ಮನೆ ಊಟಕ್ಕಾಗಿ ಜೈಲಧಿಕಾರಿಗಳಿಗೆ ದರ್ಶನ್ ಬರೆದಿದ್ದ ಪತ್ರದಲ್ಲಿ ಏನಿತ್ತು?
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ತೂಗುದೀಪ ಮನೆ ಊಟ ಬೇಕೆಂದು ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾದ ಬೆನ್ನಲ್ಲೆ ಇದೀಗ ನಟ ದರ್ಶನ್ ಜೈಲಿನ ವೈದ್ಯಾಧಿಕಾರಿ ಹಾಗೂ ಜೈಲು ಮಹಾನಿರ್ದೇಶಕರಿಗೆ ಮನೆ ಊಟಕ್ಕಾಗಿ ಮನವಿ ಸಲ್ಲಿಸಿದ್ದ ಹಳೆಯ ಪತ್ರದ ಮಾಹಿತಿ ಬಹಿರಂಗಗೊಂಡಿದೆ.
ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲು ಊಟ ಸರಿ ಹೊಂದುತ್ತಿಲ್ಲ. ಈ ಹಿಂದೆ ಮನೆ ಊಟ ಹಾಗೂ ಹಾಸಿಗೆ ತರಿಸಿಕೊಳ್ಳಲು ಅನುಮತಿ ಕೋರಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯು ಹೈಕೋರ್ಟ್ನಿಂದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬಂದು ಅಲ್ಲಿ ವಜಾ ಆಗಿತ್ತು. ಆದರೆ ತಾಂತ್ರಿಕ ಕಾರಣ ನೀಡಿ ವಕೀಲರು ದರ್ಶನ್ರ ಅರ್ಜಿಯನ್ನು ಇತ್ತೀಚೆಗಷ್ಟೆ ಹಿಂಪಡೆದರು. ದರ್ಶನ್ ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಜೈಲು ಅಧಿಕಾರಿಗಳಿಗೆ ಬರೆದ ಪತ್ರದ ಈಗ ಹೊರಬಿದ್ದಿದೆ.
ಜೈಲು ವೈದ್ಯಾಧಿಕಾರಿ, ಕಾರಾಗೃಹ ಎಡಿಜಿಪಿಗೆ ಪತ್ರ ಬರೆದಿದ್ದ ನಟ ದರ್ಶನ್, ತಮಗೆ ಮನೆ ಊಟ ತರಿಸಿಕೊಳ್ಳಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಿದ್ದಾರೆ. ‘22/06/24 ರಂದು ಕೇಂದ್ರ ಕಾರಾಗೃಕಹಕ್ಕೆ ಬಂದಿದ್ದು ನಾನು ದಿನನಿತ್ಯ ನನ್ನ ಮನೆಯಲ್ಲಿದ್ದಾಗ ವ್ಯಾಯಾಮ ಮಾಡುತ್ತಿದ್ದೆ ಅದರ ಜೊತೆ ಪೌಷ್ಟಿಕ (ಪ್ರೋಟಿನ್ ) ಆಹಾರ ಸೇವಿಸುತ್ತಿದ್ದೆ ಮತ್ತು ದಿನನಿತ್ಯ ಪೌಷಷ್ಟಿಕ ಆಹಾರ ತಿನ್ನುತ್ತಿದೆ. ಕೇಂದ್ರ ಕಾರಾಗೃಹದಲ್ಲಿ ನನಗೆ ಬೇಕಾದ ಆಹಾರ ಕೊರತೆ ಇದ್ದು ನನ್ನ ದೇಹದ ತೂಕದಲ್ಲಿ ಸುಮಾರು ಹತ್ತು ಕೆ.ಜಿ ಯಷ್ಟು ಇಳಿದಿದ್ದೆ ಆದ ಕಾರಣ ದಯಮಾಡಿ ನನಗೆ ಮನೆ ಊಟದ ವಯವಸ್ಥೆ ಮಾಡಿಕೊಡಬೇಕಾಗಿ ತಮ್ಮಲ್ಲಿ ಕೋರಿ ಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ನಟ ದರ್ಶನ್. ಜೈಲು ವೈದ್ಯಾಧಿಕಾರಿಗಳು ಜಾಗೂ ಜೈಲು ಮಹಾ ನಿರ್ದೇಶಕರನ್ನು ಉದ್ದೇಶಿಸಿ ಈ ಪತ್ರವನ್ನು ಬರೆಯಲಾಗಿತ್ತು.
ಇದನ್ನೂ ಓದಿ:ಮನೆ ಊಟದ ವಿಚಾರ; ಮ್ಯಾಜಿಸ್ಟ್ರೇಟ್ ತೀರ್ಪು ಪ್ರಶ್ನಿಸಿ ಹೈಕೋರ್ಟ್ಗೆ ದರ್ಶನ್ ಮೇಲ್ಮನವಿ
ದರ್ಶನ್, ಜೈಲು ಸೇರಿದಾಗಿನಿಂದಲೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೊರಗೆ ಪೌಷ್ಟಿಕಾಂಶಯುಕ್ತ ಭೂರಿ ಭೋಜನ ಮಾಡುತ್ತಿದ್ದ ನಟ ದರ್ಶನ್ ಜೈಲಿನಲ್ಲಿ ಸಾಧಾರಣ ಊಟವನ್ನಷ್ಟೆ ಮಾಡುತ್ತಿದ್ದಾರೆ. ಹೊರಗೆ ಜಿಮ್ ಮಾಡಿಕೊಂಡು ಅದಕ್ಕೆ ತಕ್ಕಂತೆ ಊಟ ಮಾಡಿಕೊಂಡಿದ್ದ ದರ್ಶನ್, ಜೈಲು ಸೇರಿದ ಬಳಿಕ ಸುಮಾರು 10 ಕೆಜಿ ತೂಕ ಕಳೆದುಕೊಂಡಿದ್ದಾರೆ. ಜೈಲಿನ ಊಟಕ್ಕೆ ಹೊಂದಿಕೊಳ್ಳಲಾಗದೆ ವಾಂತಿ-ಭೇದಿ ಸಮಸ್ಯೆಯನ್ನೂ ಎದುರಿಸಿದರು. ಒಮ್ಮೆ ಜ್ವರವೂ ಸಹ ದರ್ಶನ್ ಅನ್ನು ಕಾಡಿತ್ತು. ಜೈಲಿಗೆ ಹೋಗುವ ಮುನ್ನ ಕೈ ಶಸ್ತ್ರ ಚಿಕಿತ್ಸೆಗೆ ದರ್ಶನ್ ಒಳಗಾಗಿದ್ದರು. ಜೈಲಿನಲ್ಲಿ ಮಲಗಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಮತ್ತೆ ಕೈ ನೋವು ಸಹ ದರ್ಶನ್ಗೆ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:12 pm, Tue, 30 July 24