ಅದಿತಿ ಪ್ರಭುದೇವ (Aditi Prabhudeva) ಮತ್ತು ಪವನ್ ತೇಜ್ ಮುಖ್ಯ ಪಾತ್ರದಲ್ಲಿ ನಟಿಸಿರುವ “ಅಲೆಕ್ಸಾ” ಸಿನಿಮಾದ ಟೀಸರ್ ರಿದಂ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿದೆ. ಬಿಡುಗಡೆ ಆಗಿದೆ. ಜೀವ ನಿರ್ದೇಶಿಸಿರುವ ಈ ಸಿನಿಮಾವನ್ನು ವಿ.ಚಂದ್ರು ನಿರ್ಮಾಣ ಮಾಡಿದ್ದಾರೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್ ಜಾನರ್ ಅನ್ನು ಒಳಗೊಂಡಿರುವ ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ಹಿಂದೆಂದೂ ಕಾಣದ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಮರ್ಡರ್ ಮಿಸ್ಟರಿ ಸಿನಿಮಾ ಇದಾಗಿದ್ದು. ನಿರ್ಮಾಪಕರು ಕತೆಯನ್ನು ಬಹುವಾಗಿ ಇಷ್ಟಪಟ್ಟು ನಿರ್ಮಾಣಕ್ಕೆ ಮುಂದಾದರು. ತನಿಖಾ ಅಧಿಕಾರಿ ಪಾತ್ರದಲ್ಲಿ ಅದಿತಿ ಪ್ರಭುದೇವ ನಟಿಸಿದ್ದಾರೆ. ನಟ ಪವನ್ ತೇಜ್ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಔಷಧ ಉದ್ಯಮದ ಮಾಫಿಯಾ ಬಗ್ಗೆ ಸಹ ಸಂದೇಶವನ್ನು ಈ ಸಿನಿಮಾ ಒಳಗೊಂಡಿದೆ. ಈ ಸಿನಿಮಾದ ಎರಡನೇ ಭಾಗವನ್ನು ಸಹ ಚಿತ್ರೀಕರಿಸಿ ತೆರೆಗೆ ತರುವ ಆಲೋಚನೆ ಇದೆ. ಮೈಸೂರು, ಮಡಿಕೇರಿ ಮುಂತಾದ ಕಡೆ ಶೂಟಿಂಗ್ ಮಾಡಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಫೈಟ್ ದೃಶ್ಯಗಳು ಈ ಸಿನಿಮಾದಲ್ಲವೆ. ಅಕ್ಟೋಬರ್ ಅಂತ್ಯಕ್ಕೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ದೇಶಕ ಜೀವ ಹೇಳಿದ್ದಾರೆ.
ಪೊಲೀಸ್ ಅಧಿಕಾರಿ ಆಗಬೇಕು ಎಂಬ ಕನಸು ಚಿಕ್ಕಂದಿನಿಂದಲೂ ಇತ್ತು. ಅದು ಈಡೇರಿರಲಿಲ್ಲ. ನಿರ್ದೇಶಕ ಜೀವ ನೀವು ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರ ಮಾಡಲಿದ್ದೀರಿ ಅಂದ ಕೂಡಲೇ ಸಿನಿಮಾ ಒಪ್ಪಿಕೊಂಡೆ. ಸಾಹಸ ದೃಶ್ಯಗಳಲ್ಲೂ ನಟಿಸಬೇಕು ಎಂಬ ಬಯಕೆಯೂ ಇತ್ತು. ಅದು ಸಹ ಈ ಸಿನಿಮಾದಿಂದಾಗಿ ನನಸಾಗಿದೆ. ಸಾಹಸ ನಿರ್ದೇಶಕ ರವಿವರ್ಮಾ ಹಾಗೂ ಮಾಸ್ ಮಾದ ಅವರು ನಾನು ನಟಿಸಿರುವ ಆಕ್ಷನ್ ದೃಶ್ಯಗಳನ್ನು ಸಂಯೋಜನೆ ಮಾಡಿದ್ದಾರೆ. ಸಾಹಸ ದೃಶ್ಯಗಳು ಬಹಳ ಚೆನ್ನಾಗಿ ಮೂಡಿಬಂದಿವೆ. ಮಾಲಾಶ್ರೀ ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಯಾವುದೇ ಡ್ಯೂಪ್ ಇಲ್ಲದೆ ನಾನೇ ಫೈಟ್ ದೃಶ್ಯಗಳಲ್ಲಿ ಪಾಲ್ಗೊಂಡಿದ್ದೇನೆ ಎಂದರು ನಟಿ ಅದಿತಿ ಪ್ರಭುದೇವ.
ಗಂಡ – ಹೆಂಡತಿ ಕೊಲೆ ಆಗಿರುತ್ತದೆ. ಆ ಕೊಲೆಯನ್ನು ಯಾರು ಮಾಡಿದ್ದಾರೆ, ಏಕೆ ಮಾಡಿದ್ದಾರೆ ಎಂಬ ತನಿಖೆಯ ಸುತ್ತ ಸಿನಿಮಾದ ಕತೆ ಸುತ್ತುತ್ತದೆ. ಅದಿತಿ ಪ್ರಭುದೇವ ಅವರ ಜೊತೆ ನಟಿಸಬೇಕೆಂಬ ಬಯಕೆ ಇತ್ತು, ಅದು ಈ ಸಿನಿಮಾದಲ್ಲಿ ಪೂರ್ಣವಾಗಿದೆ ಎಂದಿದ್ದಾರೆ ನಟ ಪವನ್ ತೇಜ್. ನಿರ್ದೇಶಕ ಜೀವ ನರೇಟ್ ಮಾಡಿದ ಸ್ಟೋರಿ ಮೆಚ್ಚುಗೆಯಾಯ್ತು ಹಾಗಾಗಿ ಸಿನಿಮಾಕ್ಕೆ ಬಂಡವಾಳ ಹೂಡಿದೆ. ಸದ್ಯದಲ್ಲೇ ಸಿನಿಮಾಬಿಡುಗಡೆ ಆಗಲಿದೆ. ಎಲ್ಲರೂ ಸಿನಿಮಾ ನೋಡಿ, ಪ್ರೋತ್ಸಾಹ ನೀಡಿ ಎಂದು ನಿರ್ಮಾಪಕ ವಿ.ಚಂದ್ರು ಮನವಿ ಮಾಡಿದರು. ಸಿನಿಮಾದಲ್ಲಿ ನಟಿಸಿರುವ ಇನ್ನೂ ಕೆಲವು ಕಲಾವಿದರು , ತಂತ್ರಜ್ಞರು ಹಾಗೂ ಚಿತ್ರದ ವಿತರಕರಾದ ರಿಲಯನ್ಸ್ ಎಂಟರ್ಟೈನ್ಮೆಂಟ್ ಅವರು “ಅಲೆಕ್ಸಾ” ಸಿನಿಮಾ ಬಗ್ಗೆ ಮಾತನಾಡಿದರು. ಪವನ್ ತೇಜ್, ಅದಿತಿ ಪ್ರಭುದೇವ, ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:06 pm, Fri, 22 September 23