ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್​ಗೆ ಜಾಮೀನು, ಬಿಡುಗಡೆ ಅನುಮಾನ

Actress Ranya Rao: ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿದ್ದ ನಟಿ ರನ್ಯಾ ರಾವ್​​ಗೆ ವಿಶೇಷ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಆದರೂ ಸಹ ನಟಿಯ ಬಿಡುಗಡೆ ಅಸಾಧ್ಯ ಎನ್ನಲಾಗುತ್ತಿದೆ. ರನ್ಯಾ ರಾವ್​ಗೆ ಜಾಮೀನು ದೊರೆತರೂ ಬಿಡುಗಡೆ ಏಕಿಲ್ಲ? ಇಲ್ಲಿದೆ ನೋಡಿ ವಿವರವಾದ ಮಾಹಿತಿ...

ಚಿನ್ನ ಕಳ್ಳಸಾಗಣೆ: ನಟಿ ರನ್ಯಾ ರಾವ್​ಗೆ ಜಾಮೀನು, ಬಿಡುಗಡೆ ಅನುಮಾನ
Ranya Rao

Updated on: May 21, 2025 | 11:19 AM

ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ನಟಿ ರನ್ಯಾ ರಾವ್​​ಗೆ (Ranya Rao) ಜಾಮೀನು ದೊರೆತಿದೆ. ಬೆಂಗಳೂರಿನ ವಿಶೇಷ ನ್ಯಾಯಾಲಯವು ನಟಿ ರನ್ಯಾ ರಾವ್​ಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಅಕ್ರಮವಾಗಿ ಚಿನ್ನ ಸಾಗಣೆ ಮಾಡುವ ಸಮಯದಲ್ಲಿ ನಟಿ ರನ್ಯಾ ರಾವ್ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾರ್ಚ್ 3 ರಂದು ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿತ್ತು. 14.80 ಕೆಜಿ ಚಿನ್ನದೊಟ್ಟಿಗೆ ನಟಿ ಸಿಕ್ಕಿ ಬಿದ್ದಿದ್ದರು. ಜಾಮೀನು ದೊರೆತಿದ್ದರೂ ಸಹ ನಟಿಯ ಬಿಡುಗಡೆ ಅನುಮಾನವಾಗಿದೆ.

ರನ್ಯಾ ರಾವ್ ಅವರ ವಿಚಾರಣೆ ವೇಳೆ ಹಲವು ಮಹತ್ವದ ವಿಷಯಗಳು ಬಹಿರಂಗಗೊಂಡಿದ್ದವು. ಐಪಿಎಸ್ ಅಧಿಕಾರಿಯ ಪುತ್ರಿಯಾಗಿರುವ ರನ್ಯಾ ರಾವ್, ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ವಿಷಯ ಬಹಿರಂಗವಾಗಿತ್ತು. ದುಬೈ ಮೂಲಕ ನಟಿ ಕೋಟ್ಯಂತರ ಮೌಲ್ಯದ ಚಿನ್ನವನ್ನು ಹಲವು ಬಾರಿ ಸಾಗಣೆ ಮಾಡಿದ್ದರು ಎಂಬ ವಿಷಯವೂ ಬಹಿರಂಗವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ರನ್ಯಾರ ಗೆಳೆಯ, ತೆಲುಗು ನಟ ತರುಣ್ ರಾಜು ಹಾಗೂ ಬಳ್ಳಾರಿಯ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಅನ್ನು ಬಂಧಿಸಲಾಗಿತ್ತು.

ನಟಿ ರನ್ಯಾ ರಾವ್ ಅವರು ತಮ್ಮ ಬಂಧನ ಆದಾಗಿನಿಂದಲೂ ಜಾಮೀನಿಗೆ ಪ್ರಯತ್ನಿಸುತ್ತಲೇ ಇದ್ದರು. ಮೊದಲಿಗೆ ಮಾರ್ಚ್ 14ರಂದು ಅರ್ಜಿ ಸಲ್ಲಿಸಿದ್ದರು, ಬಳಿಕ ಮಾರ್ಚ್ 27ರಂದು ವಿಶೇಷ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರಾದರೂ, ಅವು ತಿರಸ್ಕೃತಗೊಂಡಿದ್ದವು. ಬಳಿಕ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು. ಏಪ್ರಿಲ್ 26ರಂದು ಅವರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತರುಣ್ ರಾಜು ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಅದು ಸಹ ತಿರಸ್ಕೃತಗೊಂಡಿತ್ತು. ಇದೀಗ ವಿಶೇಷ ನ್ಯಾಯಾಲಯದಲ್ಲಿ ರನ್ಯಾಗೆ ಜಾಮೀನು ದೊರೆತಿದೆ.

ಇದನ್ನೂ ಓದಿ:ನಟಿ ರನ್ಯಾ ರಾವ್ ವಿರುದ್ಧ ಕಾಫಿಪೊಸಾ, ಜಾಮೀನು ಆಸೆಗೆ ತಣ್ಣೀರು?

ಆದರೆ ರನ್ಯಾ ರಾವ್ ಬಿಡುಗಡೆ ಅನುಮಾನ ಎನ್ನಲಾಗುತ್ತಿದೆ. ರನ್ಯಾ ರಾವ್ ಅವರನ್ನು ಬಂಧಿಸಿದ್ದ ಡಿಆರ್​ಐ ರನ್ಯಾ ರಾವ್ ಮತ್ತು ಆಕೆಯ ಸಹಚರರ ವಿರುದ್ಧ ಕಠಿಣವಾದ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ನಿಯಂತ್ರಣ ಕಾಯ್ದೆ ಕಾಫೆಪೊಸಾ (COFEPOSA) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಇದೊಂದು ಕಠಿಣವಾದ ಕಾಯ್ದೆಯಾಗಿದ್ದು, ಈ ಕಾಯ್ದೆಯ ಅಡಿ ದೂರು ದಾಖಲಾದರೆ ಜಾಮೀನು ನೀಡಲು ಸಾಧ್ಯವಿಲ್ಲ. ಒಂದೊಮ್ಮೆ ಆರೋಪಿಗಳಿಗೆ ಬೇರೆ ಪ್ರಕರಣಗಳಲ್ಲಿ ಜಾಮೀನು ದೊರೆತರೂ ಸಹ ಅವರ ಬಿಡುಗಡೆ ಸಾಧ್ಯವಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ