
ನಟ ದರ್ಶನ್ (Darshan) ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ ಎಂದು ಕರೆಯಲಾಗುತ್ತದೆ. ವಿಲನ್ ಮಗನಾದರು ಯಾವುದೇ ಪ್ರಭಾವ ಇಲ್ಲದೆ, ತಮ್ಮನ್ನು ತಾವು ಸಾಬೀತು ಮಾಡಿಕೊಂಡರು. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. ಅವರು ಕೊಟ್ಟ ಹಿಟ್ಟ ಚಿತ್ರಗಳು ಒಂದರೆಡಲ್ಲ. ಸುಮಾರು 20 ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಇದರ ಜೊತೆಗೆ ನಿರ್ಮಾಪಕರಿಗೆ ಸಾಧಾರಣ ಲಾಭ ತಂದುಕೊಟ್ಟ ಸಿನಿಮಾಗಳೂ ಇವೆ. ಆ ಬಗ್ಗೆ ಇಲ್ಲಿದೆ ವಿವರ.
ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1997ರಲ್ಲಿ. ‘ಮಹಾಭಾರತ’ದಲ್ಲಿ ಅವರು ಮೊದಲ ಬಾರಿಗೆ ನಟಿಸಿದರು. ಆ ಬಳಿಕ ಶಿವರಾಜ್ಕುಮಾರ್ ಹಾಗೂ ಅಂಬರೀಷ್ ನಟನೆಯ ‘ದೇವರ ಮಗ’ ಸಿನಿಮಾ ಮಾಡಿದರು. 2002ರಲ್ಲಿ ಹೀರೋ ಆಗುವ ಅವಕಾಶ ಅವರಿಗೆ ಸಿಕ್ಕಿತು. ಪಿಎನ್ ಸತ್ಯ ನಿರ್ದೇಶನದ ‘ಮೆಜೆಸ್ಟಿಕ್’ ಸಿನಿಮಾದಲ್ಲಿ ಹೀರೋ ಆದರು. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಈ ಚಿತ್ರದ ಮೂಲಕ ದರ್ಶನ್ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದರು. ಈ ಸಿನಿಮಾ ಮೂಲಕವೇ ದರ್ಶನ್ಗೆ ದಾಸ ಎಂಬ ಹೆಸರು ಬಂತು.
ಅದರ ಮುಂದಿನ ವರ್ಷ ಅಂದರೆ 2002ರಲ್ಲಿ ದರ್ಶನ್ ‘ಕರಿಯ’ ಸಿನಿಮಾದಲ್ಲಿ ನಟಿಸಿದರು. ‘ಜೋಗಿ’ ಪ್ರೇಮ್ ನಿರ್ದೇಶನ ಮೊದಲ ಚಿತ್ರ ಇದಾಗಿತ್ತು. ಈ ಸಿನಿಮಾ ಕೂಡ ಬ್ಲಾಕ್ಬಸ್ಟರ್ ಆಯಿತು. ನಂತರ ಬಂದ ‘ನಮ್ಮ ಪ್ರೀತಿಯ ರಾಮು’ (2003) ಸಾಧಾರಣ ಎನಿಸಿಕೊಂಡರೂ, ನಟನೆಯಲ್ಲಿ ದರ್ಶನ್ ಭೇಷ್ ಎನಿಸಿಕೊಂಡರು. ತಮ್ಮಲ್ಲಿರುವ ಕಲಾವಿದನ ಈ ಚಿತ್ರದ ಮೂಲಕ ತೋರಿಸಿದ್ದರು ಅವರು.
ನಂತರ ‘ದಾಸ’ (2003) ಸಿನಿಮಾ ಮಾಡಿದರು, ಇದು ಹಿಟ್ ಆಯಿತು. ವಾಸು ನಿರ್ದೇಶನದ ‘ಭಗ್ವಾನ್’ ಯಶಸ್ಸು ಕಂಡಿತು. ಈ ಸಿನಿಮಾ ಬಂದಿದ್ದು 2004ರಲ್ಲಿ. ಅದೇ ವರ್ಷ ಬಂದ ‘ಕಲಾಸಿಪಾಳ್ಯ’ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು. ಓಂ ಪ್ರಕಾಶ್ ರಾವ್ ನಿರ್ದೇಶನ ಚಿತ್ರಕ್ಕಿತ್ತು. ಇದು ಹಲವು ಸಿನಿಮಾಗಳಿಂದ ಸ್ಫೂರ್ತಿ ಪಡೆದು ಮಾಡಿದ ಚಿತ್ರ ಎಂದು ನಿರ್ದೇಶಕರೇ ಒಪ್ಪಿಕೊಂಡಿದ್ದರು. ಆದಾಗ್ಯೂ ಜನರು ಚಿತ್ರವನ್ನು ಇಷ್ಟಪಟ್ಟರು.
‘ಅಯ್ಯ’(2005), ‘ಶಾಸ್ತ್ರಿ’ (2005), ‘ದತ್ತ’ (2006) ಹಿಟ್ ಸಾಲಿಗೆ ಸೇರಿದವು. 2008ರ ‘ಗಜ’ ಹಿಟ್ ಆಯಿತು. ದರ್ಶನ್ ಅವರು ಅಲ್ಲಿವರೆಗೆ ಹೀರೋ ಆಗಿ ಮಿಂಚುತ್ತಿದ್ದರು. ದಿನಕರ್ ನಿರ್ದೇಶನದ ‘ನವಗ್ರಹ’ (2008) ಚಿತ್ರದಲ್ಲಿ ನೆಗೆಟಿವ್ ಶೇಡ್ ಮಾಡಿ ಮೆಚ್ಚುಗೆ ಪಡೆದರು. ಮೈಸೂರು ದಸರಾ ಅಂಬಾರಿ ಕದಿಯೋ ಕಥೆಯುಳ್ಳ ಈ ಚಿತ್ರದ ಮೂಲಕ ದರ್ಶನ್ ಮತ್ತೆ ಯಶಸ್ಸನ್ನು ಸವಿದರು.
‘ಸಾರಥಿ’ (2011),‘ಬುಲ್ ಬುಲ್’ (2013), ‘ಬೃಂದಾವನ’ (2013) ಯಶಸ್ಸು ಕಂಡವು. 2017ರ ‘ಚೌಕ’ ಸಿನಿಮಾದಲ್ಲಿ ದರ್ಶನ್ ಮಾಡಿದ ಅತಿಥಿ ಪಾತ್ರ ಗಮನ ಸೆಳೆಯಿತು. ಸಿನಿಮಾ ಕೂಡ ಹಿಟ್ ಆಯಿತು. 2019ರ ‘ಯಜಮಾನ’ ಕೂಡ ಯಶಸ್ಸು ಕಂಡಿತು. ಅದೇ ವರ್ಷ ಬಂದ ಹಿಟ್ ಚಿತ್ರ ‘ಕುರಕ್ಷೇತ್ರ’ದಲ್ಲಿ ದರ್ಶನ್ ದುರ್ಯೋಧನನ ಪಾತ್ರ ಮಾಡಿದರು. 2021ರ ‘ರಾಬರ್ಟ್’ ಕೂಡ ಯಶಸ್ಸು ಕಂಡಿತು. ದರ್ಶನ್ ‘ಕಾಟೇರ’ ಚಿತ್ರವಂತೂ ದರ್ಶನ್ ಸಿನಿಮಾ ವೃತ್ತಿ ಜೀವನಕ್ಕೆ ಹೊಸ ಮೆರಗು ನೀಡಿದೆ.
ಇದನ್ನೂ ಓದಿ: ಮೊದಲ ದಿನ ‘ಡೆವಿಲ್’ ಸಿಡಿಲಬ್ಬರದ ಕಲೆಕ್ಷನ್; ದರ್ಶನ್ ಫ್ಯಾನ್ಸ್ ಫುಲ್ ಖುಷ್
ಈ ಕಾರಣದಿಂದಲೇ ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ ಎನ್ನುತ್ತಾರೆ. ಅವರ ಸಿನಿಮಾ ಮೇಲೆ ಹೂಡಿಕೆ ಮಾಡಿದರೆ ನಷ್ಟ ಆಗೋದಿಲ್ಲ ಎಂಬ ನಂಬಿಕೆ ನಿರ್ಮಾಪಕರದ್ದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.