AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jaggesh: ಹಳೆಯ ದಿನಗಳ ನೆನೆಯುತ್ತಾ ಪತ್ನಿಯೊಟ್ಟಿಗೆ ರಾಯರ ದರ್ಶನಕ್ಕೆ ತೆರಳಿದ ಜಗ್ಗೇಶ್

ಮಂತ್ರಾಲಯಕ್ಕೆ ಹೋಗುವ ಹಾದಿಯಲ್ಲಿ ಹಳೆಯ ದಿನಗಳ ಮೆಲುಕು ಹಾಕಿದ್ದಾರೆ ನಟ, ಸಂಸದ ಜಗ್ಗೇಶ್.

Jaggesh: ಹಳೆಯ ದಿನಗಳ ನೆನೆಯುತ್ತಾ ಪತ್ನಿಯೊಟ್ಟಿಗೆ ರಾಯರ ದರ್ಶನಕ್ಕೆ ತೆರಳಿದ ಜಗ್ಗೇಶ್
ಮಂತ್ರಾಲಯಕ್ಕೆ ಹೊರಟ ಜಗ್ಗೇಶ್ ಮತ್ತು ಪರಿಮಳ
ಮಂಜುನಾಥ ಸಿ.
|

Updated on: Feb 23, 2023 | 3:47 PM

Share

ಕಷ್ಟದ ದಿನಗಳನ್ನು ಕಂಡು, ಸತತ ಪರಿಶ್ರಮದಿಂದ ಎತ್ತರಕ್ಕೇರಿದ ನಟ, ಸಂಸದ ಜಗ್ಗೇಶ್ (Jaggesh) ತಮ್ಮ ಯಶಸ್ಸಿನ ಬಹುಪಾಲು ಶ್ರೇಯವನ್ನು ನೀಡುವುದು ಮಂತ್ರಾಲಯದ ರಾಘವೇಂದ್ರ (Mantralayam) ಸ್ವಾಮಿಗಳಿಗೆ. ಜಗ್ಗೇಶ್ ಜೀವನದಲ್ಲಿ ರಾಯರಿಗೆ ಬಹು ಎತ್ತರದ ಸ್ಥಾನವಿದೆ.

ರಾಯರನ್ನು ಬಹುವಾಗಿ ನಂಬುವ ಜಗ್ಗೇಶ್, ಆಗಾಗ್ಗೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಆಶೀರ್ವಾದ ಪಡೆಯುವುದುಂಟು. ಈಗ ಮತ್ತೆ ಜಗ್ಗೇಶ್, ಪತ್ನಿ ಪರಿಮಳ ಜೊತೆ ಮಂತ್ರಾಲಯಕ್ಕೆ ತೆರಳಿದ್ದು, ಮಂತ್ರಾಲಯಕ್ಕೆ ಹೋಗುವ ಹಾದಿಯಲ್ಲಿ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

“1984ರಲ್ಲಿ ಮಂತ್ರಾಲಯಕ್ಕೆ ಹೋಗಲು ಬಸ್ ಚಾರ್ಜ್ 120 ರುಪಾಯಿಯನ್ನು ಎಲ್ಲರ ಬಳಿ ಕಾಡಿಬೇಡಿ ಹೊಂದಿಸಿ ಹೋಗುತ್ತಿದ್ದೆವು. ಮಠದಲ್ಲಿ ಒಂದು ಹೊತ್ತು ಊಟ ಮಾಡಿ ಹುಬ್ಬಳ್ಳಿ ಧರ್ಮ ಛತ್ರದ ಬಾಗಿಲಲ್ಲಿ ಮಲಗಿ, ತುಂಗಾನದಿಯಲ್ಲಿ ಸ್ನಾನ ಮಾಡಿ ಮನಸೋ ಇಚ್ಛೆ ರಾಯರಿಗೆ ಉರುಳು ಸೇವೆ ಮಾಡಿ ನನ್ನ ಭಕ್ತಿ ಸಮರ್ಪಿಸಿ, ರಾಯರೇ ನಿಮ್ಮ ಒಬ್ಬರ ಬಿಟ್ಟರೆ ನನಗೆ ಯಾರೂ ಇಲ್ಲ ನನ್ನ ಬದುಕಿಗೆ ನೀವು ಆಸರೆಯಾಗಿ ಎಂದು ಮಗುವಂತೆ ಅಳುತ್ತಾ ಪ್ರಾರ್ಥಿಸುತ್ತಿದ್ದೆ ಎಂದು ಹಳೆಯ ನೆನಪನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಜಗ್ಗೇಶ್.

ಮುಂದುವರೆದು, ರಾಯರಿಗೆ ಏನು ಕಾರುಣ್ಯವೊ, ನನ್ನ ಮನಸ್ಸಿನಲ್ಲಿ ಇದ್ದ ಆಸೆಯಂತೆ ದಿಗಂತದಂಥ ಸಿನಿಮಾದಲ್ಲಿ ಬೆಳೆಯಲು, ಅಂದಿನ ಸಿನಿಮಾ ಮಹನೀಯರಿಗೆ ಮನಸ್ಸು ಕೊಟ್ಟು ಸಣ್ಣ-ಪುಟ್ಟ ಪಾತ್ರ ಸಿಕ್ಕು ಇಂದು ಇಷ್ಟು ದೂರ ತಂದು ನಿಲ್ಲಿಸಿದ್ದಾರೆ. ಇಂದು ಮಂತ್ರಾಲಯಕ್ಕೆ ಪ್ರಯಾಣ ಮಾಡುತ್ತ ನನ್ನ ಬದುಕಿನಲ್ಲಿ ನಡೆದ ರಾಯರ ವಿಸ್ಮಯ ಕಣ್ಣ ಮುಂದೆ ಹಾಡು ಹೋಯಿತು ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.

ರಾಯರನ್ನು ಅಪಾರವಾಗಿ ನಂಬುವ ಜಗ್ಗೇಶ್, ತಮ್ಮ ಬದುಕಿನಲ್ಲಿ ನಡೆದ ಹಲವು ಸಂಗತಿಗಳಿಗೆ ರಾಯರ ಕೃಪೆ ಹೇಗೆ ಕಾರಣವಾಗಿತ್ತೆಂದು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಜೊತೆಗೆ ಸಿನಿಮಾ ರಂಗದ ಬಗ್ಗೆಯೂ ಕೆಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಚಿತ್ರರಂಗ ಹಾಗೂ ರಾಜಕೀಯ ಎರಡರಲ್ಲೂ ಸಕ್ರಿಯರಾಗಿರುವ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ ಇನ್ನೂ ಕೆಲವು ಸಿನಿಮಾಗಳನ್ನು ಜಗ್ಗೇಶ್ ಒಪ್ಪಿಕೊಂಡಿದ್ದಾರೆ. ಜೊತೆಗೆ ರಾಜ್ಯಸಭಾ ಸದಸ್ಯರಾಗಿ, ಬಿಜೆಪಿ ರಾಜ್ಯ ಮುಖಂಡರಾಗಿ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ