Ranbir Kapoor: ಆ ಮೂರು ಸಿನಿಮಾಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದವು: ರಣಬೀರ್ ಕಪೂರ್
ನಟನಾಗಿ, ಪ್ರೇಕ್ಷಕನಾಗಿ ತಮ್ಮ ಮೇಲೆ ಪರಿಣಾಮ ಬೀರಿದ ಇತ್ತೀಚಿನ ಮೂರು ಸಿನಿಮಾಗಳನ್ನು ಬಾಲಿವುಡ್ ನಟ ರಣಬೀರ್ ಕಪೂರ್ ಹೆಸರಿಸಿದ್ದಾರೆ.
ಬ್ರಹ್ಮಾಸ್ತ್ರ (Brahmastra) ಸಿನಿಮಾದ ಗೆಲುವಿನಿಂದ ಥ್ರಿಲ್ ಆಗಿರುವ ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor), ತಮ್ಮ ಸಿನಿಮಾ ಆಯ್ಕೆಯ ವಿಧಾನಗಳನ್ನು ಬದಲಿಸಿಕೊಂಡಿರುವ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು. ಹಿಂದೆಲ್ಲ ರೊಮ್ಯಾಂಟಿಕ್, ಇಂಟೆಲಿಜೆಂಟ್, ನೈಜತೆ ಹತ್ತಿರವಿರುವಂಥಹಾ ಕತೆಗಳನ್ನು ಹೆಚ್ಚು ಆಯ್ದುಕೊಳ್ಳುತ್ತಿದ್ದ ರಣಬೀರ್ ಕಪೂರ್, ಇತ್ತೀಚೆಗೆ ಮಾಸ್ ಸಿನಿಮಾಗಳತ್ತ ಹೊರಳಿದ್ದಾರೆ.
ಸಿನಿಮಾ ಆಯ್ಕೆಯ ಬಗ್ಗೆ ಹಾಗೂ ಒಟ್ಟಾರೆ ಸಿನಿಮಾಗಳ ಬಗ್ಗೆ ರಣಬೀರ್ ಕಪೂರ್ ಅವರ ದೃಷ್ಟಿಕೋನ ಬದಲಾಗಲು ಇತ್ತೀಚೆಗೆ ಬಿಡುಗಡೆ ಆದ ಮೂರು ಸಿನಿಮಾಗಳು ಪ್ರಮುಖ ಕಾರಣವಂತೆ. ಈ ಬಗ್ಗೆ ಸ್ವತಃ ರಣಬೀರ್ ಕಪೂರ್ ಮಾತನಾಡಿದ್ದಾರೆ.
‘ತು ಜೂಟಿ ಮೇ ಮಕ್ಕಾರ್ ಹೆಸರಿನ ರೊಮ್ಯಾಂಟಿಕ್ ಕಾಮಿಡಿ ಸಿನಿಮಾದಲ್ಲಿ ನಟಿಸಿರುವ ರಣಬೀರ್ ಕಪೂರ್ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದು, ಇದೇ ಸಂದರ್ಭದಲ್ಲಿ ಸಿನಿಮಾದ ಬಗೆಗಿನ ತಮ್ಮ ದೃಷ್ಟಿಕೋನ ಬದಲಿಸಿದ ಮೂರು ಸಿನಿಮಾಗಳ ಬಗ್ಗೆ ಹೇಳಿದ್ದಾರೆ.
ಇತ್ತೀಚೆಗಿನ ಮೂರು ಸಿನಿಮಾಗಳು, ಪ್ರೇಕ್ಷಕನಾಗಿ ಹಾಗೂ ನಟನಾಗಿ ನನ್ನ ಮೇಲೆ ಪರಿಣಾಮ ಬೀರಿದವು. ಅವುಗಳೆಂದರೆ ಅಲ್ಲು ಅರ್ಜುನ್ ನಟನೆಯ ಪುಷ್ಪ, ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಠಿಯಾವಾಡಿ ಹಾಗೂ ಆರ್ಆರ್ಆರ್ ಎಂದಿದ್ದಾರೆ ರಣಬೀರ್. ಈ ರೀತಿಯ ಸಿನಿಮಾಗಳು, ಪಾತ್ರಗಳು ನನಗೆ ಸಿಕ್ಕರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡಿದ್ದರಂತೆ ರಣಬೀರ್.
ಇದೀಗ ತು ಜೂಟಿ ಮೇ ಮಕ್ಕಾರ್ ಸಿನಿಮಾದಲ್ಲಿ ನಟಿಸಿರುವ ರಣಬೀರ್ ಕಪೂರ್ ಆ ಬಳಿಕ ಮತ್ತೊಂದು ಪಕ್ಕಾ ಮಾಸ್ ಕಮರ್ಶಿಯಲ್ ಸಿನಿಮಾ ಅನಿಮಲ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಆ ಬಳಿಕ ಬ್ರಹ್ಮಾಸ್ತ್ರ ಸಿನಿಮಾದ ಮುಂದಿನ ಭಾಗ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಕೆಜಿಎಫ್ 2, ಪುಷ್ಪ, ಆರ್ಆರ್ಆರ್ ನಂಥಹಾ ಸಿನಿಮಾಗಳು ದೊಡ್ಡ ಹಿಟ್ ಆಗುತ್ತಿದ್ದಂತೆ, ಬಾಲಿವುಡ್ ಮಂದಿಯೂ ಸಹ ಕಮರ್ಶಿಯಲ್, ಮಾಸ್ ಮಸಾಲಾ ಸಿನಿಮಾಗಳ ಕಡೆ ತಿರುಗಿದ್ದಾರೆ. ರಣಬೀರ್ ಕಪೂರ್ ಮಾತ್ರವೇ ಅಲ್ಲದೆ, ಝೀರೋ, ಜಿಂದಗಿ ನಾ ಮಿಲೇಗಿ ದುಬಾರಾ ದಂತಹಾ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದ ಶಾರುಖ್ ಖಾನ್ ಸಹ ಜವಾನ್ ರೀತಿಯ ಕಮರ್ಶಿಯಲ್ ಸಿನಿಮಾಗಳ ಮೊರೆ ಹೋಗಿದ್ದಾರೆ. ಅಕ್ಷಯ್ ಕುಮಾರ್ ಸಹ ಇದೇ ಹಾದಿಯಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ