ನಿರ್ಮಾಪಕಿಯಾದ ನಟಿ ಮೈತ್ರಿಯಾ ಗೌಡ; ಹೊಸಬರಿಗೆ ಅವಕಾಶ ನೀಡಲು ಟ್ರಸ್ಟ್ ಸ್ಥಾಪನೆ

ನಿರ್ಮಾಪಕಿ ಆಗಿರುವ ನಟಿ ಮೈತ್ರಿಯಾ ಗೌಡ ಅವರು ಈಗಾಗಲೇ ಎರಡು ಕಥೆಗಳನ್ನು ಕೇಳಿದ್ದಾರೆ. ಹೊಸ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಅವರು ತಿಳಿಸಿದ್ದಾರೆ. ಅವರು ಸ್ಥಾಪಿಸಿರುವ ಹೊಸ ಟ್ರಸ್ಟ್ ಉದ್ಘಾಟನೆಗೆ ಚಿತ್ರರಂಗದ ಗಣ್ಯರು ಸಾಕ್ಷಿಯಾದರು.

ನಿರ್ಮಾಪಕಿಯಾದ ನಟಿ ಮೈತ್ರಿಯಾ ಗೌಡ; ಹೊಸಬರಿಗೆ ಅವಕಾಶ ನೀಡಲು ಟ್ರಸ್ಟ್ ಸ್ಥಾಪನೆ
Maithriya Global Trust Launch

Updated on: May 21, 2026 | 9:24 PM

ನಟಿ ಮೈತ್ರಿಯಾ ಗೌಡ ಅವರು ಹಲವು ವರ್ಷಗಳ ಹಿಂದೆಯೇ ಕನ್ನಡ ಚಿತ್ರರಂಗಕ್ಕೆ (Kannada Film Industry) ಕಾಲಿಟ್ಟಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ. ಈಗ ಮತ್ತೆ ಅವರು ಸಕ್ರಿಯವಾಗಿದ್ದಾರೆ. ಬಣ್ಣದ ಲೋಕಕ್ಕೆ ಒಮ್ಮೆ ಬಂದರೆ ಅದರಿಂದ ಹೊರಬರವುದು ಅಷ್ಟು ಸುಲಭವಾಗಿರುವುದಿಲ್ಲ ಎಂಬ ಮಾತಿಗೆ ಮೈತ್ರಿಯಾ ಗೌಡ ಅವರೇ ಸಾಕ್ಷಿ. ನಟನೆಯಿಂದ ಅವರು ಅಂತರ ಕಾಯ್ದುಕೊಂಡಿದ್ದರೂ ಕೂಡ ಚಿತ್ರರಂಗದ ನಂಟು ಬಿಟ್ಟಿಲ್ಲ. ಈಗ ಮೈತ್ರಿಯಾ ಗೌಡ (Maithriya Gowda) ಅವರು ನಿರ್ಮಾಪಕಿ ಆಗಿದ್ದಾರೆ.

ಇದೇ ಕ್ಷೇತ್ರದಲ್ಲಿ ಏನಾದರೂ ಒಂದು ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂಬ ಹಂಬಲ ಮೈತ್ರಿಯಾ ಗೌಡ ಅವರಿಗೆ ಇದೆ. 2004ರಲ್ಲಿ ತೆರೆಕಂಡ ‘ಮೌರ್ಯ’ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ತಂಗಿಯಾಗಿ ಮೈತ್ರಿಯಾ ಗೌಡ ಅವರು ಪರಿಚಯಗೊಂಡಿದ್ದರು. ನಂತರ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ಅವರು ನಟಿಸಿದ್ದರು. ಕಾರಣಾಂತರದಿಂದ ಅಭಿನಯಕ್ಕೆ ಬ್ರೇಕ್ ನೀಡಿದ್ದರು.

ಅಭಿನಯದಿಂದ ಅಂತರ ಕಾಯ್ದುಕೊಂಡಿದ್ದ ಮೈತ್ರಿಯಾ ಗೌಡ ಅವರು ಈಗ ಸಮಾಜ ಸೇವೆಯ ಕಡೆ ಗಮನ ಹರಿಸಿದ್ದರು. ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಶುರು ಮಾಡಿದ್ದಾರೆ. ಇದರ ಮೂಲಕ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇದರ ಮೊದಲ ಹಂತವಾಗಿ ಚಿತ್ರರಂಗದ ಹಲವರ ಸಮ್ಮುಖದಲ್ಲಿ ‘ಮೈತ್ರಿಯಾ ಗ್ಲೋಬಲ್ ಟ್ರಸ್ಟ್’ ಉದ್ಘಾಟನೆ ಆಗಿದೆ.

ಖ್ಯಾತ ನಟ ಅನಿರುದ್ಧ್ ಜತ್ಕರ್, ಹಿರಿಯ ನಿರ್ಮಾಪಕ ಉದಯ್‌ ಮೆಹ್ತಾ, ವಿಧಾನ ಪರಿಷತ್ ಸದಸ್ಯ ಶರವಣ, ನಟರಾದ ಯಶಸ್‌ ಸೂರ್ಯ, ರವಿಚೇತನ್ ಮುಂತಾದವರು ಆಗಮಿಸಿ ಟ್ರಸ್ಟ್ ಉದ್ಘಾಟನೆ ಮಾಡಿದರು. ಅಲ್ಲದೇ ಮೈತ್ರಿಯಾ ಗೌಡ ಅವರಿಗೆ ಶುಭ ಹಾರೈಸಿದರು. ಇತ್ತೀಚೆಗೆ ಮೈತ್ರಿಯಾ ಗೌಡ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಆ ಟ್ರಸ್ಟ್ ಉದ್ಘಾಟನೆ ಆಗಿರುವುದು ಅವರಿಗೆ ಖುಷಿ ನೀಡಿದೆ.

ಇದನ್ನೂ ಓದಿ: ಅಸಭ್ಯವಾಗಿ ನಟಿಯರ ಫೋಟೋ, ವಿಡಿಯೋ ತೆಗೆದಿದ್ದಕ್ಕೆ ಕನ್ನಡ ಚಿತ್ರರಂಗ ಗರಂ

ಈ ವೇಳೆ ಮೈತ್ರಿಯಾ ಗೌಡ ಅವರು ಮಾತನಾಡಿದರು. ‘ಚಿಕ್ಕವಳಿದ್ದಾಗ ಮುಂದೆ ಏನಾಗುತ್ತೀಯಾ ಅಂತ ಯಾರಾದರೂ ಕೇಳಿದರೆ ನಾನು ನಟಿಯಾಗಬೇಕು, ಸಮಾಜಸೇವೆ ಮಾಡಬೇಕೆಂದು ಹೇಳುತ್ತಿದ್ದೆ. ನಾಯಕಿಯಾದ ಸಮಯದಲ್ಲಿ ಅನಿರುದ್ದ್ ಮಾಡುತ್ತಿದ್ದ ಸೇವೆಗಳು, ಉದಯ್‌ ಮೆಹ್ತಾ ಕಾರ್ಯವೈಖರಿ ನೋಡಿದೆ. ಇವರಿಬ್ಬರ ಪ್ರೇರಣೆಯಿಂದ ಟ್ರಸ್ಟ್ ಶುರು ಮಾಡಿದ್ದೇನೆ. ಇದರ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗುವುದು. ಅನಾಥಾಶ್ರಮ, ಗೋಶಾಲೆ, ವೃದ್ಧಾಶ್ರಮ, ಬೀದಿ ನಾಯಿಗಳ ರಕ್ಷಣೆ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us