ಗೋಶಾಲೆಗಳಿಗೆ 51 ಲಕ್ಷ ರೂ. ದೇಣಿಗೆ ನೀಡಿದ ನಟ, ನಿರ್ಮಾಪಕ ಮಹೇಂದ್ರ ಮುನ್ನೋತ್

|

Updated on: Jun 26, 2024 | 9:45 PM

ಕನಕಪುರ ರಸ್ತೆಯ ದಿಣ್ಣೆಪಾಳ್ಯದಲ್ಲಿ ಇರುವ ಅಮೃತಧಾರಾ ಗೋಶಾಲೆಯಲ್ಲಿ 20ಕ್ಕೂ ಹೆಚ್ಚು ಗೋಶಾಲೆಯ ಮುಖ್ಯಸ್ಥರನ್ನು ಕರೆದು ಅವರಿಗೆ ಚೆಕ್‌ ರೂಪದಲ್ಲಿ ಆರ್ಧಿಕ ನೆರವು ನೀಡಲಾಗಿದೆ. ಮಹೇಂದ್ರ ಪತ್ನಿ ಸುರಕ್ಷಾ ಜೊತೆ ಇಡೀ ಕುಟುಂಬದವರು ಈ ಸಂದರ್ಭದಲ್ಲಿ ಹಾಜರಿದ್ದರು. ‘ವೃಕ್ಷಾರೋಹಣ’ ಮೂಲಕ ಗೋಶಾಲೆಗಳಲ್ಲಿ ನೂರಕ್ಕೂ ಅಧಿಕ ಸಸಿಗಳನ್ನು ನೆಡುವುದರೊಂದಿಗೆ ಗೋಪೂಜೆ ಮಾಡಲಾಯಿತು.

ಗೋಶಾಲೆಗಳಿಗೆ 51 ಲಕ್ಷ ರೂ. ದೇಣಿಗೆ ನೀಡಿದ ನಟ, ನಿರ್ಮಾಪಕ ಮಹೇಂದ್ರ ಮುನ್ನೋತ್
ಗೋ ಶಾಲೆಗಳಿಗೆ 51 ಲಕ್ಷ ರೂಪಾಯಿ ದೇಣಿಗೆ ನೀಡಿದ ಮಹೇಂದ್ರ ಮುನ್ನೋತ್
Follow us on

ಸಾಮಾಜಿಕ ಕಾರ್ಯಗಳ ಜೊತೆಗೆ ಚಿತ್ರರಂಗದಲ್ಲೂ ಮಹೇಂದ್ರ ಮುನ್ನೋತ್ ಅವರು ಗುರುಸಿಕೊಂಡಿದ್ದಾರೆ. ಒಂದೆಡೆ ಸಾಮಾಜಿಕ ಕಳಕಳಿಯ ಸಿನಿಮಾಗಳನ್ನು ಮಾಡುತ್ತ, ಇನ್ನೊಂದೆಡೆ ದೇಣಿಗೆಗಳನ್ನು ನೀಡುತ್ತ ಅವರು ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವ್ಯಾಪಾರ ವಹಿವಾಟಿನಿಂದ ಬಂದ ಬಹುಪಾಲು ಹಣವನ್ನು ಗೋವುಗಳ ರಕ್ಷಣೆಗೆ ಅವರು ನೀಡುತ್ತಾರೆ. ಆ ಮೂಲಕ ಅವರ ಕುಟುಂಬವು ಗೋವುಗಳ ಪಾಲನೆಗಾಗಿ ಶ್ರಮಿಸುತ್ತಿದೆ. ಈ ವರ್ಷ ಕೂಡ ಅವರು ಗಮನಾರ್ಹ ದೇಣಿಗೆ ನೀಡಿದ್ದಾರೆ.

ನಟನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ಮಹೇಂದ್ರ ಮುನ್ನೋತ್​ ಕಳೆದ 14 ವರ್ಷಗಳಿಂದ ಗೋಶಾಲೆಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡುತ್ತಾ ಬಂದಿದ್ದಾರೆ. ಈ ವರ್ಷ ಕೂಡ ಅವರು ನಾಡಿನ ವಿವಿಧ ಗೋಶಾಲೆಗಳಿಗೆ 51 ಲಕ್ಷ ರೂಪಾಯಿ ದಾನ ಮಾಡಿದ್ದಾರೆ ಎಂಬುದು ವಿಶೇಷ. ವಿವಿಧ ಗೋಶಾಲೆಗಳ ಅಗತ್ಯಕ್ಕೆ ತಕ್ಕಂತೆ ಹಣವನ್ನು ಒದಗಿಸಿದ್ದಾರೆ.

ಹಲವು ಕಡೆಗಳಲ್ಲಿ ಅಕ್ರಮವಾಗಿ ಸಾಗಿಸಲ್ಪಡುವ ಗೋವುಗಳನ್ನು ಕಾನೂನಾತ್ಮಕವಾಗಿ ರಕ್ಷಿಸಿದ ಬಳಿಕ ಅಂತಹ ಗೋವುಗಳನ್ನು ಈ ಗೋಶಾಲೆಗಳಿಗೆ ತರಲಾಗುತ್ತದೆ. ಆ ಗೋವುಗಳನ್ನು ಸಾಕಲು ಗೋಶಾಲೆಗಳಿಗೆ ಹಣ ಬೇಕಾಗುತ್ತದೆ. ಹಾಗಾಗಿ ಗೋಶಾಲೆಗಳಿಗೆ ಆರ್ಥಿಕ ಸಹಾಯ ಮಾಡುವ ಕೆಲಸವನ್ನು ಮಹೇಂದ್ರ ಮುನ್ನೋತ್‌ ಮಾಡುತ್ತಿದ್ದಾರೆ. ಮಾತಾಪಿತೃಗಳ ಪುಣ್ಯಸ್ಮರಣೆಯ ಸಲುವಾಗಿ ಅವರು ಕುಟುಂಬ ಈ ಕಾರ್ಯ ಮಾಡುತ್ತಿದೆ.

ಇದನ್ನೂ ಓದಿ: ಮಧ್ಯಪ್ರದೇಶ: ಫ್ರಿಡ್ಜ್​ಗಳಲ್ಲಿ ಗೋಮಾಂಸ ಪತ್ತೆ, 11 ಮನೆಗಳ ನೆಲಸಮ, 150 ಗೋವುಗಳ ರಕ್ಷಣೆ

ತಮ್ಮ ಈ ಕೆಲಸವನ್ನು ಉದ್ದೇಶಿಸಿ ಮಹೇಂದ್ರ ಮನ್ನೋತ್‌ ಅವರು ಮಾತನಾಡಿದರು. ‘ನಾವು ತಂದೆ-ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಜೀವನವಿಡೀ ಪಂಚಾಮೃತ ನೀಡುವ ಗೋಮಾತೆಯ ಋಣವನ್ನು ಖಂಡಿತಾವಾಗಿಯೂ ತೀರಿಸಬಹುದು. ಗೋವು ಎಂಬುದು ಸನಾತನ ಪರಂಪರೆಯ ದೈವೀಮೂರ್ತಿ. ಅಷ್ಟೇ ಅಲ್ಲದೇ ಒಂದು ಅರ್ಥದಲ್ಲಿ ಪಾಪನಾಶಿನಿ ಕೂಡ ಹೌದು. ಭಾರತೀಯ ಕೃಷಿ ಪರಂಪರೆಯಲ್ಲಿ ದೊಡ್ಡ ಪಾತ್ರ ವಹಿಸಿದೆ. ಅನ್ನದಾತರ ಜೀವಬಂಧುವಾಗಿದೆ. ಆದ್ದರಿಂದ ಗೋವುಗಳನ್ನು ರಕ್ಷಿಸಿದರೆ ಕೇವಲ ಗ್ರಾಮ ಮಾತ್ರವಲ್ಲದೇ ಇಡೀ ದೇಶ ಕೂಡ ಸಮೃದ್ಧಿ ಆಗುತ್ತದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.