ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ ಖ್ಯಾತಿ ವಿ. ಮನೋಹರ್ (V. Manohar) ಅವರಿಗೆ ಸಲ್ಲಿಕೆ ಆಗುತ್ತದೆ. ಅವರು ಸಂಗೀತ ಸಂಯೋಜನೆ ಮಾಡಿದ ಅನೇಕ ಹಾಡುಗಳು ಈಗಲೂ ಫೇಮಸ್. 1992ರಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಸಂಗೀತ ಸಂಯೋಜನೆ ಜೊತೆ ಕೆಲ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ಮನೋಹರ್ ಅವರು ಚಿತ್ರರಂಗದಲ್ಲಿ ಸ್ಟ್ಯಾಂಡ್ ಆಗೋಕೆ ನಟ ಜಗ್ಗೇಶ್ (Jaggesh) ಮುಖ್ಯ ಕಾರಣವಂತೆ. ಈ ವಿಚಾರವನ್ನು ಮನೋಹರ್ ಅವರು ಟಿವಿ9 ಕನ್ನಡ ನಡೆಸಿದ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘ತರ್ಲೆ ನನ್ಮಗ’ ಸಿನಿಮಾ ಮೂಲಕ ವಿ. ಮನೋಹರ್ ಅವರು ಸಂಗೀತ ಸಂಯೋಜಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇದು ಉಪೇಂದ್ರ ನಿರ್ದೇಶನದ ಮೊದಲ ಸಿನಿಮಾ. ಜಗ್ಗೇಶ್ ನಟನೆಯ ಈ ಸಿನಿಮಾ ಯಶಸ್ಸು ಕಂಡಿತು. ಈ ಚಿತ್ರದ ಹಾಡುಗಳು ಕೂಡ ಜನಪ್ರಿಯತೆ ಪಡೆದವು. ಈ ಚಿತ್ರದಿಂದ ಮನೋಹರ್ ವೃತ್ತಿಜೀವನಕ್ಕೆ ಭದ್ರ ಬುನಾದಿ ಸಿಕ್ಕಿತು.
‘ಉಪೇಂದ್ರ ಅವರು ‘ತರ್ಲೆ ನನ್ಮಗ’ ಸಿನಿಮಾದಲ್ಲಿ ಕೆಲಸ ಮಾಡೋಕೆ ರೆಡಿ ಆಗಿದ್ದರು. ಅವರ ನಿರ್ದೇಶನದ ಮೊದಲ ಸಿನಿಮಾ ಆಗಿದ್ದರಿಂದ ನಾನು ಜೊತೆಯಲ್ಲಿ ಇರುವಂತೆ ಹೇಳಿದರು. ನಾನು ಸಹಾಯಕನಾಗಿ ಕೆಲಸ ಮಾಡಿದೆ. 15 ದಿನ ಶೂಟಿಂಗ್ ಮುಗಿದು ಬ್ರೇಕ್ ತೆಗೆದುಕೊಂಡರು. ಎಸ್.ಎ.ರಾಜ್ಕುಮಾರ್ ಅವರು ಸಂಗೀತ ಸಂಯೋಜಕರಾಗಿದ್ದರು. ಆ ಸಮಯದಲ್ಲಿ ಅವರು ತುಂಬಾ ಫೇಮಸ್ ಆದರು. ಅವರು ಸಿಗಲ್ಲ ಎಂದಾಗ ನನಗೆ ಅವಕಾಶ ಸಿಕ್ತು. ನಾನು ಧೈರ್ಯ ತೆಗೆದುಕೊಂಡು ಮ್ಯೂಸಿಕ್ ಮಾಡಿದೆ’ ಎಂದಿದ್ದಾರೆ ಮನೋಹರ್.
‘ಡಂ ಡಂ ಡಗಾರ್ ಡಗಾರ್ ನಾನು ಮಾಡಿದ ಮೊದಲು ಟ್ಯೂನ್. ‘ಸಂಗೀತಾ ಕಲಿಸಿಕೊಡು ಸಂಗೀತಾ..’ ಎರಡನೇ ಹಾಡು. ಚಿತ್ರದ ಎಲ್ಲಾ ಹಾಡುಗಳು ಹಿಟ್ ಆದವು. ಈ ಚಿತ್ರದಲ್ಲಿ ಜಗ್ಗೇಶ್ ಒಂದು ಹಾಡನ್ನು ಹಾಡಿದರು. ಇದು ಅವರಿಗೂ ಸಾಕಷ್ಟು ಇಷ್ಟವಾಗಿತ್ತು’ ಎಂದಿದ್ದಾರೆ ಮನೋಹರ್.
ಜಗ್ಗೇಶ್ ಹಾಗೂ ವಿ. ಮನೋಹರ್ 22 ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿ.ಮನೋಹರ್, ‘ಜಗ್ಗೇಶ್ಗೆ ತರ್ಲೆ ನನ್ಮಗ ಚಿತ್ರದ ಹಾಡುಗಳು ಇಷ್ಟ ಆದವು. ಜಗ್ಗೇಶ್ ನನ್ನ ಪ್ರಮೋಟ್ ಮಾಡಿದರು. ಬಂದ ನಿರ್ಮಾಪಕರ ಬಳಿ ನಮ್ಮ ಮನೋಹರ್ ಹತ್ತಿರ ಮ್ಯೂಸಿಕ್ ಮಾಡ್ಸಿ, ಅವರು ಹೊಂದಿಕೆ ಆಗುತ್ತಾರೆ ಎನ್ನುತ್ತಿದ್ದರು. ಅವರ ಜೊತೆ 22 ಸಿನಿಮಾ ಮಾಡಿದೆ. ನಾನು ಚಿತ್ರರಂಗದಲ್ಲಿ ಸ್ಟ್ಯಾಂಡ್ ಆಗುವಂತೆ ಮಾಡಿದ್ದು ಜಗ್ಗೇಶ್’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:46 am, Sat, 25 February 23