‘ಗೆಳತಿ ಗಾಯತ್ರಿ’ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಕೃತಿಕಾ, ನಾಗಾರ್ಜುನ
ವೈಷ್ಣವಿ ಗೌಡ, ಕೃತಿಕಾ, ನಾಗಾರ್ಜುನ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಗೆಳತಿ ಗಾಯತ್ರಿ’ ಧಾರಾವಾಹಿ ‘ಸನ್ ಉದಯ’ ವಾಹಿನಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ‘ಶ್ರೀ ಜೈ ಮಾತಾ ಕಂಬೈನ್ಸ್’ ಮೂಲಕ ಈ ಧಾರಾವಾಹಿ ನಿರ್ಮಾಣ ಆಗುತ್ತಿದೆ. ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಪ್ರಸಾರವಾಗಲಿದೆ.

ಈಗಾಗಲೇ ಕೆಲವು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳ ಮೂಲಕ ಅಭಿಮಾನಿಗಳ ಮನಗೆದ್ದ ನಟಿ ವೈಷ್ಣವಿ ಗೌಡ ಅವರು ಈಗ ಹೊಸ ಸೀರಿಯಲ್ ಒಪ್ಪಿಕೊಂಡಿದ್ದಾರೆ. ‘ಗೆಳತಿ ಗಾಯತ್ರಿ’ (Gelathi Gayathri) ಎಂಬುದು ಈ ಸೀರಿಯಲ್ ಶೀರ್ಷಿಕೆ. ವೈವಿಧ್ಯಮಯ ಕಥಾಹಂದರಗಳ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ‘ಸನ್ ಉದಯ’ (Sun Udaya) ವಾಹಿನಿ ಇತ್ತೀಚೆಗಷ್ಟೇ ‘ಭಾಗ್ಯವಂತರು’ ಧಾರಾವಾಹಿ ಯಶಸ್ಸಿನ ಬಳಿಕ ಈ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ‘ಗೆಳತಿ ಗಾಯತ್ರಿ’ ಸೀರಿಯಲ್ ಕಥೆ ಭಿನ್ನವಾಗಿದೆ ಎಂದು ವಾಹಿನಿ ಹೇಳಿದೆ. ವೈಷ್ಣವಿ ಗೌಡ (Vaishnavi Gowda) ಜೊತೆ ಕೃತಿಕಾ ಮತ್ತು ನಾಗಾರ್ಜುನ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ.
ಸ್ನೇಹದ ನಿಜವಾದ ಅರ್ಥ ಏನು ಎಂಬುದನ್ನು ‘ಗೆಳತಿ ಗಾಯತ್ರಿ’ ಸೀರಿಯಲ್ ತೋರಿಸಲಿದೆ. ಗೆಳೆತನದ ಬಾಂಧವ್ಯ ಮತ್ತು ಅದರ ಮಹತ್ವವನ್ನು ಹೃದಯಸ್ಪರ್ಶಿಯಾಗಿ ಬಿಂಬಿಸುವ ಈ ಧಾರಾವಾಹಿ ಆಗಸ್ಟ್ 17ರಿಂದ ಸೋಮವಾರದಿಂದ ಶನಿವಾರ ಸಂಜೆ 7ಕ್ಕೆ ಪ್ರಸಾರವಾಗಲಿದೆ. ಧಾರಾವಾಹಿಯ ಶೀರ್ಷಿಕೆಯೇ ಸೂಚಿಸುವಂತೆ ಇದು ಇಬ್ಬರು ಆತ್ಮೀಯ ಗೆಳತಿಯರ ಭಾವನಾತ್ಮಕ ಪಯಣದ ಕಥೆ ಆಗಿರಲಿದೆ.
‘ಗೆಳತಿ ಗಾಯತ್ರಿ’ ಸೀರಿಯಲ್ ಕಥೆ:
ಬಾಲ್ಯದಲ್ಲಿ ಪಾರ್ವತಿಗೆ ಸಿಕ್ಕ ಮೊದಲ ಸ್ನೇಹಿತೆಯೇ ಗಾಯತ್ರಿ. ಕೈತುತ್ತಿನಿಂದ ಕನವರಿಕೆಯವರೆಗೆ ಜೊತೆಗೆ ಆಡಿ ನಲಿದ ಈ ಸ್ನೇಹಿತೆಯರು ಕಾಲ ಸರಿದಂತೆ ಕಾರಣಾಂತರದಿಂದ ದೂರವಾಗುತ್ತಾರೆ. ಪಾರ್ವತಿಗೆ ಗಾಯತ್ರಿ ನೆನಪು ಆಗಾಗ ಕಾಡುತ್ತದೆ. ಶ್ರೀಮಂತ ಕುಟುಂಬದಲ್ಲಿ ಸುಖಸಂಸಾರ ನಡೆಸುತ್ತಿರುವ ಪಾರ್ವತಿಗೆ ಪ್ರೀತಿಯ ಪತಿ, ಮುದ್ದಾದ ಮಗಳು ಎಲ್ಲವೂ ಇದ್ದರೂ, ಗಾಯತ್ರಿಯನ್ನು ಕಾಣುವ ಹಂಬಲ ಕಡಿಮೆ ಆಗುವುದೇ ಇಲ್ಲ.
ಬಾಲ್ಯದಲ್ಲಿ ಕಣ್ಣಾಮುಚ್ಚಾಲೆ ಆಡಿದ ಗೆಳತಿಯನ್ನು ಹುಡುಕಲು ಒದ್ದಾಡುತ್ತಿರುವ ಪಾರ್ವತಿಯ ಒದ್ದಾಟಕ್ಕೆ ಉತ್ತರವಾಗಿ ಗಾಯತ್ರಿ ವಾಪಸ್ಸು ಬರುತ್ತಾಳಾ? ತನ್ನ ಗೆಳತಿ ತನಗೆ ಮತ್ತೆ ಸಿಗ್ತಾಳೆ ಎಂಬ ಪಾರ್ವತಿಯ ನಂಬಿಕೆ ಕೊನೆಗೂ ಫಲ ನೀಡುತ್ತಾ? ವರ್ಷಗಳ ಬಳಿಕ ಈ ಇಬ್ಬರು ಗೆಳತಿಯರು ಮತ್ತೆ ಒಂದಾಗುತ್ತಾರಾ? ಅವರ ಅನನ್ಯ ಸ್ನೇಹಕ್ಕೆ ವಿಧಿ ಯಾವ ಹೊಸ ತಿರುವು ನೀಡಲಿದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ ‘ಗೆಳತಿ ಗಾಯತ್ರಿ’ ಸಂಚಿಕೆಗಳು ಮೂಡಿಬರಲಿವೆ.
ಇದನ್ನೂ ಓದಿ: ಗೆಳತಿ ಗಾಯತ್ರಿ; ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಂಬ್ಯಾಕ್; ಪ್ರೋಮೋ ರಿಲೀಸ್
ಯಾವ ಪಾತ್ರ ಯಾರಿಗೆ?
ಈ ಧಾರಾವಾಹಿಯಲ್ಲಿ ಪಾರ್ವತಿಯಾಗಿ ವೈಷ್ಣವಿ ಗೌಡ ಅಭಿನಯಿಸುತ್ತಿದ್ದಾರೆ. ಗಾಯತ್ರಿಯಾಗಿ ಕೃತಿಕಾ ನಟಿಸುತ್ತಿದ್ದಾರೆ. ನಾಗಾರ್ಜುನ ಅವರು ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಪದ್ಮಿನಿ ಮತ್ತು ರಾಘು ಅವರು ಕೂಡ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ‘ಶ್ರೀ ಜೈ ಮಾತಾ ಕಂಬೈನ್ಸ್’ ಮೂಲಕ ಜೆ. ಜಯಮ್ಮ, ಮಿಲನ ಪ್ರಕಾಶ್ ಮತ್ತು ತಶ್ವಿನಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಯಶವಂತ ಪಾಂಡು ನಿರ್ದೇಶನ, ಅನಂತ ಗೌಡ ಅವರ ಛಾಯಾಗ್ರಹಣ, ವಿಕಾಸ ನೇಗಿಲೋಣಿ ಅವರ ಚಿತ್ರಕಥೆ, ಅಭಿಜ್ಞಾ ಅವರ ಸಂಭಾಷಣೆಯಲ್ಲಿ ಈ ಧಾರಾವಾಹಿ ಮೂಡಿಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




