್ನೂ ಓದಿ:

ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ನಟ ಚೇತನ್‌ಗೆ ನೋಟಿಸ್

‘ಚಿತ್ರರಂಗದಲ್ಲಿರುವ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಲಿ’; ರಕ್ಷಿತ್ ಶೆಟ್ಟಿಗೆ ಚೇತನ್​ ಸವಾಲು