‘ಪ್ರೇಮದ ಊರಲಿ’ ಸಿನಿಮಾ ಗೆಲುವಿನ ಬಗ್ಗೆ ನಟ ಶ್ರೀ ರಾಮ್ ಮಾತು
ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿರುವ 'ಪ್ರೇಮದ ಊರಲಿ' ಚಿತ್ರದ ಯಶಸ್ಸಿನ ಬಗ್ಗೆ ನಟ ಶ್ರೀರಾಮ್ ಟಿವಿ9 ಜೊತೆ ಮಾತನಾಡಿದ್ದಾರೆ. ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡುವ ಚಿತ್ರವೇ ನಿಜವಾದ ದೊಡ್ಡ ಸಿನಿಮಾ ಮತ್ತು ಸ್ಮಾರ್ಟ್ ಪ್ರಚಾರವೇ ಈ ಗೆಲುವಿಗೆ ಕಾರಣ ಎಂದು ಅವರು ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು
- ಬಾಕ್ಸ್ ಆಫೀಸ್‌ನಲ್ಲಿ 'ಪ್ರೇಮದ ಊರಲಿ' ಕಮಾಲ್
- ಸಿನಿಮಾ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ನಟ ಶ್ರೀರಾಮ್
- ಪ್ರಾಮಾಣಿಕತೆಯಿಂದ ಮಾಡುವ ಚಿತ್ರವೇ ದೊಡ್ಡ ಸಿನಿಮಾ
ಪ್ರೇಕ್ಷಕರು ಒಳ್ಳೆಯ ಸಿನಿಮಾಗಳನ್ನು ಗೆಲ್ಲಿಸುತ್ತಿಲ್ಲ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇತ್ತು. ಆದರೆ, ಅದು ಸುಳ್ಳು ಎಂಬುದನ್ನು ‘ಪ್ರೇಮದ ಊರಲಿ’ ಸಿನಿಮಾ ಸಾಬೀತು ಮಾಡಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಕಡಿಮೆ ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಹಲವು ಕಡೆ ಹೌಸ್ಫುಲ್ ಬೋರ್ಡ್ಗಳು ಬಿದ್ದಿವೆ. ಈ ಚಿತ್ರದ ಯಶಸ್ಸಿನ ಬಗ್ಗೆ ನಟ ಶ್ರೀ ರಾಮ್ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.
ಒಳ್ಳೆಯ ಸಿನಿಮಾ ದೊಡ್ಡ
ಹೆಚ್ಚು ಬಜೆಟ್ ಹಾಕಿದರೆ ಅದು ದೊಡ್ಡ ಸಿನಿಮಾ, ಕಡಿಮೆ ಬಜೆಟ್ ಹಾಕಿದರೆ ಅದು ಸಣ್ಣ ಸಿನಿಮಾ ಎಂಬ ಪರಿಕಲ್ಪನೆ ಎಲ್ಲ ಕಡೆಗಳಲ್ಲೂ ಇದೆ. ಆದರೆ, ಇದನ್ನು ಶ್ರೀ ರಾಮ್ ಒಪ್ಪೋದಿಲ್ಲ. ಅವರು ಸಿನಿಮಾನ ನೋಡುವ ದೃಷ್ಟಿಯೇ ಬೇರೆ. ‘ಪ್ರಾಮಾಣಿಕತೆಯಿಂದ, ಪ್ರೀತಿಯಿಂದ ಶ್ರದ್ಧೆಯಿಂದ ಸಿನಿಮಾ ಮಾಡಿದ್ದೇವೆ. ಹೆಚ್ಚು ಪ್ರಾಮಾಣಿಕತೆಯಿಂದ ಮಾಡುವ ಸಿನಿಮಾನೇ ದೊಡ್ಡ ಸಿನಿಮಾ. ಎಲ್ಲ ಡಿಪಾರ್ಟ್ಮೆಂಟ್ನವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಎಲ್ಲಾ ವಿಭಾಗದಲ್ಲೂ ನಾವು ಗೆದ್ದಿದ್ದೇವೆ. ಹೀಗಾಗಿ, ಇದು ದೊಡ್ಡ ಸಿನಿಮಾ’ ಎನ್ನುತ್ತಾರೆ ಅವರು.
ಸ್ಮಾರ್ಟ್ ಪ್ರಚಾರ
‘ಪ್ರೇಮದ ಊರಲಿ’ ಸಿನಿಮಾಗೆ ಸಾಕಷ್ಟು ಪ್ಲಸ್ ಪಾಯಿಂಟ್ ಆಗಿದ್ದು ಎಂದರೆ ಸಿನಿಮಾದ ಪ್ರಚಾರ. ತಂಡದವರು ಸಿನಿಮಾ ಮಾಡಲು ಎಷ್ಟು ಪ್ರಮುಖ್ಯತೆ ನೀಡಿದ್ದರೋ , ಪ್ರಚಾರಕ್ಕೂ ಅಷ್ಟೇ ಆದ್ಯತೆ ನೀಡಲಾಗಿತ್ತು. ಈ ಬಗ್ಗೆ ಅವರು ಮಾತನಾಡಿದ್ದರೆ. ‘ಹೋಟೆಲ್ ಹೋದಾಗ ಫುಲ್ ಮೀಲ್ಸ್ ಸಿಗುತ್ತದೆ, ಸೈಡ್ಸ್ ಕೂಡ ಸಿಗುತ್ತದೆ. ಎರಡೂ ಹೊಟ್ಟೆಯನ್ನೇ ತುಂಬುತ್ತೆ. ನಮ್ಮ ದೇಹಕ್ಕೆ ಯಾವುದು ಒಳ್ಳೆಯದು ಎಂಬುದನ್ನು ಯೋಚಿಸಿ ನಾವೇ ಆಯ್ಕೆ ಮಾಡಿಕೊಳ್ಳಬೇಕು. ನಮ್ಮ ಸಿನಿಮಾಗೆ ಯಾವ ರೀತಿಯ ಪ್ರಚಾರ ಬೇಕು ಎಂಬುದನ್ನು ಯೋಚಿಸಿ ಆ ರೀತಿಯ ಪ್ರಚಾರ ಮಾಡಿದ್ದೇವೆ. ಎಲ್ಲಾ ಸಿನಿಮಾಗೂ ಇದೇ ರೀತಿಯ ಪ್ರಚಾರ ಅಸಾಧ್ಯ’ ಎಂಬುದು ಶ್ರೀ ರಾಮ್ ಮಾತು.
‘ನಾವು ನಮ್ಮ ಕೈಲಾದಷ್ಟು ಜನರ ಬಳಿ ತೆರೆಳಿ ಬನ್ನಿ, ನಮ್ಮ ಸಿನಿಮಾ ನೋಡಿ ಎಂದು ಆಶೀರ್ವದಿಸುವಂತೆ ಕೋರಿದ್ದೇವೆ. ಜನರು ಬಂದು ಹಾರೈಸಿದ್ದಾರೆ’ ಎಂದು ಪ್ರೇಮದ ಊರಲಿ ಸಿನಿಮಾ ಗೆಲುವಿನ ಬಗ್ಗೆ ಸಂತಸ ಹೊರಹಾಕಿದ್ದಾರೆ.
ಇದನ್ನೂ ಓದಿ: ಪ್ರೇಮದ ಕಥೆಗೆ ಪ್ರೇಕ್ಷಕರು ಫಿದಾ: ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದ ಪ್ರೇಮದ ಊರಲಿ ಸಿನಿಮಾ
ಕನ್ನಡ ಚಿತ್ರರಂಗದ ಗೆಲುವು
‘ಪ್ರೇಮದ ಊರಲಿ ಸಿನಿಮಾ ನೋಡಲು ಸಾಕಷ್ಟು ಜನರು ಬರುತ್ತಿದ್ದಾರೆ. ಇದು ಕನ್ನಡ ಚಿತ್ರರಂಗದ ಗೆಲುವು, ಕನ್ನಡ ಜನತೆಯ ಗೆಲುವು. ಸಿನಿಮಾ ಚೆನ್ನಾಗಿದೆ ಎಂದು ಎಲ್ಲರೂ ರೆಫರ್ ಮಾಡುತ್ತಿದ್ದಾರೆ. ಮೂರ್ನಾಲ್ಕು ಬಾರಿ ಜನರು ಸಿನಿಮಾ ನೋಡುತ್ತಿದ್ದಾರೆ. ಹೈದರಾಬಾದ್ನಲ್ಲಿಯೂ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದರು’ ಎಂದಿದ್ದಾರೆ ಶ್ರೀ ರಾಮ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




