ನಟ ದರ್ಶನ್ ಅವರು ಜೈಲೂಟ ಚೆನ್ನಾಗಿಲ್ಲ, ಮನೆ ಊಟ ಕೊಡಿ ಎಂದು ಪದೇ ಪದೇ ಕೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ಕೋರ್ಟ್ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಕೆ ಆಗಿದೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬಳಿ ಮನೆ ಊಟ ಕೊಡೋಕೆ ಕೇಳಿದ್ದರು. ಆದರೆ, ಈ ಅರ್ಜಿ ತಿರಸ್ಕರಿಸಲ್ಪಟ್ಟಿದೆ. ಇದನ್ನು ದರ್ಶನ್ ಅವರು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಮಧ್ಯೆ ‘ಆ ದಿನಗಳು’ ಚೇತನ್ ಅವರು ಜೈಲೂಟವನ್ನು ಹೊಗಳಿದ್ದಾರೆ. ‘ನಂಗೆ ಜೈಲೂಟ ಸಖತ್ ಇಷ್ಟ’ ಎಂದಿದ್ದಾರೆ.
ದರ್ಶನ್ ಅರೆಸ್ಟ್ ಆಗಿರೋ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕೆಲವು ಸೆಲೆಬ್ರಿಟಿಗಳು ಅವರನ್ನು ವಹಿಸಿಕೊಂಡು ಬಂದರೆ, ಇನ್ನೂ ಕೆಲವರು ದರ್ಶನ್ ಬಗ್ಗೆ ಟೀಕೆ ಮಾಡಿದ್ದಾರೆ. ಈಗ ದರ್ಶನ್ ಜೈಲೂಟದ ಬಗ್ಗೆ ದೂರು ನೀಡುತ್ತಿರುವ ಬಗ್ಗೆ ನಟ ಚೇತನ್ ಮಾತನಾಡಿ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಜೈಲೂಟು ನನಗೆ ಸಖತ್ ಇಷ್ಟ. ನನ್ನ ಬರ್ತ್ಡೇ ದಿನ ನಾನು ಜೈಲಿನಲ್ಲಿ ಇದ್ದೆ. ಆ ದಿನ ಪುಳಿಯೋಗರೆ ಕೊಟ್ಟಿದ್ದರು. ಆ ಪುಳಿಯೋಗರೆ ನನಗೆ ಸಖತ್ ಇಷ್ಟ. ನನಗೆ ಏನು ಕೊಟ್ಟರೂ ಅದನ್ನು ತಿನ್ನುತ್ತಿದ್ದೆ. ಹೀಗಾಗಿ, ಅಲ್ಲಿಯ ಊಟ ನನಗೆ ಸಮಸ್ಯೆ ಆಗಿಲ್ಲ. ಬೇರೆಯವರಿಗೆ ಕಷ್ಟ ಆದರೆ ಅದು ಅವರು ಅಭ್ಯಾಸ ಮಾಡಿಕೊಂಡಿದ್ದು’ ಎಂದಿದ್ದಾರೆ ಚೇತನ್. ಈ ಮೂಲಕ ಪರೋಕ್ಷವಾಗಿ ದರ್ಶನ್ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಮನೆ ಊಟಕ್ಕಾಗಿ ಜೈಲಧಿಕಾರಿಗಳಿಗೆ ದರ್ಶನ್ ಬರೆದಿದ್ದ ಪತ್ರದಲ್ಲಿ ಏನಿತ್ತು?
ದರ್ಶನ್ ಅವರನ್ನು ಚೇತನ್ ಭೇಟಿ ಮಾಡಿದ್ದು ಕೆಲವೇ ಕೆಲವು ಬಾರಿಯಂತೆ. ಈ ಬಗ್ಗೆ ಮಾತನಾಡಿರೋ ಅವರು, ‘ದರ್ಶನ್ ಅವರನ್ನು ಎರಡು ಮೂರು ಭೇಟಿ ಮಾಡಿದ್ದೆ ಅಷ್ಟೆ. ಅವರ ಬಗ್ಗೆ ನನಗೆ ಗೊತ್ತಾಗೋದು ಮಾಧ್ಯಮದವರಿಂದ. ನ್ಯಾಯಾಲಯದ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಈ ಪ್ರಕರಣದಲ್ಲಿ ಪೊಲೀಸರು ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಪ್ಪು ಮಾಡದೆ ಇದ್ದರೆ ಶಿಕ್ಷೆ ಆಗಬಾರದು’ ಎಂದಿದ್ದಾರೆ ಚೇತನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.